ಉಡುಪಿ, ಬಂಟಕಲ್: ಬಂಟಕಲ್ನ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿ ಕೇಂದ್ರಿತ ನಾಲ್ಕು ಮಹತ್ವದ ಹೊಸ ಸೌಲಭ್ಯಗಳಾದ ಇಮ್ಯಾಜಿನೇಟರ್ಸ್ ಗ್ಯಾಲರಿ, ಕ್ರಿಕೆಟ್ ನೆಟ್ ಅಭ್ಯಾಸ ಪಿಚ್, ಮೌಲ್ಯಮಾಪನ ಕೇಂದ್ರ ಮತ್ತು ಬಹು ನಿರೀಕ್ಷಿತ ವಿದ್ಯಾರ್ಥಿ ಚಟುವಟಿಕಾ ಕೇಂದ್ರವನ್ನು ಶ್ರೀ ಸೋದೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ದಿನಾಂಕ 13 ಜನವರಿ 2026 ರಂದು ಉದ್ಘಾಟಿಸಿದರು.

ಇದು ಸಂಸ್ಥೆಯ ಬೆಳವಣಿಗೆಯ ಮೈಲುಗಲ್ಲಿನ ಭಾಗವಾಗಿದೆ. ಇಮ್ಯಾಜಿನೇಟರ್ಸ್ ಗ್ಯಾಲರಿಯು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ತಯಾರಿಸಿದ ಅತ್ಯುತ್ತಮ ಕಲಾಕೃತಿಗಳು, ಉತ್ಪನ್ನಗಳು, ಚಿತ್ರಕಲೆಗಳು, ಉಪಕರಣಗಳು ಮತ್ತು ನವೀನ ಯೋಜನೆಗಳನ್ನು ಸಾರ್ವಜನಿಕರಿಗೆ ಇಲ್ಲಿ ಪ್ರದರ್ಶಿಸುವ ಉದ್ದೇಶವನ್ನು ಹೊಂದಿದೆ. ಇದು ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಕಲೆ ಮತ್ತು ತಾಂತ್ರಿಕ ಕೌಶಲ್ಯವನ್ನು ಪ್ರೋತ್ಸಾಹಿಸುವ ವೇದಿಕೆಯಾಗಿದೆ.

ಸಂಸ್ಥೆಯ ಮೌಲ್ಯಮಾಪನ ಕೇಂದ್ರವು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಪರೀಕ್ಷಾ ಚಟುವಟಿಕೆಗೆ ಸಂಬಂಧಿಸಿದ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಒದಗಿಸಲಿದೆ.ಕ್ರಿಕೆಟ್ ನೆಟ್ ಅಭ್ಯಾಸ ಪಿಚ್ ಇದು ಸೋದೆ ಸಮೂಹ ಸಂಸ್ಥೆಗಳ ಪ್ರತೀಭಾವಂತ ಕ್ರಿಕೆಟ್ ಆಟಗಾರರಿಗೆ ವೃತ್ತಿಪರ ಕ್ರಿಕೆಟ್ ಅಭ್ಯಾಸಕ್ಕೆ ವೇದಿಕೆಯನ್ನು ಒದಗಿಸುತ್ತದೆ.

ಆಧುನಿಕ ಸೌಲಭ್ಯಗಳಿಂದ ಕೂಡಿದ ವಿದ್ಯಾರ್ಥಿ ಚಟುವಟಿಕಾ ಕೇಂದ್ರವು ವಿದ್ಯಾರ್ಥಿಗಳ ಪಠ್ಯೇತರ ಮತ್ತು ಸಹ ಪಠ್ಯೇತರ ಚಟುವಟಿಕೆಯನ್ನು ನಡೆಸುವ ಉದ್ದೇಶದಿಂದ ಮತ್ತು ಯೋಜನೆಗಳ ಅಭಿವೃದ್ಧಿಗೆ ಅಗತ್ಯ ಇರುವ ಸಂಪನ್ಮೂಲಗಳು ಹಾಗೂ ವಿಶಾಲವಾದ ಕೊಠಡಿಯನ್ನು ನಿರ್ಮಿಸಲಾಗಿದೆ.ಇಲ್ಲಿ ವಿದ್ಯಾರ್ಥಿಗಳು ನವೀನ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು, ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಹಾಗೂ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆಅಭ್ಯಾಸ ನಡೆಸಲು ಅವಕಾಶ ದೊರೆಯಲಿದೆ.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ವಹಿಸಿ ಮಾತನಾಡಿ ತಂತ್ರಜ್ಞಾನ ಯುಗದಲ್ಲಿಮುಂದುವರಿಯಲು ಶೈಕ್ಷಣಿಕ ಮೇರುಗತಿಯ ಜೊತೆಗೆ ಸಮಗ್ರ ವ್ಯಕ್ತಿತ್ವ ವಿಕಾಸದ ಅಗತ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಸೋದೆ ಸಮೂಹ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ರಾಧಾಕೃಷ್ಣ ಎಸ್ ಐತಾಳ್ ಇವರು ಮಾತನಾಡಿ ಈ ಹೊಸಸೌಲಭ್ಯಗಳು ವಿದ್ಯಾರ್ಥಿಗಳ ಪಠ್ಯೇತರ ಮತ್ತು ಸಹ ಪಠ್ಯೇತರ ಚಟುವಟಿಕೆಗಳ ಜೊತೆಗೆ ದೈಹಿಕ ಕ್ಷಮತೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಸೋದೆ ಸಮೂಹ ಸಂಸ್ಥೆಗಳ ಎಲ್ಲಾ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವದ ಸಮಗ್ರ ಅಭಿವೃದ್ಧಿಗಾಗಿ ಈ ಸೌಲಭ್ಯಗಳ ಪ್ರಯೋಜನ ಪಡೆಯಬಹುದೆಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್ ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ನಾಗರಾಜ್ ಭಟ್ ಇವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಶ್ರೀನಿವಾಸ ತಂತ್ರಿ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಹರೀಶ್ ಬೆಳ್ಮಣ್ ಮತ್ತು ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

















