ರೈಲಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದ್ರೆ ಇನ್ನು ಬೀಳುತ್ತೆ ಭಾರೀ ದಂಡ, ಜು.1ರಿಂದ ರೈಲ್ವೆ ಹೊಸ ನಿಯಮ,ಇನ್ನೂ ಯಾವುದಕ್ಕೆಲ್ಲಾ ಬೀಳುತ್ತೆ ಫೈನ್!

ನವದೆಹಲಿ: ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ. ಜುಲೈ 1ರಿಂದ ಹೊಸ ದಂಡ ನಿಯಮಗಳು ಜಾರಿಗೆ ಬರಲಿದ್ದು, ಟಿಕೆಟ್‌ರಹಿತ ಪ್ರಯಾಣ ಸೇರಿದಂತೆ ವಿವಿಧ ಉಲ್ಲಂಘನೆಗಳಿಗೆ ಹೆಚ್ಚುವರಿ ದಂಡ ವಿಧಿಸಲಾಗುತ್ತದೆ.

ಪ್ರಸ್ತುತ ಟಿಕೆಟ್ ಇಲ್ಲದೆ ಪ್ರಯಾಣಿಸಿದರೆ ಟಿಕೆಟ್ ದರದ ಜೊತೆಗೆ 250 ರೂ. ದಂಡ ವಿಧಿಸಲಾಗುತ್ತಿದೆ. ಹೊಸ ನಿಯಮದ ಪ್ರಕಾರ, ಟಿಕೆಟ್ ದರದೊಂದಿಗೆ 500 ರೂ. ದಂಡ ಪಾವತಿಸಬೇಕಾಗುತ್ತದೆ. ಸುಮಾರು 13 ವರ್ಷಗಳ ಬಳಿಕ ರೈಲ್ವೆ ಇಲಾಖೆ ದಂಡದ ಮೊತ್ತವನ್ನು ಪರಿಷ್ಕರಿಸಿದೆ.

ಹೊಸ ನಿಯಮಗಳ ಪ್ರಕಾರ ಮಹಿಳಾ ಕೋಚ್‌ಗೆ ಅನಧಿಕೃತವಾಗಿ ಪ್ರವೇಶಿಸುವ ಪುರುಷ ಪ್ರಯಾಣಿಕರಿಗೆ 2,500 ರೂ. ವರೆಗೆ ದಂಡ ವಿಧಿಸಲಾಗುತ್ತದೆ. ರೈಲ್ವೆ ಆವರಣದಲ್ಲಿ ಪರವಾನಗಿ ಇಲ್ಲದೆ ವ್ಯಾಪಾರ ನಡೆಸುವುದು ಅಥವಾ ಭಿಕ್ಷೆ ಬೇಡುವುದಕ್ಕೂ 2,000 ರೂ. ದಂಡ ವಿಧಿಸಲಾಗುತ್ತದೆ.

ಇದಲ್ಲದೆ, ನಿಷೇಧಿತ ವಸ್ತುಗಳನ್ನು ಸಾಗಿಸುವವರಿಗೆ 10,000 ರೂ. ವರೆಗೆ ದಂಡ ವಿಧಿಸುವ ಅವಕಾಶವಿದ್ದು, ರೈಲು ಅಥವಾ ರೈಲ್ವೆ ನಿಲ್ದಾಣಕ್ಕೆ ಅನಧಿಕೃತವಾಗಿ ಪ್ರವೇಶಿಸಿದರೆ 500 ರೂ. ದಂಡ ಪಾವತಿಸಬೇಕಾಗುತ್ತದೆ.

ಪ್ರಯಾಣಿಕರಲ್ಲಿ ಶಿಸ್ತು ಮೂಡಿಸುವುದು, ಟಿಕೆಟ್‌ರಹಿತ ಪ್ರಯಾಣವನ್ನು ತಡೆಯುವುದು ಹಾಗೂ ರೈಲ್ವೆ ಸುರಕ್ಷತೆಯನ್ನು ಬಲಪಡಿಸುವ ಉದ್ದೇಶದಿಂದ ಈ ಕ್ರಮ ಜಾರಿಗೆ ತರಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.