ಉಡುಪಿ ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ , ಅಂಗವಿಕಲರ ಮತದಾನಕ್ಕೆ ಉತ್ತಮ ಸ್ಪಂದನೆ..!!

ಉಡುಪಿ: ಜಿಲ್ಲಾದ್ಯಂತ 80 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲರ ಮತದಾನ ಪ್ರಕ್ರಿಯೆ ಪೂರ್ಣ ಗೊಂಡಿದ್ದು, ಒಟ್ಟು ಶೇ.97 ಮಂದಿ ಮತಚಲಾಯಿಸಿದ್ದಾರೆ. ಬೈಂದೂರು, ಕುಂದಾಪುರ ಹಾಗೂ ಕಾರ್ಕಳದಲ್ಲಿ ಶೇ.98 ಮತದಾನವಾದರೆ ಉಡುಪಿ ಹಾಗೂ ಕಾಪುವಿನಲ್ಲಿ ಶೇ.97 ಮತದಾನವಾಗಿದೆ. ಬೈಂದೂರಿನಲ್ಲಿ 1209 ಮತದಾರರ ಪೈಕಿ 1179, ಕುಂದಾಪುರದಲ್ಲಿ 991 ಮಂದಿಯ ಪೈಕಿ 968, ಉಡುಪಿಯಲ್ಲಿ 902 ಮಂದಿಯ ಪೈಕಿ 874, ಕಾಪುವಿನಲ್ಲಿ 606 ಮಂದಿಯ ಪೈಕಿ 588, ಕಾರ್ಕಳದಲ್ಲಿ 1108 ಮಂದಿಯ ಪೈಕಿ 1083 ಸಹಿತ ಒಟ್ಟು 4816 ಮಂದಿ ಮತದಾರರ ಪೈಕಿ 4692 ಮಂದಿ ಮತಚಲಾಯಿಸಿದ್ದಾರೆ.

ಚಲಾವಣೆಯಾಗದ 124 ಮತಗಳ ಪೈಕಿ 55 ಮಂದಿ ನಿಧನ ಹೊಂದಿದವರಾಗಿದ್ದು, ಇನ್ನೂ ಮತ ಪಟ್ಟಿಯಿಂದ ಹೆಸರು ತೆಗೆದಿಲ್ಲ. 66 ಮಂದಿಯ ಮನೆಗೆ ಎರಡು ಬಾರಿ ಭೇಟಿ ನೀಡಿದರೂ ಅವರು ಲಭ್ಯವಿಲ್ಲದ ಕಾರಣ ಮತದಾನ ಸಾಧ್ಯವಾಗಿರಲಿಲ್ಲ. 3 ಮಂದಿಯ ಮನೆಗೆ ಹೋದರೂ ಅವರು ಮತಚಲಾಯಿಸಲು ಒಪ್ಪದ ಕಾರಣ ಬಾಕಿ ಉಳಿಸಲಾಗಿದೆ. ಬೈಂದೂರಿನಲ್ಲಿ 30, ಕುಂದಾಪುರ 23, ಉಡುಪಿ 28, ಕಾಪು 18, ಕಾರ್ಕಳದಲ್ಲಿ 25 ಮಂದಿ ಮತಚಲಾಯಿಸಿಲ್ಲ.

80 ವರ್ಷ ಮೇಲ್ಪಟ್ಟವರ ಪೈಕಿ 63 ಮಂದಿಯ ಮನೆಗೆ ಎರಡು ಬಾರಿ ಭೇಟಿ ನೀಡಿದರೂ ಅವರು ಲಭ್ಯರಿಲ್ಲದ ಕಾರಣ ಮತದಾನ ಸಾಧ್ಯವಾಗಲಿಲ್ಲ. 52 ಮಂದಿ ನಿಧನ ಹೊಂದಿದ್ದರು. ಬೈಂದೂರು, ಉಡುಪಿ ಹಾಗೂ ಕಾರ್ಕಳದಲ್ಲಿ ತಲಾ ಒಬ್ಬರು ಮತದಾನ ಮಾಡಲು ನಿರಾ ಕರಿಸಿದ್ದಾರೆ. ಇದರಿಂದಾಗಿ ಒಟ್ಟಾರೆ 118 ಮಂದಿ ಮತ ಚಲಾಯಿಸಿಲ್ಲ. 4,060 ಮಂದಿಯ ಪೈಕಿ 3,942 ಮಂದಿಯಷ್ಟೇ ಮತಚಲಾಯಿಸಿದ್ದಾರೆ.

ಅಂಗವಿಕಲರ ಮತದಾನದಲ್ಲಿ ಉಡುಪಿ ಹಾಗೂ ಕಾರ್ಕಳದಲ್ಲಿ ಶೇ.100 ಮತದಾನ ವಾಗಿದೆ. ಬೈಂದೂರಿನಲ್ಲಿ ಇಬ್ಬರು ಅಂಗವಿಕಲರು ಸಾವನ್ನಪ್ಪಿರುವ ಕಾರಣ 202 ಮಂದಿಯ ಪೈಕಿ 200 ಮಂದಿ ಮತ ಚಲಾಯಿಸಿ ಶೇ.99 ಮತಚಲಾವಣೆಯಾಗಿದೆ. ಕಾಪುವಿನಲ್ಲಿ ಮನೆ ಭೇಟಿ ವೇಳೆ ಯಾರೂ ಇಲ್ಲದ ಕಾರಣ ಒಬ್ಬರು ಮತಚಲಾಯಿಸಿಲ್ಲ. ಇಲ್ಲಿ ಚಲಾವಣೆಯಾದ ಒಟ್ಟು ಮತಗಳು ಶೇ.99. ಉಳಿದಂತೆ ಕುಂದಾಪುರದಲ್ಲಿ ಶೇ.98 ಮತದಾನವಾಗಿದೆ.