ನವದೆಹಲಿ : ಆರ್ಥಿಕ ಪ್ರಗತಿ ಸಾಧಿಸುವಲ್ಲಿ ವಿಶ್ವ ಪ್ರಬಲ ರಾಷ್ಟ್ರಗಳನ್ನು ಹಿಂದಿಕ್ಕಿ ಮುಂಚೂಣಿಯಲ್ಲಿ ಸಾಗುತ್ತಿರುವ ಭಾರತ, ಪ್ರಸ್ತುತ ವರ್ಷದಲ್ಲಿ ತನ್ನ ಹಿಂದಿನ ಅಂದಾಜಿಗಿಂತ ಹೆಚ್ಚಿನ ದರದಲ್ಲಿ ಅಭಿವೃದ್ಧಿ ಸಾಧಿಸಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ತನ್ನ ವರದಿಯಲ್ಲಿ ತಿಳಿಸಿದೆ.ಭಾರತವು ಪ್ರಸ್ತುತ ವರ್ಷದಲ್ಲಿ ಶೇ. 6.1ರಷ್ಟು ಆರ್ಥಿಕ ಪ್ರಗತಿ ಹೊಂದುವುದಾಗಿ ಅಂದಾಜಿಸಲಾಗಿತ್ತು. ಆದರೆ ಮೀರಿ ಈ ಬಾರಿ ಶೇ. 6.3ರಷ್ಟು ಆರ್ಥಿಕ ಪ್ರಗತಿ ಕಾಣಲಿದೆ ಎಂದು ಐಎಂಎಫ್ ವಿಶ್ವಾಸ ವ್ಯಕ್ತಪಡಿಸಿದೆ. ಭಾರತದಲ್ಲಿನ ಆರ್ಥಿಕ ಚಟುವಟಿಕೆಗಳು ತೀವ್ರ ಪ್ರಮಾಣದಲ್ಲಿ ಏರಿಕೆಯಾದ ಹಿನ್ನಲೆ ಆರ್ಥಿಕ ಪ್ರಗತಿಯಲ್ಲಿ ಏರಿಕೆ ಕಂಡು ಬಂದಿದೆ.ಪ್ರಸ್ತುತ ವರ್ಷದಲ್ಲಿ ಭಾರತವು ತನ್ನ ಶೇ. 6.3ರಷ್ಟು ಆರ್ಥಿಕ ಪ್ರಗತಿ ಸಾಧಿಸಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ತನ್ನ ವರದಿಯಲ್ಲಿ ತಿಳಿಸಿದೆ.
ಈ ಬಗ್ಗೆ ಐಎಂಎಫ್ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಭಾರತವು ಪ್ರಸ್ತುತ ಆರ್ಥಿಕ ವರ್ಷದಲ್ಲಿ (2023-24) ಶೇ. 6.3ರಷ್ಟು ಜಿಡಿಪಿ ಪ್ರಗತಿ ಸಾಧಿಸಲಿದೆ ಎಂದು ಹೇಳಿದೆ. ಈ ಪ್ರಮಾಣವು ಹಿಂದೆ ಅಂದಾಜಿಸಿದ್ದಕ್ಕಿಂತ 0.2ರಷ್ಟು ಏರಿಕೆಯನ್ನು ಸೂಚಿಸಿದೆ. ಕಳೆದ ಜುಲೈ ತಿಂಗಳಿನಲ್ಲಿ ಬಿಡುಗಡೆ ಮಾಡಿದ್ದ ವರದಿಯಲ್ಲಿ ಭಾರತವು 6.1ರಷ್ಟು ಜಿಡಿಪಿ ಸಾಧಿಸಲಿದೆ ಎಂದು ಹೇಳಿತ್ತು. ಜಿಡಿಪಿ ಕಳೆದ ಏಪ್ರಿಲ್ ತಿಂಗಳಲ್ಲಿ ಶೇ.5.9ರಷ್ಟಿತ್ತು. ಬಳಿಕ ಜುಲೈನಲ್ಲಿ ಶೇ 6.1, ಸದ್ಯ ಶೇ. 6.3ರಷ್ಟಿದ್ದು, ಮುಂದಿನ ದಿನಗಳಲ್ಲಿ ಶೇ. 6.5ಕ್ಕೆ ಏರಿಕೆ ಆಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.
ಚೀನಾದ ಅಭಿವೃದ್ಧಿ ದರ ಇಳಿಕೆ : ಈ ವರದಿಯಲ್ಲಿ ಚೀನಾದ ಆರ್ಥಿಕತೆ ಪ್ರಸ್ತುತ ವರ್ಷದಲ್ಲಿ ಶೇ. 5ಕ್ಕೆ ಇಳಿಯಲಿದೆ ಎಂದು ಹೇಳಿದೆ. ಕಳೆದ ವರದಿಯಲ್ಲಿ 5.2ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಹೇಳಲಾಗಿತ್ತು. ಆದರೆ ಶೇ.0.2ರಷ್ಟು ಇಳಿಕೆ ಕಂಡಿದೆ. 2024 ಆರ್ಥಿಕ ಬೆಳವಣಿಗೆ ದರ 4.2ರಷ್ಟು ಇಳಿಕೆಯಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಜಾಗತಿಕ ಬೆಳವಣಿಗೆ ದರ : ಜಾಗತಿಕ ಆರ್ಥಿಕ ಬೆಳವಣಿಗೆ ದರವು 2022ರಲ್ಲಿ ಶೇ. 3.5ರಷ್ಟು ಇರಲಿದೆ ಎಂದು ಹೇಳಲಾಗಿತ್ತು. 2023ರಲ್ಲಿ ಶೇ. 3ರಷ್ಟು ಮತ್ತು 2024ರಲ್ಲಿ ಶೇ. 2.9 ರಷ್ಟು ಇರಲಿದೆ ಎಂದು ಅಂದಾಜಿಸಿದೆ. ಮುಂದಿನ ವರ್ಷ ಶೇ 0.1ರಷ್ಟು ಇಳಿಕೆಯಾಗಲಿದೆ ಎಂದು ತಿಳಿಸಿದೆ.ಗ್ರಾಹಕರ ಹಣದುಬ್ಬರ : ಭಾರತದ ಗ್ರಾಹಕರ ಹಣದುಬ್ಬರವನ್ನು ಶೇ. 5.5ರಷ್ಟು ಅಂದಾಜಿಸಲಾಗಿದ್ದು, ಇದಕ್ಕೂ ಮುನ್ನ ಆರ್ಬಿಐ ಶೇ. 5.4 ರಷ್ಟು ಇರಲಿದೆ ಎಂದು ಹೇಳಿತ್ತು. ಮುಂದಿನ ವರ್ಷವೂ ಭಾರತ ತನ್ನ ಅಭಿವೃದ್ಧಿ ದರದಲ್ಲಿ ಸ್ಥಿರತೆ ಕಾಪಾಡಿಕೊಳ್ಳುತ್ತದೆ ಎಂದು ತಿಳಿಸಲಾಗಿದೆ. 2024ರಲ್ಲಿ ಶೇ. 6.3ರಷ್ಟು ಜಿಡಿಪಿ ಇರಲಿದೆ. ಈ ಮೂಲಕ ಭಾರತದ ಬೆಳವಣಿಗೆ ದರ ಸ್ಥಿರವಾಗಿರಲಿದೆ ಎಂದು ತಿಳಿಸಿದೆ.
ಸುಧಾರಿತ ಆರ್ಥಿಕ ರಾಷ್ಟ್ರಗಳ ಬೆಳವಣಿಗೆ ದರವು 2022ರಲ್ಲಿ ಶೇ. 2.6ರಷ್ಟು ಇರಲಿದೆ ಎಂದು ಹೇಳಿತ್ತು. 2023ರಲ್ಲಿ ಶೇ. 1.5ರಷ್ಟು ಮತ್ತು 2024ರಲ್ಲಿ ಶೇ. 1.4ರಷ್ಟು ಇಳಿಕೆಯಾಗಲಿದೆ ಎಂದು ಹೇಳಿದೆ. ಜಾಗತಿಕ ಹಣದುಬ್ಬರವು 2022ರಲ್ಲಿ ಶೇ. 8.7ರಷ್ಟಿದ್ದು, 2022ರಲ್ಲಿ ಶೇ.6.9, 2023ರಲ್ಲಿ 5.8ಕ್ಕೆ ಇಳಿಕೆಯಾಗುವ ಮುನ್ಸೂಚನೆಯನ್ನು ಸಂಸ್ಥೆ ನೀಡಿದೆ. ಮುಂದಿನ ದಿನಗಳಲ್ಲಿ ಸ್ವಲ್ಪಮಟ್ಟದಲ್ಲಿ ಹಣದುಬ್ಬರ ಕಡಿಮೆಯಾಗುವ ಆಶಾವಾದವನ್ನು ಸಂಸ್ಥೆ ವ್ಯಕ್ತಪಡಿಸಿದೆ.ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಬೆಳವಣಿಗೆ ದರವು, 2022ರಲ್ಲಿ ಶೇ.4.1 ಮತ್ತು 2023ರಲ್ಲಿ ಶೇ.4ರಷ್ಟು ಮತ್ತು 2024ರಲ್ಲೂ ಶೇ. 4ರಷ್ಟು ಅಭಿವೃದ್ಧಿ ದರ ಮುಂದುವರೆಯಲಿದೆ ಎಂದು ಮಾಹಿತಿ ನೀಡಿದೆ.