ಉಡುಪಿ: ಇದ್ರಿಷ್ ಹತ್ಯೆಯನ್ನು ಖಂಡಿಸಿ, ಅವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಮತ್ತು ಕುಟುಂಬಕ್ಕೆ ಸರಕಾರಿ ಉದ್ಯೋಗ ನೀಡಬೇಕೆಂದು ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ನಡೆಸಲು ಅನುಮತಿಗಾಗಿ ಭಾರತ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ಉಡುಪಿ ಜಿಲ್ಲಾ ಸಮಿತಿ ಸಲ್ಲಿಸಿದ ಮನವಿಗೆ ಉಡುಪಿಯ ಚುನಾವಣಾಧಿಕಾರಿಯೂ ಆಗಿರುವ ತಹಶೀಲ್ದಾರ್ ಸೀತಾ ಅವರು ಅನುಮತಿ ನಿರಾಕರಿಸಿದ್ದಾರೆ ಎಂದು ಪಕ್ಷದ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪಕ್ಷ ಎ.4ರ ಮಂಗಳವಾರದಂದು ಪತ್ರ ನೀಡಿದ್ದು, ಎ.7 ಅದಕ್ಕೆ ಹಿಂಬರಹ ನೀಡಲಾಗಿದೆ. ಇದನ್ನು ಖಂಡಿಸಿ ಸಿಪಿಎಂ ಮುಖಂಡರು ಹಾಗೂ ಕಾರ್ಯಕರ್ತರ ನಿಯೋಗವೊಂದು ಚುನಾವಣಾಧಿಕಾರಿಗಳಿಗೆ ಪ್ರತಿಭಟನಾ ಪತ್ರವನ್ನು ನೀಡಿದ್ದು, ಅವರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಆದರೆ ಚುನಾವಣಾ ನೀತಿ ಸಂಹಿತೆಗೂ ಪ್ರತಿಭಟನೆಗಳಿಗೂ ಯಾವುದೇ ಸಂಬಂಧ ಇಲ್ಲ. ತಮಗೆ ಈಗಾಗಲೇ ತಿಳಿಸಿದಂತೆ ತುಮಕೂರಿನಲ್ಲಿ ಪ್ರತಿಭಟನೆ ನಡೆಸಲು ಲಿಖಿತ ಅನುಮತಿ ನೀಡಲಾಗಿದೆ ಎಂದು ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ.
ಇದ್ರಿಷ್ ಹತ್ಯೆ ಪ್ರಕರಣವು ಅಮಾನವೀಯವಾಗಿದ್ದು, ರಾಜ್ಯದ ಬಹುತೇಕ ಜನರು ಇದನ್ನು ಖಂಡಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಪ್ರತಿಭಟನೆಗೆ ಅವಕಾಶ ನೀಡದೆ ಇರುವ ಕ್ರಮವನ್ನು ಪ್ರತಿಭಟಿಸುತ್ತೇವೆ. ಇದ್ರಿಷ್ ಹತ್ಯೆ ಪ್ರಕರಣ ಕುರಿತಂತೆ ನಮ್ಮ ಮನವಿಯನ್ನು ರಾಜ್ಯದ ಮುಖ್ಯಮಂತ್ರಿಗಳಿಗೆ ತಲುಪಿಸಬೇಕೆಂದು ಪತ್ರದಲ್ಲಿ ತಿಳಿಸಲಾಗಿದೆ.
ಮುಖ್ಯಮಂತ್ರಿಗಳಿಗೆ ಕಳುಹಿಸಿದ ಮನವಿ ಪತ್ರದಲ್ಲಿ ಅಮಾಯಕ ಇದ್ರಿಸ್ ಕುಟುಂಬಕ್ಕೆ ಸರಕಾರಿ ಕೆಲಸ, 25 ಲಕ್ಷ ರೂ.ಪರಿಹಾರ ಹಾಗೂ ಇತರ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಮನವಿ ಮಾಡಲಾಗಿದೆ. ಕನಕಪುರ ತಾಲೂಕಿನ ಸಾತನೂರು ಬಳಿ ಗೋರಕ್ಷಕ ವೇಷದ ಕೊಲೆಗಡುಕ ಮತಾಂಧ ಗೂಂಡಾ ಪಡೆ ಇದ್ರಿಸ್ ಪಾಷಾ ಎಂಬ ಬಡ ಮುಸ್ಲಿಂ ಕಾರ್ಮಿನನ್ನು ಬಲವಂತವಾಗಿ, ಅಮಾನವೀಯ ರೀತಿಯಲ್ಲಿ ಹಿಂಸಿಸಿ ಕೊಲೆ ಮಾಡಿರುವುದ ಖಂಡನೀಯ ಎಂದು ಹೇಳಲಾಗಿದೆ.
ಮತಾಂಧ ಶಕ್ತಿಗಳು ಕಾನೂನನ್ನು ಕೈಗೆತ್ತಿಕೊಂಡು ಕಾನೂನು ಸುವ್ಯವಸ್ಥೆಗೆ ಸವಾಲು ಹಾಕುತ್ತಿರುವುದನ್ನು ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ಬಲವಾಗಿ ಖಂಡಿಸುತ್ತದೆ. ಅಲ್ಲದೇ ಚುನಾವಣೆ ಸಂದರ್ಭದಲ್ಲಿ ನಡೆಯುವ ಇಂತಹ ದುಷ್ಕೃತ್ಯಗಳ ಹಿಂದಿನ ಸಂಚನ್ನು ಬಯಲುಗೊಳಿಸುವಂತೆ ಪಕ್ಷ ಒತ್ತಾಯಿಸುತ್ತದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ರಾಜ್ಯ ಸರಕಾರ ಹಾಗೂ ಆಡಳಿತ ಇಂತಹ ಮತಾಂಧರ ದಾಳಿಗಳನ್ನು, ಕೊಲೆಗಳನ್ನು ಗಂಭೀರವಾಗಿ ಪರಿಗಣಿಸಿ, ಕಠಿಣ ಕ್ರಮಗಳ ಮೂಲಕ ನಿಗ್ರಹಿಸದೇ ಹೋದುದರಿಂದ ಇಂತಹ ದುಷ್ಕೃತ್ಯಗಳು, ಕೊಲೆಗಳು ರಾಜ್ಯದಲ್ಲಿ ಮತ್ತಷ್ಟು ಬೆಳೆಯುತ್ತಿವೆ ಎಂಬುದನ್ನು ಸಿಪಿಎಂ ಬೊಟ್ಟು ಮಾಡಿದೆ.
ರಾಜ್ಯ ಸರಕಾರ ಅನುಸರಿಸುತ್ತಿರುವ ಎಲ್ಲಾ ಧಾರ್ಮಿಕ ಹಾಗೂ ಜಾತಿ ತಾರತಮ್ಯದ ನೀತಿಗಳನ್ನು ಈ ಕೂಡಲೇ ಕೈಬಿಟ್ಟು ಧಾರ್ಮಿಕ ಧ್ವೇಷದ ಕೊಲೆಗಳಿಗೆ ಕೊನೆ ಹಾಡಬೇಕೆಂದು ಸಿಪಿಎಂ ಒತ್ತಾಯಿಸುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ನಿಯೋಗದಲ್ಲಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕಾರ್ಯಕಾರಿ ಮಂಡಳಿ ಸದಸ್ಯರಾದ ಎಚ್ ನರಸಿಂಹ, ಸುರೇಶ್ ಕಲ್ಲಾಗರ, ವೆಂಕಟೇಶ್ ಕೋಣಿ, ಸಿಪಿಎಂ ಉಡುಪಿ ತಾಲೂಕು ಕಾರ್ಯದರ್ಶಿ ಶಶಿಧರ ಗೊಲ್ಲ ಉಪಸ್ಥಿತರಿದ್ದರು.