ಮೂಡ್ಲಕಟ್ಟೆಯಲ್ಲಿ ‘ಐಎಂಜೆಐಆರ್’ ಸಂಶೋಧನಾ ಸಂಸ್ಥೆ ಲೋಕಾರ್ಪಣೆ ಮತ್ತು ‘ಕ್ಯೂ-ಪಿಯರ್ 2026’ ರಾಷ್ಟ್ರೀಯ ಶೃಂಗಸಭೆ

ಕುಂದಾಪುರ: ತಾಂತ್ರಿಕ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿರುವ ಮೂಡ್ಲಕಟ್ಟೆಯ ಐಎಂಜೆ ಶಿಕ್ಷಣ ಸಂಸ್ಥೆಗಳ (IMJ Institutions) ಆವರಣದಲ್ಲಿ ಐಎಂಜೆ ಇನ್‌ಸ್ಟಿಟ್ಯೂಟ್ ಆಫ್ ರಿಸರ್ಚ್ (IMJIR) ನ ಉದ್ಘಾಟನಾ ಸಮಾರಂಭವು ಯಶಸ್ವಿಯಾಗಿ ಜರುಗಿತು.

ಈ ಐತಿಹಾಸಿಕ ಸಂದರ್ಭದ ಅಂಗವಾಗಿ “ಕ್ವಾಂಟಮ್ ಕಂಪ್ಯೂಟೇಶನ್, ಪ್ರಿಸಿಶನ್ ಇನ್ಸ್ಟ್ರುಮೆಂಟೇಶನ್ ಮತ್ತು ಎಮರ್ಜಿಂಗ್ ರಿಸರ್ಚ್ ಇನ್ಫ್ರಾಸ್ಟ್ರಕ್ಚರ್ಸ್” (Q-PIER 2026) ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ಮಟ್ಟದ ಶೃಂಗಸಭೆಯನ್ನು ಏರ್ಪಡಿಸಲಾಗಿದೆ.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಟಿಐಎಫ್‌ಆರ್ (TIFR) ಹೈದರಾಬಾದ್ ಇದರ ನಿರ್ದೇಶಕರಾದ ಪ್ರೊ. ಎಂ. ಕೃಷ್ಣಮೂರ್ತಿ, ಇವರು ಕ್ವಾಂಟಮ್ ಕಂಪ್ಯೂಟೇಶನ್ ಈ‌ ಒಂದು ಕ್ಷೇತ್ರದ ಪ್ರಾಮುಖ್ಯತೆಯನ್ನು ತಿಳಿಸಿದಲ್ಲದೆ ಪ್ರಸಕ್ತ ಅನ್ವೇಷಣಾ ವಲಯದಲ್ಲಿ ಇದರ ಕ್ರಾಂತಿಯ ಬಗ್ಗೆ ಒತ್ತಿ ಹೇಳಿದರು ಮತ್ತು ಮೂಡ್ಲಕಟ್ಟೆಯಲ್ಲಿ ಈ ಸಂಶೋಧನಾ ಕ್ಷೇತ್ರ ಸ್ಥಾಪಿಸಿರುವುದು ನಿಜವಾಗಿಯೂ ಶ್ಲಾಘನೀಯ ಎಂದು ಅಬಿನಂದಿಸಿದರು. ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ ಪ್ರೊಪೆಸರ್ ಸಪ್ತರ್ಷಿ ಚೌಧರಿ ಅವರು ಮಾತನಾಡಿ ನ್ಯಾಷನಲ್ ಕ್ವಾಂಟಮ್ ಮಿಶನ್ ಬಗ್ಗೆ ವಿವರಿಸಿ ಭಾರತದಲ್ಲಿ ಪ್ರಸ್ತುತ ಕ್ವಾಂಟಮ್ ಕಂಪ್ಯೂಟ್ ಇಕೋ ಸಿಸ್ಟಮ್ ಇದರ ಸಮಗ್ರ ಪರಿಚಯ ನೀಡಿದರಲ್ಲದೆ ಮೂಡ್ಲಕಟ್ಟೆಯಲ್ಲಿ ಉದ್ಘಾಟನೆಗೊಂಡಿರುವ ವಿಶೇಷವಾದ ಕ್ವಾಂಟಮ್ ಕಂಪ್ಯೂಟರ್ ರಿಸರ್ಚ್ ಸೆಂಟರ್ ಬಗ್ಗೆ ಪ್ರಶಂಸಿಸಿದರು.

ಗೌರವ ಅತಿಥಿಯಾಗಿ ಆಗಮಿಸಿದ, ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಶರತ್ ಅನಂತಮೂರ್ತಿ ಅವರು ಮಾತನಾಡಿ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯ ಅಗತ್ಯವನ್ನು ಪ್ರತಿಪಾದಿಸಿದರು. ಪರೀಕ್ಷೆಗಳು ಕೇವಲ ನೆನಪಿನ ಶಕ್ತಿಯನ್ನು ಪರೀಕ್ಷಿಸುವ ವೇದಿಕೆಯಾಗದೆ, ವಿದ್ಯಾರ್ಥಿಗಳ ಅನ್ವಯಿಕ ಜ್ಞಾನವನ್ನು (Application Skills) ಅಳೆಯುವಂತಾಗಬೇಕು ಎಂದು ಅವರು ಒತ್ತಿ ಹೇಳಿದರು. ಇದೇ ಸಂದರ್ಭದಲ್ಲಿ, ಪ್ರತಿಭಾವಂತ ಆದರೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಸಂಶೋಧನೆಯ ಬಗ್ಗೆ ಸಮಾಜ ಹಾಗೂ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಜವಾಬ್ದಾರಿ ವಹಿಸಬೇಕಾದ ಅಗತ್ಯತೆಯ ಕುರಿತು ಅವರು ಆಳವಾದ ಕಳಕಳಿಯನ್ನು ವ್ಯಕ್ತಪಡಿಸಿದರು.

ಸಂಸ್ಥೆಯ ಅಧ್ಯಕ್ಷರಾದ ಸಿದ್ಧಾರ್ಥ ಜೆ ಶೆಟ್ಟಿ ಅವರು ತಮ್ಮ ಅಧ್ಯಕ್ಶೀಯ ನುಡಿಯಲ್ಲಿ ಸಂಸ್ಥೆಯ ಹೊಸ ಮೈಲಿಗಲ್ಲಾಗಿ ರಿಸರ್ಚ್ ಸೆಂಟರ್ ಸ್ಥಾಪಿಸಿರುವುದು ತಮಗೆ ಹೆಮ್ಮೆ ತಂದಿದೆ, ಇದರ ಸದುಪಯೋಗ ಪಡೆದುಕೊಂಡು ತಮ್ಮ ಶೈಕ್ಷಣಿಕ ಅಭಿವೃದ್ಧಿಯತ್ತ ಹೆಚ್ಚು ಗಮನವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆನೀಡಿದರು. ಇದೇ ಸಂದರ್ಭದಲ್ಲಿ ಖ್ಯಾತ ಪರಮಾಣು ಭೌತ ಶಾಸ್ತ್ರಜ್ನೆ ಡಾ ಪುಷ್ಪಾ ಎಮ್ ರಾವ್ ಇವರನ್ನು ಸನ್ಮಾನಿಸಲಾಯಿತು.

ಐ ಎಮ್ ಜೆ ಐ ಆರ್ ನಿರ್ದೇಶಕರಾದ ಡಾ. ಸತ್ಯಜಿತ್ ಇವರು ರಿಸರ್ಚ್ ಸೆಂಟರ್ ಧ್ಯೇಯೋದ್ಧೇಶಗಳ ಬಗ್ಗೆ ಮಾತನಾಡಿದರು. ಸಂಸ್ಥೆಯ ಅಕಾಡಮಿಕ್ ನಿರ್ದೇಶಕರಾದ ಡಾ. ಎಸ್ ಎನ್.ಭಟ್ ಸ್ವಾಗತಿಸಿ, ಸಂಸ್ಥೆಯ ಬ್ರ್ಯಾಂಡ್ ಬಿಲ್ಡಿಂಗ್ ಡೈರೆಕ್ಟರ್ ಆಗಿರುವ ಡಾ. ರಾಮಕೃಷ್ಣ ಹೆಗಡೆ ವಂದಿಸಿದರು. ಪ್ರಾಧ್ಯಾಪಕಿ ಡಾ. ನಿಖಿಲ ಪೈ ಕಾರ್ಯಕ್ರಮ ನಿರೂಪಿಸಿದರು.

ನೂತನವಾಗಿ ಉದ್ಘಾಟನೆಗೊಂಡ ಐಎಂಜೆ ಇನ್‌ಸ್ಟಿಟ್ಯೂಟ್ ಆಫ್ ರಿಸರ್ಚ್ (IMJIR), ಕ್ವಾಂಟಮ್ ತಂತ್ರಜ್ಞಾನ ಮತ್ತು ಸುಧಾರಿತ ಸಂಶೋಧನೆಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿಕೊಡುವ ಗುರಿಯನ್ನು ಹೊಂದಿದೆ.

ಏಪ್ರಿಲ್ 13 ಮತ್ತು 14 ರಂದು ನಡೆಯಲಿರುವ ಈ ರಾಷ್ಟ್ರೀಯ ಶೃಂಗಸಭೆಯಲ್ಲಿ ದೇಶದ ವಿವಿಧ ಭಾಗಗಳಿಂದ ವಿಜ್ಞಾನಿಗಳು ಮತ್ತು ತಾಂತ್ರಿಕ ತಜ್ಞರು ಭಾಗವಹಿಸಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.ಸಂಸ್ಥೆಯ ಈ “ನೆಲ ಮೂಲ, ಜಗ ದಗಲ” (Rural Roots, Global Reach) ಎಂಬ ಧ್ಯೇಯವಾಕ್ಯಕ್ಕೆ ಪೂರಕವಾಗಿ ಈ ಕಾರ್ಯಕ್ರಮವು ಮೂಡಿಬಂದಿದೆ. ಸಮಾರಂಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿ, ಬೋಧಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.