ಮುನಿಯಾಲು ಗೋಧಾಮದಲ್ಲಿ ತೆನೆ ತುಂಬಿ ತುಳುಕಾಡುತ್ತಿದೆ ಮೆಕ್ಕೆ ಜೋಳ: ಸಂಜೀವಿನಿ ಫಾರ್ಮ್ ನ ಅಪೂರ್ವ ಸಾಧನೆ

ಕಾರ್ಕಳ: ಹೆಬ್ರಿ ತಾಲೂಕಿನ ಮುನಿಯಾಲಿನಲ್ಲಿ ದೇಸೀ ತಳಿಗಳ ಅಭಿವೃದ್ದಿ ಕೇಂದ್ರ ಸಂಜೀವಿನಿ ಫಾರ್ಮ್ ಮತ್ತು ಡೈರಿಯ ಗೋಧಾಮದಲ್ಲಿ ತುಂಬಿ ತುಳುಕಿ ಬಳುಕಾಡುತ್ತಿದೆ ಮೆಕ್ಕೆಜೋಳ. ಮೂಲತಃ ಮಲೆನಾಡಿನಲ್ಲಿ ಬೆಳೆಯಲಾಗುವ ಮೆಕ್ಕೆ ಜೋಳವನ್ನು ಪಾರಂಪರಿಕ ಕ್ರಮದಲ್ಲಿ ಇದೇ ಮೊದಲ ಬಾರಿಗೆ ಮುನಿಯಾಲಿನಲ್ಲಿ ಬೆಳೆಯಲಾಗಿದೆ.

ಗೋಧಾಮದ 6 ಎಕರೆ ಜಾಗದಲ್ಲಿ ದೇಸೀ ಗೋವುಗಳ ಸೆಗಣಿ ಗೊಬ್ಬರ, ಜೀವಾಮೃತ ಮತ್ತು ವರ್ಮಿ ಕಾಂಪೋಸ್ಟ್ ಬಳಸಿ ರಾಸಾಯನಿಕಗಳಿಲ್ಲದೆ ಸಾವಯವ ಮೆಕ್ಕೆ ಜೋಳವನ್ನು ಬೆಳೆದು ಸಂಜೀವಿನಿ ಫಾರ್ಮ್ಸ್ ಸೈ ಎನಿಸಿಕೊಂಡಿದೆ. ಜಾನುವಾರು ಸಾಕಣೆ ಮತ್ತು ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದು ಮೂಗು ಮುರಿದು ನಗರದತ್ತ ಮುಖ ಮಾಡುವ ಯುವ ಜನತೆಗೆ ಪ್ರೇರಣಾದಾಯಿಯಾಗಿದೆ ಮುನಿಯಾಲು ಗೋಧಾಮದ ಈ ಯಶೋಗಾಥೆ.

ಮುನಿಯಾಲಿನ ಜಮೀನಿನಲ್ಲಿ ಯುವಕರು ವ್ಯವಸಾಯ ಮಾಡಿ ಯಾವುದೇ ಬಿಳಿ ಕಾಲರ್ ಕೆಲಸಕ್ಕಿಂತಲೂ ಹೆಚ್ಚ ಆದಾಯವನ್ನು ಸಂಪಾದಿಸಬಹುದು. ವಾರ್ಷಿಕ ಮೂರು ಬೆಳೆ ತೆಗೆಯುವ ಸಾಮರ್ಥ್ಯವಿದ್ದು ಮೆಕ್ಕೆ ಜೋಳ ಮತ್ತು ದಂಟಿನ ಮಾರಾಟದಿಂದ ವರ್ಷಕ್ಕೆ 15 ಲಕ್ಷ ರೂ ಸಂಪಾದಿಸಬಹುದ. ಇನ್ನೊಬ್ಬರ ಕೈ ಕೆಳಗೆ ದುಡಿಯುವ ಬದಲು ಸ್ವ- ಉದ್ಯೋಗ ನಿರತರಾಗಿ ಆತ್ಮನಿರ್ಭರರಾಗಿ ಜೀವನ ನಡೆಸಬಹುದು ಎನ್ನುವುದಕ್ಕೆ ಎಸ್.ಕೆ.ಎಫ್ ಎಲಿಕ್ಸರ್ ಇಂಡಿಯಾ ಲಿ. ಇದರ ಆಡಳಿತ ನಿರ್ದೇಶಕ ಮತ್ತು ಗೋಧಾಮದ ಪ್ರವರ್ತಕ ಜಿ. ರಾಮಕೃಷ್ಣ ಆಚಾರ್ ಅವರು ಸಾಕ್ಷಿ.

ಕೃಷಿಯಲ್ಲಿ ಭವಿಷ್ಯ ಇಲ್ಲ ಎನ್ನುವುದು ಸುಳ್ಳು. ಯಾವುದೇ ಕೃಷಿಯನ್ನಾದರೂ ಸರಿಯಾದ ಅಧ್ಯಯನ ಮತ್ತು ಕೌಶಲ್ಯಾಧರಿತವಾಗಿ ಮಾಡಿದಲ್ಲಿ ಕೃಷಿಯಲ್ಲಿಯೂ ಭವಿಷ್ಯ ಕಂಡುಕೊಳ್ಳಬಹುದು ಎನ್ನುವುದನ್ನು ಈಗಾಗಲೇ ಹಲವಾರು ಕೃಷಿಕರು ಸಾಧಿಸಿ ತೋರಿಸಿದ್ದಾರೆ. ಕೃಷಿ ಜೀವನದಿಂದ ವಿಮುಖರಾಗುತ್ತಿರುವ ಯುವ ಪೀಳಿಗೆಯನ್ನು ಮತ್ತೆ ಕೃಷಿಯತ್ತ ಮುಖ ಮಾಡಿಸುವುದು ಗೋಧಾಮದ ಉದ್ದೇಶವಾಗಿದ್ದು, ಗ್ರಾಮ ಸ್ವರಾಜ್ಯದಿಂದ ಸದೃಢ ಭಾರತ ಕಟ್ಟಲು ಸಜ್ಜಾಗಿದೆ.