ಬೆಂಗಳೂರು: ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರ ಮುಂದಿನ ಸಿನಿಮಾಗಾಗಿ ಹೊಸ ಪ್ರತಿಭೆಗಳ ಹುಡುಕಾಟ ಆರಂಭವಾಗಿದೆ. ಈ ಸಂಬಂಧ ರಿಷಬ್ ಶೆಟ್ಟಿ ಫಿಲ್ಮ್ಸ್ ವತಿಯಿಂದ ಅಧಿಕೃತವಾಗಿ ಆಡಿಷನ್ ಕಾಸ್ಟಿಂಗ್ ಕಾಲ್ ನೀಡಲಾಗಿದೆ.
ರಿಷಬ್ ಶೆಟ್ಟಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಆಡಿಷನ್ ಕುರಿತ ಮಾಹಿತಿಯನ್ನು ಹಂಚಿಕೊಂಡಿದ್ದು, ಆಸಕ್ತ ನಟ-ನಟಿಯರು ಭಾಗವಹಿಸುವಂತೆ ಆಹ್ವಾನಿಸಿದ್ದಾರೆ. ಆದರೆ, ಸದ್ಯಕ್ಕೆ ಸಿನಿಮಾದ ಹೆಸರನ್ನು ಬಹಿರಂಗಪಡಿಸಿಲ್ಲ.

20ರಿಂದ 65 ವರ್ಷದ ಪುರುಷರಿಗೆ ಅವಕಾಶ
ಮುಂದಿನ ಚಿತ್ರದ ಪ್ರಮುಖ ಪಾತ್ರಗಳಿಗಾಗಿ ಹೊಸ ಪ್ರತಿಭೆಗಳನ್ನು ಆಯ್ಕೆ ಮಾಡಲಾಗುತ್ತಿದ್ದು, 20ರಿಂದ 65 ವರ್ಷದೊಳಗಿನ ಪುರುಷರು ಹಾಗೂ 20ರಿಂದ 60 ವರ್ಷದೊಳಗಿನ ಮಹಿಳೆಯರು ಆಡಿಷನ್‌ನಲ್ಲಿ ಭಾಗವಹಿಸಬಹುದು ಎಂದು ತಿಳಿಸಲಾಗಿದೆ.
ಉತ್ತರ ಕರ್ನಾಟಕ ಭಾಷಾಶೈಲಿಗೆ ಆದ್ಯತೆ
ಆಡಿಷನ್‌ಗೆ ಆಗಮಿಸುವವರಲ್ಲಿ ಸ್ಪಷ್ಟವಾಗಿ ಕನ್ನಡ ಮಾತನಾಡುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ವಿಶೇಷವಾಗಿ ಉತ್ತರ ಕರ್ನಾಟಕದ ಭಾಷಾಶೈಲಿ ತಿಳಿದಿರುವವರಿಗೆ ಆದ್ಯತೆ ಇರಲಿದೆ ಎಂದು ಕಾಸ್ಟಿಂಗ್ ಕಾಲ್‌ನಲ್ಲಿ ತಿಳಿಸಲಾಗಿದೆ.
ಅಕ್ಟೋಬರ್ 2ರಂದು ಆಡಿಷನ್
ಬೆಂಗಳೂರಿನ ಜಯನಗರ 4ನೇ ಬ್ಲಾಕ್‌ನ ವಿಜಯಾ ಕಾಲೇಜಿನಲ್ಲಿ ಅಕ್ಟೋಬರ್ 2ರಂದು ಆಡಿಷನ್ ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಆಡಿಷನ್ ಪ್ರಕ್ರಿಯೆ ನಡೆಯಲಿದೆ.
‘ಜೀವನ ಒಂದು ಪಯಣ’ ಎಂಬ ಸಂದೇಶದೊಂದಿಗೆ ಕಾಸ್ಟಿಂಗ್ ಕಾಲ್ ಪ್ರಕಟಿಸಲಾಗಿದ್ದು, ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ. ಆಸಕ್ತ ನಟ-ನಟಿಯರು ನಿಗದಿತ ದಿನದಂದು ಆಡಿಷನ್‌ಗೆ ಹಾಜರಾಗಬಹುದು.















