ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಸೆಂಟರ್ ಫಾರ್ ಇಂಟರ್‌ಕಲ್ಚರಲ್ ಸ್ಟಡೀಸ್ ಆ್ಯಂಡ್ ಡಯಲಾಗ್ ಘಟಕವು ‘ಡಿಸರ್ನಿಂಗ್ ಇಂಡಿಯ: ಲಿವಿಂಗ್ ಕಲ್ಚರ್ಸ್ ಆಫ್ ತುಳುನಾಡು’ ಎಂಬ ಶೀರ್ಷಿಕೆಯಲ್ಲಿ ಆನ್‌ಲೈನ್ ಕೋರ್ಸ್ ಅನ್ನು ಆರಂಭಿಸುತ್ತಿದ್ದು ಇದರ ಉದ್ಘಾಟನೆ ಆಗಸ್ಟ್ 18 ಗುರುವಾರ ಸಂಜೆ 4:30 ಗಂಟೆಗೆ ಮಣಿಪಾಲದ ಮಾಹೆ ಮುಖ್ಯ ಕಚೇರಿಯ ಅಂಗಣದಲ್ಲಿ ನಡೆಯಲಿದೆ.
ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಬಳಗದ ಸಂಸ್ಥೆಗಳ ಅಧ್ಯಕ್ಷ ಡಾ. ರಂಜನ್ ಪೈ, ಮಾಹೆಯ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ಕುಲಪತಿ ಲೆ, ಜ. [ಡಾ.] ಎಂ. ಡಿ. ವೆಂಕಟೇಶ್, ಕುಲಸಚಿವ ಡಾ. ನಾರಾಯಣ ಸಭಾಹಿತ್ ಅವರ ಉಪಸ್ಥಿತಿಯಲ್ಲಿ ಈ ಆನ್‌ಲೈನ್ ಕೋರ್ಸ್ ಉದ್ಘಾಟನೆ ನಡೆಯಲಿದೆ.
ಉಡುಪಿಯ ಜನಪದ ಬದುಕಿನ ಸಂಭ್ರಮವನ್ನು ಪ್ರತಿನಿಧಿಸುವ ಕಲೆಯಾಗಿರುವ ‘ಹುಲಿವೇಷ ಕುಣಿತ’ವನ್ನು ಅಶೋಕ್ ಕಾಡುಬೆಟ್ಟು ಬಳಗದವರು ಪ್ರಸ್ತುತ ಪಡಿಸಲಿದ್ದಾರೆ.
ಸ್ಥಳೀಯ ಸಂಸ್ಕೃತಿಯ ಅಧ್ಯಯನ: ಆನ್‌ಲೈನ್ ಕೋರ್ಸ್
ಸ್ಥಳೀಯ ಸಂಸ್ಕೃತಿಯ ಮೂಲಕ ಸಮಗ್ರ ಭಾರತೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದು ಈ ಅಭ್ಯಾಸಕ್ರಮದ ಆಶಯವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಮಣಿಪಾಲವು ತುಳು ಪರಿಸರದಲ್ಲಿ ಇರುವ ನಗರವಾಗಿದೆ. ಮಣಿಪಾಲದ ಸುತ್ತಮುತ್ತಲಿನ ಜನಪದವನ್ನು ಅರ್ಥಮಾಡಿಕೊಳ್ಳುವ ಮೂಲಕ ಇಡೀ ಭಾರತೀಯ ಸಂಸ್ಕೃತಿಯನ್ನು ಅರಿತುಕೊಳ್ಳುವ ಪ್ರಯತ್ನವಾಗಿ ಈ ಆನ್‌ಲೈನ್ ಕೋರ್ಸ್ ಮಹತ್ವ ಪಡೆಯುತ್ತದೆ, ಭಾರತೀಯತೆ ಎಂಬುದು ಸಂಸ್ಕೃತಿಯ ಸ್ಥೂಲ ರೂಪವಾದರೆ, ತುಳುಸಂಸ್ಕೃತಿಯನ್ನು ಒಳಗೊಂಡಿರುವ ಮಣಿಪಾಲದ ಪರಿಸರವು ಸಂಸ್ಕೃತಿಯ ಸೂಕ್ಷ್ಮ ರೂಪವಾಗಿದೆ. ಸಮಕಾಲೀನ ಸಂದರ್ಭದಲ್ಲಿ ತುಳು ಜನಪದರ ಜೀವನದ ಅವಿಭಾಜ್ಯ ಭಾಗಗಳಂತಿರುವ ಯಕ್ಷಗಾನ, ಭೂತಾರಾಧನೆ, ನಾಗಾರಾಧನೆ ಮತ್ತು ಕಂಬಳ ಪ್ರಕಾರಗಳನ್ನು ಈ ಆನ್‌ಲೈನ್ ಕೋರ್ಸ್‌ನ ಮೊದಲ ಹಂತದಲ್ಲಿ ಅಧ್ಯಯನಕ್ಕೆ ಪರಿಗಣಿಸಲಾಗಿದೆ.
ಕಲೆಗಳ ಆರಾಧನಾತ್ಮಕ ಮತ್ತು ಮನೋರಂಜನಾತ್ಮಕ ಆಶಯಗಳ ನಡುವಿನ ಸಂಬಂಧಗಳನ್ನು ಶೈಕ್ಷಣಿಕ ನೆಲೆಯಲ್ಲಿ ವಿಶ್ಲೇಷಿಸುವ ಈ ಆನ್‌ಲೈನ್ ಕೋರ್ಸ್‌ನಲ್ಲಿ ಆಕರ್ಷಕವಾದ ವೀಡಿಯೋ ಸಾಕ್ಷ್ಯಚಿತ್ರಗಳನ್ನು ಪ್ರಸ್ತುತಪಡಿಸಲಾಗುತ್ತಿದೆ. ಹಿರಿಯ ಕಲಾವಿದರ ಅನುಭವಗಳ ದಾಖಲೆಗಳಿವೆ, ವಿಷಯ ಜ್ಞರ ಉಪನ್ಯಾಸಗಳ ಸಂಗ್ರಹವಿದೆ.
ಪ್ರತಿ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಹುಲಿವೇಷ ಕುಣಿತದ ಪ್ರದರ್ಶನ ಏರ್ಪಡುತ್ತದೆ. ಹುಲಿವೇಷ ಕುಣಿತ ಎಂಬುದು ಉಡುಪಿ-ಮಣಿಪಾಲ ಅವಳಿ ನಗರಗಳಲ್ಲಿ ಜೀವನೋತ್ಸಾಹವನ್ನು ಉದ್ದೀಪಿಸುವ ಕಲೆಯಾಗಿದೆ. ಹಾಗಾಗಿಯೇ, ಉಡುಪಿಗೆ ಸನಿಹ ಇರುವ ವಿಶ್ವಖ್ಯಾತಿಯ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಈ ಮಣಿಪಾಲದಲ್ಲಿ ಹುಲಿವೇಷ ಕುಣಿತವನ್ನು ಆಯೋಜಿಸಲಾಗುತ್ತಿದೆ.
ಡಿಸರ್ನಿಂಗ್ ಇಂಡಿಯ : ಲಿವಿಂಗ್ ಕಲ್ಚರ್ಸ್ ಆಫ್ ತುಳುನಾಡು ಆನ್‌ಲೈನ್ ಕೋರ್ಸ್‌ನಲ್ಲಿ ಭಾಗವಹಿಸಲು ಇಚ್ಛಿಸುವವರು ಈ ಕೆಳಗಿನ ವಿಳಾಸದ ಮೂಲಕ ಸಂಪರ್ಕಿಸಬಹುದು.
ಡಾ ಪ್ರವೀಣ್ ಶೆಟ್ಟಿ
ಸಂಯೋಜಕ
ಇಂಟರ್ ಕಲ್ಚರಲ್ ಸ್ಟಡೀಸ್ ಮತ್ತು ಡೈಲಾಗ್ ಸೆಂಟರ್
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)
ಮಣಿಪಾಲ 576104
ದೂರವಾಣಿ: +91 9481578358