ಉಡುಪಿ: ತಾನು ಎಷ್ಟು ಮಂದಿಗೆ ಹಣ ನೀಡಬೇಕಿದೆ ಎಂಬುದರ ಪಟ್ಟಿಯನ್ನು ನೀಡಲು ಸಿದ್ಧನಿದ್ದೇನೆ. ಅದಕ್ಕಾಗಿ ಶಾಸಕ ಸುನಿಲ್ ಕುಮಾರ್ ಮನೆಮನೆಗೆ ಹೋಗಿ ಹಣ ಕೇಳುವ ಅಗತ್ಯವಿಲ್ಲ. ನಾನು ಎಷ್ಟು ಜನರಿಗೆ ದುಡ್ಡು ಕೊಡಲು ಬಾಕಿ ಇದೆ ಎಂಬುವುದರ ಬಗ್ಗೆ ನನ್ನ ಕಚೇರಿಯ ಯುವಕರಿಗೆ ಮಾಹಿತಿ ನೀಡಿದರೆ ಸಾಕು. ತಕ್ಷಣವೇ ಪಟ್ಟಿ ಸಿದ್ಧವಾಗುತ್ತದೆ. ಅದು ನನ್ನ ವ್ಯವಹಾರ, ಉದ್ದಿಮೆ ಅದನ್ನು ನಾನು ತಕ್ಷಣವೇ ಕಳುಹಿಸಿಕೊಡುತ್ತೇನೆ. ಅದನ್ನು ಶಾಸಕರು ಪರಿಶೀಲಿಸಲಿ. ಅದೇ ರೀತಿ, ನನಗೆ ಎಷ್ಟು ಹಣ ನೀಡಿದ್ದಾರೆ, ಬ್ಯಾಂಕ್ ಮೂಲಕ ನೀಡಿದ್ದಾರೆಯೇ ಅಥವಾ ಗೋಣಿ ಚೀಲದಲ್ಲಿ ನೀಡಿದ್ದಾರೆಯೇ ಎಂಬುದನ್ನು ಬಹಿರಂಗಪಡಿಸಲಿ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಸವಾಲು ಹಾಕಿದರು.
ಪರಶುರಾಮ ಥೀಮ್ ಪಾರ್ಕ್ ವಿವಾದದ ಕುರಿತು ಮಾತನಾಡಿದ ಅವರು, ಶಾಸಕರ ಬೇನಾಮಿ ಹಣ ಪಡೆದು ಶಾಲೆ ನಡೆಸುತ್ತಿರುವವರು ಇಂದು ಪರಶುರಾಮನ ಪರವಾಗಿ ವಕಾಲತ್ತು ವಹಿಸುತ್ತಿದ್ದಾರೆ.
ಶಾಸಕರ ಭ್ರಷ್ಟಾಚಾರದ ಹಣದಲ್ಲಿ ಪಾಲು ಪಡೆದವರೇ ಅವರ ಬೆಂಬಲಕ್ಕೆ ನಿಂತು ತಂಡ ಕಟ್ಟುತ್ತಿದ್ದಾರೆ. ಈ ಬಗ್ಗೆ ತಮ್ಮ ಬಳಿ ಸಾಕಷ್ಟು ವೈಯಕ್ತಿಕ ಮಾಹಿತಿಗಳಿದ್ದು, ಅಗತ್ಯಬಿದ್ದರೆ ಒಂದೊಂದಾಗಿ ಬಹಿರಂಗಪಡಿಸುವುದಾಗಿ ಎಚ್ಚರಿಕೆ ನೀಡಿದರು.
ಶಾಸಕರು ತಮ್ಮ ಬಳಿ ಚೀಟಿ ಸಿದ್ಧವಿದೆ ಎಂದು ಹೇಳುತ್ತಿದ್ದರೆ, ಅದರ ವಿವರಗಳನ್ನು ಇಂದೇ ಬಹಿರಂಗಪಡಿಸಲಿ. ಅವರು ಮಾಡಿದ ಪಾಪದ ಫಲವನ್ನು ಈಗಾಗಲೇ ಅನುಭವಿಸುತ್ತಿದ್ದಾರೆ. ಇಷ್ಟು ಕೀಳುಮಟ್ಟಕ್ಕೆ ಇಳಿಯುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಅವರಿಂದ ಯಾವುದೇ ಸರ್ಟಿಫಿಕೇಟ್ ಪಡೆಯುವ ಅಗತ್ಯ ನನಗಿಲ್ಲ ಎಂದರು.
ಪರಶುರಾಮನ ಪ್ರತಿಮೆಯ ಮರುನಿರ್ಮಾಣದ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಅವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಜಿಲ್ಲಾಧಿಕಾರಿಯೂ ಹೊಸ ಟೆಂಡರ್ ಕರೆದು ಪ್ರತಿಮೆ ಮರುನಿರ್ಮಾಣಕ್ಕೆ ಆದೇಶ ಹೊರಡಿಸಿದ್ದಾರೆ.
ಪ್ರತಿಮೆ ನಿರ್ಮಾಣ ಪೂರ್ಣಗೊಳ್ಳುವವರೆಗೆ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಶಾಸ್ತ್ರೋಕ್ತವಾಗಿ ಪರಶುರಾಮನ ಪ್ರತಿಮೆ ಪ್ರತಿಷ್ಠಾಪನೆಯಾಗಬೇಕು. ಕಾರ್ಕಳದ ಗೌರವ ಮತ್ತು ಘನತೆ ಉಳಿಯಬೇಕು ಎಂದು ಹೇಳಿದರು.
ಕಳೆದ 22 ವರ್ಷಗಳಿಂದ ಶಾಸಕ ಸುನಿಲ್ ಕುಮಾರ್ ಮಾಡಿರುವ ಸಾಧನೆ ಏನು ಎಂಬುದನ್ನು ಜನರಿಗೆ ತಿಳಿಸಬೇಕು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದೇವಸ್ಥಾನಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಒಂದು ಕೋಟಿ ರೂಪಾಯಿ ಅನುದಾನ ತರಲು ಅವರಿಂದ ಸಾಧ್ಯವಾಗಿಲ್ಲ. ಪರಶುರಾಮ ಥೀಮ್ ಪಾರ್ಕ್ನ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ನಾಲ್ಕುವರೆ ಕೋಟಿ ರೂಪಾಯಿ ಸಾಕು ಎಂದು ಹೇಳಲಾಗಿತ್ತು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 60 ಕೋಟಿ ರೂಪಾಯಿ ಅನುದಾನ ಬಂದಿದೆ. ಅದರಲ್ಲಿ ನಾಲ್ಕುವರೆ ಕೋಟಿ ರೂಪಾಯಿಯನ್ನು ಥೀಮ್ ಪಾರ್ಕ್ ಕಾಮಗಾರಿಗೆ ಬಳಸಿಕೊಂಡು ಕಾಮಗಾರಿ ಪೂರ್ಣಗೊಳಿಸಬಹುದಿತ್ತು. ಆದರೆ ಅದನ್ನು ಶಾಸಕರು ಮಾಡಿಲ್ಲ ಎಂದು ಆರೋಪಿಸಿದರು.
ಪರಶುರಾಮನ ಪ್ರತಿಮೆ ಶಾಸ್ತ್ರೋಕ್ತವಾಗಿ ಮರುಸ್ಥಾಪನೆಯಾಗಲಿ. ಕಾರ್ಕಳದ ಗೌರವ, ಘನತೆ ಉಳಿಯಲಿ. ಸುನಿಲ್ ಕುಮಾರ್ ಅವರ ಸುಳ್ಳುಗಳಿಗೆ ಇಲ್ಲಿಗೇ ಅಂತ್ಯವಾಗಲಿ ಎಂದು ಮುನಿಯಾಲು ಉದಯಕುಮಾರ್ ಶೆಟ್ಟಿ ಹೇಳಿದರು.















