ಮಂಗಳೂರು: ಪ್ರಪ್ರಥಮ ಬಾರಿಗೆ ಮಂಗಳಮುಖಿಯರಿಂದ ದಸರಾ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ

ಮಂಗಳೂರು: ಇದೇ ಮೊದಲ ಬಾರಿಗೆ ಮೂವರು ಮಂಗಳಮುಖಿಯರಿಗೆ ದಸರಾ ಉತ್ಸವದಲ್ಲಿ ನೃತ್ಯಪ್ರದರ್ಶನ ನೀಡುವ ಅವಕಾಶ ದೊರೆತಿದೆ. ಬೋಳಾರದ ಹಳೇಕೋಟೆ ಶ್ರೀ ಮಾರಿಯಮ್ಮ ಗುಡಿಯಲ್ಲಿ ಸೋಮವಾರದಂದು ನಡೆದ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ‘ದೇವಾ ಶ್ರೀ ಗಣೇಶಾ’ ಎಂಬ ಹಾಡಿಗೆ ನೃತ್ಯ ಮಾಡುವ ಅವಕಾಶ ನೀಡಲಾಗಿದೆ.

ಪ್ರಿಯಾ ಶ್ಯಾಮ್, ಸಂಧ್ಯಾ ಮತ್ತು ರೇಖಾ ಎನ್ನುವ ಮೂವರು ಮಂಗಳಮುಖಿಯರು ಬಾಲಿವುಡ್ ಶೈಲಿಯ ನೃತ್ಯವನ್ನು ಸುಸಾನ್ ಮಿಸ್ಕಿತ್ ಅವರ ಬಳಿ ಕಲಿಯುತ್ತಿದ್ದಾರೆ. ಇಷ್ಟು ದೊಡ್ಡ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ಅವಕಾಶ ದೊರೆತಿರುವುದಕ್ಕಾಗಿ ಅವರು ಸಂತಸಗೊಂಡಿದ್ದಾರೆ. ಸಮಾಜದಲ್ಲಿ ನಿಜವಾಗಿಯೂ ಒಳ್ಳೆಯ ಬದಲಾವಣೆಗಳಾಗುತ್ತಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಈ ಮೂವರು ಸುಸಾನ್ ಮಿಸ್ಕಿತ್ ಅವರನ್ನು ಸಂಪರ್ಕಿಸಿದ್ದಾರೆ. ತಮ್ಮ ಕಾರ್ಯಗಳ ವ್ಯಸ್ತತೆಯಿಂದಾಗಿ ಮೊದಲಿಗೆ ಸುಸಾನ್ ಅವರಿಗೆ ನೃತ್ಯಾಭ್ಯಾಸ ಮಾಡಿಸುವುದು ಕಷ್ಟವೆನಿಸಿದರೂ, ಇವರ ಸಮರ್ಪಣಾ ಭಾವವನ್ನು ಕಂಡು ಲಾಕ್ ಡೌನ್ ತೆರವುಗೊಳಿಸಿದ ಬಳಿಕ ಮೂವರಿಗೂ ತಮ್ಮ ತರಗತಿಯಲ್ಲಿ ದಾಖಲಾತಿ ನೀಡಿದ್ದಾರೆ.

ನಾನು ಸರಿಯಾದ ನಿರ್ಧಾರವನ್ನು ಮಾಡಿದ್ದೇನೆ ಮತ್ತು ಅದರ ಬಗ್ಗೆ ನನಗೆ ವಿಷಾದವಿಲ್ಲ. ಪ್ರದರ್ಶನದ ನಂತರ ಅವರು ನನ್ನ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದಾಗ ನಾನು ಕಣ್ಣೀರು ಹಾಕಿದ್ದೆ. ಕೇವಲ ಮೂರು ನಿಮಿಷಗಳ ಪ್ರದರ್ಶನವಾಗಿದ್ದರೂ, ಜನಸಮೂಹವು ಅವರನ್ನು ಪ್ರೋತ್ಸಾಹಿಸಿ ಬೆಂಬಲಿಸುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು ಎಂದು 24 ವರ್ಷದ ಸುಸಾನ್ ಹೇಳಿದ್ದಾರೆ.

ಅರ್ಪಿತಾ, ಲಕ್ಷ್ಮಿ ಮತ್ತು ನಯನ ಎಂಬುವರು ಸುಸಾನ್ ಅವರ ಬಳಿ ಬಂದು ಮಂಗಳಮುಖಿಯರಿಂದ ನೃತ್ಯಪ್ರದರ್ಶನಕ್ಕಾಗಿ ಮನವಿ ಮಾಡಿದ್ದಾರೆ. ವಿದ್ಯಾರ್ಥಿಗಳು ಪೂರ್ತಿಯಾಗಿ ತಯಾರಿಲ್ಲದಿದ್ದರೂ ಅವಕಾಶ ವಂಚಿತರಾಗುವುದು ಬೇಡವೆನ್ನುವ ಕಾರಣಕ್ಕೆ ಸುಸಾನ್ ಒಪ್ಪಿಗೆ ನೀಡಿದ್ದು, ಸಮಾಜವೂ ಇದನ್ನು ತೆರೆದ ಮನಸ್ಸಿನಿಂದ ಅಂಗೀಕರಿಸಿರುವುದು ಎಲ್ಲರಿಗೂ ಖುಷಿ ನೀಡಿದೆ. ನೃತ್ಯಪ್ರದರ್ಶನ ನೀಡಿದ ಪ್ರಿಯಾ ಶ್ಯಾಮ್, ಸಂಧ್ಯಾ ಮತ್ತು ರೇಖಾ ಇವರಿಗೆ ನಗದು ಬಹುಮಾನವನ್ನು ನೀಡಿ ಗೌರವಿಸಲಾಗಿದೆ.

ಇದೊಂದು ಅನಿರೀಕ್ಷಿತ ಅವಕಾಶ. ಇಲ್ಲಿಯವರೆಗೆ ನಾವು ನಮ್ಮ ಸಮುದಾಯಕ್ಕಾಗಿ ಮಾತ್ರ ನೃತ್ಯ ಮಾಡುತ್ತಿದ್ದೆವು. ಪ್ರದರ್ಶನ ನೀಡಲು ಹೆಚ್ಚಿನ ಅವಕಾಶಗಳು ಸಿಗಲಿ ಎಂದು ಆಶಿಸುತ್ತೇವೆ ಎಂದು ರೇಖಾ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.