ಧರ್ಮಸ್ಥಳ: ಶ್ರೀ ಮಂಜುನಾಥ ನೆಲೆಸಿರುವ ಕ್ಷೇತ್ರ ಧರ್ಮಸ್ಥಳದಲ್ಲಿ 2026ರ ಸಾಲಿನ ‘ಕಾಲಾವಧಿ ಜಾತ್ರೆ’ಗೆ ಕ್ಷಣಗಣನೆ ಆರಂಭವಾಗಿದೆ. ಏಪ್ರಿಲ್ 13ರಿಂದ ಏಪ್ರಿಲ್ 23ರವರೆಗೆ ನಡೆಯಲಿರುವ ಈ ವೈಭವದ ಉತ್ಸವದ ಸಂಪೂರ್ಣ ವೇಳಾಪಟ್ಟಿಯನ್ನು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಿಸಿದೆ.
ಈ ಹಿನ್ನೆಲೆಯಲ್ಲಿ ಭಕ್ತಾದಿಗಳು ತಮ್ಮ ಪ್ರಯಾಣ ಹಾಗೂ ದರ್ಶನವನ್ನು ಮುಂಚಿತವಾಗಿ ಯೋಜಿಸಿಕೊಳ್ಳಲು ಅವಕಾಶ ದೊರೆತಿದೆ. ಜಾತ್ರಾ ಮಹೋತ್ಸವದ ಅವಧಿಯಲ್ಲಿ ದೇವರ ದರ್ಶನ ಸಮಯದಲ್ಲೂ ಕೆಲ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದ್ದು, ಭಕ್ತರಿಗೆ ಅದನ್ನು ಗಮನಿಸುವಂತೆ ಸೂಚಿಸಲಾಗಿದೆ.
ಏಪ್ರಿಲ್ 13ರಂದು ಆರಂಭೋತ್ಸವ
ಜಾತ್ರೆಯು ಏಪ್ರಿಲ್ 13ರ ಸೋಮವಾರ ರಾತ್ರಿ 8.30ಕ್ಕೆ ‘ಓಲೆ ಬರೆಯುವ’ ಸಂಪ್ರದಾಯದೊಂದಿಗೆ ಅಧಿಕೃತವಾಗಿ ಆರಂಭವಾಗಲಿದೆ.
ಮುಂದಿನ ದಿನಗಳ ಪ್ರಮುಖ ಕಾರ್ಯಕ್ರಮಗಳು
ಏಪ್ರಿಲ್ 14ರಂದು ಸಂಜೆ 6ಕ್ಕೆ ಪಾರೇರಿ ಹೋಗುವುದು, ರಾತ್ರಿ 7.30ಕ್ಕೆ ಧ್ವಜಾರೋಹಣ ಹಾಗೂ ರಾತ್ರಿ 10ಕ್ಕೆ ಧರ್ಮದೈವಗಳ ಭಂಡಾರ ಹೊರಡಿಸುವ ಕಾರ್ಯಕ್ರಮಗಳು ನಡೆಯಲಿವೆ.
ಏಪ್ರಿಲ್ 15ರಂದು ರಾತ್ರಿ 10 ಗಂಟೆಯ ನಂತರ ಧರ್ಮದೈವಗಳ ನೇಮ ನಡೆಯಲಿದೆ.
ಏಪ್ರಿಲ್ 16ರಂದು ಅಣ್ಣಪ್ಪ ನೇಮ, ಬೈಗಿನ ಬಲಿ ಉತ್ಸವ ಹಾಗೂ ಹೊಸಕಟ್ಟೆ ಉತ್ಸವ ಸೇರಿದಂತೆ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ರಥೋತ್ಸವಗಳ ವೈಭವ
ಏಪ್ರಿಲ್ 17ರಿಂದ ಏಪ್ರಿಲ್ 21ರವರೆಗೆ ಪ್ರತಿದಿನ ಬೆಳಿಗ್ಗೆ ರಥೋತ್ಸವಗಳು ನಡೆಯಲಿವೆ. ರಾತ್ರಿ ವೇಳೆ ಕಂಚಿಮಾರು ಕಟ್ಟೆ, ಲಲಿತೋದ್ಯಾನ, ಕೆರೆಕಟ್ಟೆ, ಚಂದ್ರಮಂಡಲ ಮತ್ತು ಗೌರಿಮಾರುಕಟ್ಟೆ ಉತ್ಸವಗಳು ಭಕ್ತರ ಗಮನ ಸೆಳೆಯಲಿವೆ.
ಏಪ್ರಿಲ್ 21ರಂದು ಬೆಳಿಗ್ಗೆ 9 ಗಂಟೆಯ ನಂತರ ದೇವರ ದರ್ಶನಕ್ಕೆ ಅವಕಾಶ ಇರಲಿದೆ. ಅದೇ ದಿನ ರಾತ್ರಿ ಬ್ರಹ್ಮರಥೋತ್ಸವ ಮತ್ತು ಭೂತಬಲಿ ನಡೆಯಲಿದೆ.
ಏಪ್ರಿಲ್ 22ರಂದು ಕವಾಟೋದ್ಘಾಟನೆ ಹಾಗೂ ಧ್ವಜಾವರೋಹಣದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ. ಏಪ್ರಿಲ್ 23ರಂದು ಧೂಮಬಲಿ ಉತ್ಸವ ನಡೆಯಲಿದೆ.
ದರ್ಶನಕ್ಕೆ ಸಮಯ ನಿಗದಿ
ಜಾತ್ರೆಯ ವಿಶೇಷ ದಿನಗಳಲ್ಲಿ ಏಪ್ರಿಲ್ 17ರಿಂದ 22ರವರೆಗೆ ಬೆಳಿಗ್ಗೆ 8.30ರವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಇರಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ. ಸಂಜೆ 5ರಿಂದ ರಾತ್ರಿ 8ರವರೆಗೆ ಮಾತ್ರ ಗರ್ಭಗುಡಿಯ ಆವರಣಕ್ಕೆ ಪ್ರವೇಶ ನೀಡಲಾಗುತ್ತದೆ. ಭಕ್ತಾದಿಗಳು ಈ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಧರ್ಮಸ್ಥಳಕ್ಕೆ ಭೇಟಿ ನೀಡುವಂತೆ ಸೂಚಿಸಲಾಗಿದೆ.

















