ಕೋವಿಡ್ ವಿಚಾರದಲ್ಲಿ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟರೆ, 24 ಗಂಟೆಯೊಳಗೆ ಅಮಾನತು: ಶಾಸಕ ರಘುಪತಿ ಭಟ್ 

ಉಡುಪಿ: ಕೋವಿಡ್ ವಿಚಾರದಲ್ಲಿ ಯಾವುದಾದರೂ ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಅಥವಾ ಸೀಲ್ ಡೌನ್ ತೆಗೆಯಲು ಹಣ ಪಡೆದಿದ್ದಾರೆ. ಜಿಲ್ಲೆಯಲ್ಲಿ ಐದು ಬಿಜೆಪಿ ಶಾಸಕರು ಇದ್ದಾರೆ. ಅವರಿಗೆ ಮಾಹಿತಿ ನೀಡಿ. ಅದು ಎಷ್ಟೇ ದೊಡ್ಡ ಅಧಿಕಾರಿ ಆಗಿದ್ದರೂ ಅವರನ್ನು 24 ಗಂಟೆಯೊಳಗೆ ಅಮಾನತು ಮಾಡುತ್ತೇವೆ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.
ಉಡುಪಿ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕೋವಿಡ್ ಪರೀಕ್ಷೆಯಲ್ಲಿ ಭಾರೀ ಗೋಲ್ ಮಾಲ್ ಆಗುತ್ತಿದೆ. ಹಣ ಮಾಡಲು ಕೋವಿಡ್ ಸಂಖ್ಯೆ ಹೆಚ್ಚಿಸುತ್ತಿದ್ದಾರೆ ಎಂಬಂತಹ ಸಂಶಯಗಳು ಜನರಲ್ಲಿ ಮೂಡಿದೆ. ಕೋವಿಡ್ ವಿಚಾರದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಕೋವಿಡ್ ವಿಚಾರದಲ್ಲಿ ಯಾವುದೇ ಕಮಿಷನ್ ಯಾರಿಗೂ ಸಿಗುವುದಿಲ್ಲ. ವದಂತಿಗಳಿಗೆ ಜನರು ಕಿವಿಗೋಡಬಾರದು ಎಂದರು.
ಮನೆಯವರ ದೃಢೀಕರಣದೊಂದಿಗೆ ಕೋವಿಡ್ ಶವ ಹಸ್ತಾಂತರ:
ಜಿಲ್ಲೆಯಲ್ಲಿ ಭಾನುವಾರ ನಡೆದ ಶವ ಅದಲು ಬದಲು ಘಟನೆಗೆ ಗೃಹ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡಿ ದರ್ಜೆ ಅಧಿಕಾರಿ ಹಾಗೂ ಆ್ಯಂಬುಲೆನ್ಸ್ ಸಿಬ್ಬಂದಿ ಮಾಡಿದ ತಪ್ಪಿನಿಂದ ಇಡೀ ಜಿಲ್ಲೆ ತಲೆತಗ್ಗಿಸುವಂತಾಗಿದೆ. ಹಾಗಾಗಿ ಇನ್ಮುಂದೆ ಕೋವಿಡ್ ಶವವನ್ನು ಬೆಳಿಗ್ಗೆ 9ರಿಂದ ಸಂಜೆ 6 ಗಂಟೆಯ ಮಧ್ಯೆ ಮಾತ್ರ ಹಸ್ತಾಂತರ ಮಾಡಲಾಗುವುದು. ಹಾಗೆ ಕೋವಿಡ್ ಶವವನ್ನು ಮನೆಯವರ ಸಮ್ಮುಖದಲ್ಲಿ ಹಸ್ತಾಂತರ ಮಾಡಲಾಗುವುದು. ಮನೆಯವರ ದೃಢೀಕರಣದ ಜತೆಗೆ ಆಯಾ ತಾಲ್ಲೂಕಿನ ಆರೋಗ್ಯ ಅಧಿಕಾರಿಯ ಸಮ್ಮುಖದಲ್ಲೇ ಶವ ಪಡೆದುಕೊಳ್ಳಬೇಕು ಎಂದರು.
ಸಾವಿನ ರಾಜಕಾರಣ ಒಳ್ಳೆದಲ್ಲ:
ಉಡುಪಿಯಲ್ಲಿ ಸಾವಿನ ರಾಜಕಾರಣ ಶುರುವಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಜನರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಬಿಜೆಪಿ ಉಡುಪಿ ನಗರ ಅಧ್ಯಕ್ಷ ಮಹೇಶ್ ಠಾಕೂರ್, ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ನಗರ ಮಹಿಳಾ ಮೋರ್ಚಾದ ಅಧ್ಯಕ್ಷೆ ಸರೋಜಿನಿ ಶೆಟ್ಟಿ, ಮುಖಂಡರಾದ ಗುರುಪ್ರಸಾದ್ ಶೆಟ್ಟಿ, ಶ್ರೀನಿಧಿ ಹೆಗ್ಡೆ ಇದ್ದರು.