ರಾಜ್ಯದಲ್ಲಿ ಇದುವರೆಗೆ ಶೇ.52.03ರಷ್ಟು ಮತದಾನ: ಅವಿಭಜಿತ ದ.ಕ ಜಿಲ್ಲೆಯಲ್ಲಿ ಮತದಾರರ ಸರತಿ ಸಾಲು!

ಬೆಂಗಳೂರು: 224 ಸ್ಥಾನಗಳ ಕರ್ನಾಟಕ ವಿಧಾನಸಭೆಗೆ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಮಧ್ಯಾಹ್ನ 3 ಗಂಟೆಯವರೆಗೆ ಶೇ.52.03ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇದುವರೆಗಿನ ಅಂಕಿ ಅಂಶಗಳ ಪ್ರಕಾರ ರಾಮನಗರದಲ್ಲಿ ಅತಿ ಹೆಚ್ಚು ಅಂದರೆ ಶೇ.63.3ರಷ್ಟು ಮತದಾನವಾಗಿದೆ.

ಏತನ್ಮಧ್ಯೆ, ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದ.ಕ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಬೆಳಗ್ಗೆಯಿಂದಲೇ ಮತದಾರರು ತಮ್ಮ ಹಕ್ಕು ಚಲಾಯಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿಯೂ ಉತ್ಸಾಹಿ ಮತದಾರರು ಉದ್ದನೆಯ ಸರತಿ ಸಾಲಿನಲ್ಲಿ ನಿಂತಿದ್ದರು.

ಬೆಳಗ್ಗೆ 11 ಗಂಟೆಯ ಅಂಕಿ ಅಂಶಗಳ ಪ್ರಕಾರ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಶೇ.28ಕ್ಕೂ ಹೆಚ್ಚು ಮತದಾನವಾಗಿದ್ದು, ರಾಜ್ಯದ ಸರಾಸರಿ ಶೇ.20.99ಕ್ಕಿಂತ ಹೆಚ್ಚು ಮತದಾನವಾಗಿದೆ. ಉಡುಪಿಯಲ್ಲಿ ಶೇ.30.26ರಷ್ಟು ಮತದಾನವಾಗಿದ್ದು, ದಕ್ಷಿಣ ಕನ್ನಡದಲ್ಲಿ (ಶೇ. 28.46), ಕರಾವಳಿಯ ಇನ್ನೊಂದು ಜಿಲ್ಲೆ ಉತ್ತರ ಕನ್ನಡದಲ್ಲಿ ಶೇ.25.46ರಷ್ಟು ಮತದಾನವಾಗಿದೆ.