ಸಂಬಳ ಎಷ್ಟೇ ಇರಲಿ ಅದರಲ್ಲಿ ಸಣ್ಣ ಮೊತ್ತವನ್ನಾದರೂ ಉಳಿತಾಯ ಮಾಡುವುದು ಇಂದಿನ ಅಗತ್ಯತೆಯಾಗಿದೆ. ಇಂದಿನ ಯುಗದಲ್ಲಿ, ನಮ್ಮ ಜೀವನ ಪದ್ಧತಿಗೆ ಯಾರಿಗೆ ಯಾವ ರೀತಿಯ ಆರೋಗ್ಯದ ತುರ್ತು ಬಂದೊದಗುತ್ತದೆ ಎಂದು ಊಹಿಸಲೂ ಅಸಾಧ್ಯ. ಹಾಗಾಗಿ ಉಳಿತಾಯ ಬಹಳಾ ಮುಖ್ಯ.
ಸಂಬಳ ಬಂದ ನಂತರ ಹಣ ಉಳಿಸುವುದು ಅಂದರೆ “ಮಿಕ್ಕಿದ್ದನ್ನು ಉಳಿಸುವುದು” ಅಲ್ಲ, “ಮೊದಲು ಉಳಿಸಿ ನಂತರ ಖರ್ಚು ಮಾಡುವುದು” ಅನ್ನೋ ಅಭ್ಯಾಸ ಬೆಳೆಸಿಕೊಳ್ಳುವುದು ಮುಖ್ಯ.
ಕೆಲವು ಸರಳ ಆದರೆ ಪರಿಣಾಮಕಾರಿ ಟಿಪ್ಸ್ ಇಲ್ಲಿವೆ
50-30-20 ನಿಯಮ ಪಾಲಿಸಿ
- 50%: ಅಗತ್ಯ ಖರ್ಚುಗಳು (ಬಾಡಿಗೆ, ಆಹಾರ, ಬಿಲ್‌ಗಳು)
- 30%: ವೈಯಕ್ತಿಕ ಖರ್ಚು (ಮನರಂಜನೆ, ಶಾಪಿಂಗ್)
- 20%: ಉಳಿತಾಯ ಮತ್ತು ಹೂಡಿಕೆ
ಸಂಬಳ ಬಂದ ತಕ್ಷಣವೇ ಸೇವಿಂಗ್ ಮಾಡಿ
ಬಾಕಿ ಉಳಿದರೆ ಉಳಿಸುತ್ತೇನೆ ಅನ್ನೋದಕ್ಕಿಂತ, ಸಂಬಳ ಬಂದ ದಿನವೇ ಒಂದು ಭಾಗವನ್ನು RD, SIP, Insurance,PPF ಅಥವಾ ಬಳಸದೇ ಹಾಗೇ ಇಡುವಂತಹಾ ಇನ್ನೊಂದು ಖಾತೆಗೆ ಹಾಕಿ.
ತಿಂಗಳ ಬಜೆಟ್ ಮಾಡಿಕೊಳ್ಳಿ
ಪ್ರತಿ ತಿಂಗಳು ಎಷ್ಟು ಖರ್ಚು ಆಗುತ್ತದೆ ಎಂದು ಮುಂಚಿತವಾಗಿ ಪ್ಲಾನ್ ಮಾಡಿದರೆ ಅತಿರೇಕ ಖರ್ಚು ಕಡಿಮೆಯಾಗುತ್ತದೆ.
ಅಗತ್ಯ ಹಾಗೂ ಇಚ್ಛೆಯ ಕುರಿತು ಸ್ಪಷ್ಟತೆ ಇರಲಿ
- ಅಗತ್ಯ: ಆಹಾರ, ಮನೆ, ಬಿಲ್
- ಇಚ್ಛೆ: ಹೊಸ ಫೋನ್, ಬ್ರ್ಯಾಂಡ್ ಬಟ್ಟೆ, ಹೊರಗೆ ಊಟ. ಅನ್ನಿಸಿದ ಕೂಡಲೇ ತೆಗೆದುಕೊಳ್ಳುವ ಬದಲು “24 ಗಂಟೆ ಕಾಯುವ ನಿಯಮ” ಬಳಸಿ. 24 ಗಂಟೆಯಲ್ಲಿ ನಿಜವಾಗಿಯೂ ಅದು ನಿಮಗೆ ಅಗತ್ಯವಿದೆಯೇ ಎಂಬ ಅವಲೋಕನ ಮಾಡಿ.
ಕ್ರೆಡಿಟ್ ಕಾರ್ಡ್/UPI ಬಳಕೆ ಕಡಿಮೆ ಮಾಡಿ
ಸಣ್ಣ ಸಣ್ಣ ಖರ್ಚುಗಳು ಗಮನಿಸದೇ ಹೆಚ್ಚಾಗುತ್ತವೆ. ವಾರಕ್ಕೆ ಲಿಮಿಟ್ ನಿಗದಿ ಮಾಡಿ.
Auto debit ಮೂಲಕ ಉಳಿತಾಯ
SIP, recurring deposit ಅಥವಾ auto transfer ಸೆಟ್ ಮಾಡಿದರೆ ಸಂಬಳ ಬಂದ ಕೂಡಲೇ ಆ ಖಾತೆಗಳಿಗೆ ಅದಾಗೇ ಹಣ ಹೋಗಿ ಉಳಿತಾಯ ಆಗುತ್ತದೆ.
ತುರ್ತು ನಿಧಿ (Emergency Fund) ಇಡಿ
ಸಾಧ್ಯವಾದಲ್ಲಿ, ಕನಿಷ್ಠ 3–6 ತಿಂಗಳ ಖರ್ಚಿಗೆ ಸಮಾನವಾದ ಹಣ ಬೇರೆ ಖಾತೆಯಲ್ಲಿ ಇರಿಸಿ.
ಡಿಸ್ಕೌಂಟ್/ಆಫರ್ಗಳಿಗೆ ಮಾತ್ರ ಖರೀದಿ ಮಾಡಬೇಡಿ
ಅಗತ್ಯವಿಲ್ಲದ ವಸ್ತುಗಳನ್ನು “ಆಫರ್ ಇದೆ” ಎಂದು ತೆಗೆದುಕೊಳ್ಳುವುದು ಅನಗತ್ಯ ಖರ್ಚು ಹೆಚ್ಚಿಸುತ್ತದೆಯೇ ಹೊರತು, ಉಳಿತಾಯ ಖಂಡಿತಾ ಆಗುವುದಿಲ್ಲ.

















