ಬೋಟ್ ಗಳಿಗೆ ಅತ್ಯಾಧುನಿಕ ಸಂವಹನ ತಂತ್ರಜ್ಞಾನ ಅಳವಡಿಸಿ: ಗಣಪತಿ ಮಾಂಗ್ರೆ

ಉಡುಪಿ: ಮೀನುಗಾರಿಕೆ ಮಾಡುವ ಸಂದರ್ಭದಲ್ಲಿ ಅವಘಡಕ್ಕೆ ಸಿಲುಕುವ ಮೀನುಗಾರರ ಜೀವ ರಕ್ಷಣೆ ಹಾಗೂ‌ ಬೋಟ್‍ಗಳನ್ನು ರಕ್ಷಿಸುವ ಸಲುವಾಗಿ ಎಲ್ಲ ಬೋಟ್‍ಗಳಿಗೆ ಟ್ರ್ಯಾಕರ್ ಮಾದರಿಯ ಅತ್ಯಾಧುನಿಕ ಸಂವಹನ ತಂತ್ರಜ್ಞಾನ ಅಳವಡಿಸಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರ್ಕೆಟಿಂಗ್ ಫೆಡರೇಶನ್‍ನ ಅಧ್ಯಕ್ಷ ಗಣಪತಿ ಮಾಂಗ್ರೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಉಡುಪಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತ್ಯಾಧುನಿಕ ಸಂಪರ್ಕ ತಂತ್ರಜ್ಞಾನದ ಕೊರತೆಯಿಂದ ನೂರಾರು ಮಂದಿ ಮೀನುಗಾರರು ದುರಂತಕ್ಕೆ ಸಿಲುಕಿ, ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಬೋಟ್ ಗಳಿಗೆ ಟ್ರ್ಯಾಕರ್ ಗಳನ್ನು ಅಳವಡಿಸಿದ್ದಲ್ಲಿ ಮೀನುಗಾರರ ಪ್ರಾಣ ರಕ್ಷಣೆಯ ಜೊತೆಗೆ ಮೀನುಗಳಿರುವ ಸ್ಥಳಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕರಾವಳಿ ಕಾವಲು ಪಡೆ ಹಾಗೂ ಕೋಸ್ಟ್ ಗಾರ್ಡ್ ಸಿಬ್ಬಂದಿ ನೇಮಕಾತಿ ವೇಳೆ ಶೇ. 60 ರಷ್ಟು ನುರಿತ ಮೀನುಗಾರರಿಗೆ ಅವಕಾಶ ನೀಡಬೇಕು ಆಗ್ರಹಿಸಿದರು.
ಮಲ್ಪೆ ತಾಂಡೇಲ ಮೀನುಗಾರರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ ಮಾತನಾಡಿ, ಮೀನುಗಾರರ ಸುರಕ್ಷತೆ ದೃಷ್ಟಿಯಿಂದ ಸೂಕ್ತ ರಕ್ಷಣಾ ವ್ಯವಸ್ಥೆ ಹಾಗೂ ಕಾರ್ಯಾಚರಣೆಗೆ ಬೇಕಾದ ಸಕಲ ಸೌಲಭ್ಯವನ್ನು ಒದಗಿಸಬೇಕು. ಆರೋಗ್ಯ ದೃಷ್ಟಿಯಿಂದ ಸಾಗರ್ ಆ್ಯಂಬುಲೆನ್ಸ್, ಪ್ರತಿಯೊಬ್ಬ ಮೀನುಗಾರರಿಗೂ ಆರೋಗ್ಯ ಕಾರ್ಡ್ ನೀಡಬೇಕು. ಕಿಸಾನ್ ಕಾರ್ಡ್ ನಲ್ಲಿ ಸಾಲ ನೀಡಲಾಗುವ ಸಾಲವನ್ನು ಮೀನುಗಾರರಿಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ಕಾರವಾರ ಪರ್ಸಿನ್ ಮೀನುಗಾರರ ಸಂಘದ ಮುಖಂಡ ನಿತಿನ್ ರಮಾಕಾಂತ್ ಗಾಂವ್ಕರ್ ಇದ್ದರು.