ಉಡುಪಿ: ಕಂಡ್ಲೂರು ಸೇತುವೆ ಬಳಿ ವಾರಾಹಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ದಾಳಿ ನಡೆಸಿದ ಕುಂದಾಪುರ ಗ್ರಾಮಾಂತರ ಪೊಲೀಸರು 11 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮರಳು ಧಕ್ಕೆಯ ಸೂಪರ್‌ವೈಸರ್ ಅಜ್ಮಲ್, ಕಾರ್ಮಿಕರಾದ ರಾಮಶಂಕರ ರಾಜಬೀರ್(35), ರಾಮ ಕುಮಾರ್ (40), ಗೋವಿಂದ ಚೌದರಿ(26), ಶಿವಮುನಿ(32), ಜುನ್ನ ರಾಜಬೀರ(35), ಸತ್ಯಾದೇವ(30), ಕಮಲೇಶ ನಿಸಾದ್ (35), ಸಂತೋಷ ನಿಸಾದ್(23), ಓಂ ಪ್ರಕಾಶ ರಾಜಬರ್(34), ರಮೇಶ ರಾಜಬರ್(35) ಬಂಧಿತ ಆರೋಪಿಗಳು. 3ಲಕ್ಷ ರೂ. ಮೌಲ್ಯದ ನಾಲ್ಕು ದೋಣಿಗಳು, ದೋಣಿಗಳಲ್ಲಿದ್ದ 4,500 ರೂ. ಮೌಲ್ಯದ ಒಟ್ಟು ಸುಮಾರು ಮೂವರೆ ಯುನಿಟ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ.

ಮರಳು ಧಕ್ಕೆಯ ಮಾಲಕ ಸುನೀಲ್ ಶೆಟ್ಟಿ ಮತ್ತು ಧಕ್ಕೆಯ ಸೂಪರ್ ವೈಸರ್ ಅಜ್ಮಲ್ ತಮ್ಮ ಕೆಲಸಗಾರರಿಂದ ಮರಳು ಧಕ್ಕೆಯ ನಿಯಮ ಉಲ್ಲಂಘಿಸಿ ಜಿಯೋ ಪೆನ್ಸಿಂಗ್ ಗಡಿ ದಾಟಿ ಕಾನೂನು ಬಾಹಿರವಾಗಿ ಮರಳು ತೆಗೆದು ಸಾಗಾಟ ಮಾಡುತ್ತಿದ್ದು, ಈ ಬಗ್ಗೆ ಖಚಿತ ಮಾಹಿತಿಯಂತೆ ಕುಂದಾಪುರ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















