ಕುಂದಾಪುರ: ಭಾನುವಾರ ಮನೆ ಸಮೀಪ ಮಾರಾಟ ಮಾಡಲು ಬಂದಿರುವ ಐಸ್‌ಕ್ಯಾಂಡಿ ಸೇವಿಸಿದ ಪರಿಣಾಮ ಮಕ್ಕಳು ಸೇರಿದಂತೆ ನೂರಕ್ಕೂ ಅಧಿಕ ಪೋಷಕರು ಅಸ್ವಸ್ಥರಾದ ಘಟನೆ ಇಲ್ಲಿನ ತೊಂಬತ್ತುವಿನಲ್ಲಿ ನಡೆದಿದೆ.
ತೀವ್ರ ಅಸ್ವಸ್ಥಗೊಂಡ ಮಕ್ಕಳನ್ನು ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾಗೂ ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬಿದ್ಕಲ್‌ಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲವರು ದಾಖಲಾಗಿದ್ದು. ಇನ್ನೂ ಹಲವರು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.
ಭಾನುವಾರ ಹೆಂಗವಳ್ಳಿ, ಬೆಳ್ವೆ, ತೊಂಬತ್ತು ಪ್ರದೇಶಗಳಿಗೆ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯೋರ್ವ ಐಸ್‌ಕ್ರೀಮ್ ಮಾರಾಟ ಮಾಡಿ ತೆರಳಿದ್ದನು. ಐಸ್‌ಕ್ರೀಮ್ ತಿಂದ ಮಕ್ಕಳಿಗೆ ತಡರಾತ್ರಿ ವಾಂತಿ-ಭೇದಿ ಕಾಣಿಸಿಕೊಂಡಿದ್ದು, ಮೊದಮೊದಲು ಯಾರೂ ಕೂಡ ಈ ಬಗ್ಗೆ ತಲೆಕೆಡಸಿಕೊಳ್ಳದೇ ಮಕ್ಕಳಿಗೆ ಮನೆ ಮದ್ದು ಮಾಡಿ ಕೊಟ್ಟಿದ್ದರು. ಆದರೂ ಸಮಸ್ಯೆ ಉಲ್ವಣಿಸಿದಾಗ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಅಸ್ವಸ್ಥಗೊಂಡ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗೆ ಇಬ್ನರು ಮಹಿಳೆಯರ ಸಮೇತ ಒಟ್ಟು ೯ ಮಂದಿಯನ್ನು ಕುಂದಾಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನು ಕೆಲವು ಮಂದಿ ಹಾಲಾಡಿ, ಬಿದ್ಕಲ್‌ಕಟ್ಟೆ ಬೆಳ್ವೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಇದೆ.
ಆಸ್ಪತ್ರೆಗೆ ದಾಖಲಾಗುವ ವೇಳೆ ಜ್ವರ, ವಾಂತಿ, ಭೇದಿಯಿಂದ ಬಳಲುತ್ತಿದ್ದು ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಕೆಲವು ಮಕ್ಕಳು ನಿಶಕ್ತಿಯಿಂದ ಬಳಲುತ್ತಿದ್ದು ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದೇವೆಂದು ಮಕ್ಕಳ ತಜ್ಞೆ ಡಾ. ಸುಜಾತಾ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ರಾಬರ್ಟ್ ತಿಳಿಸಿದ್ದಾರೆ.
ಐಸ್ ಕ್ಯಾಂಡಿ ತಿಂದವರು ಮಾತ್ರ ಅಸ್ವಸ್ಥ:
ಈ ಭಾಗಗಳಿಗೆ ಕೆಲವು ತಿಂಗಳುಗಳಿಂದ ವ್ಯಕ್ತಿಯೋರ್ವ ಐಸ್‌ಕ್ರೀಂ ಮಾರಲು ಬರುತ್ತಿದ್ದು, ಸ್ಥಳೀಯರು ಈತನ ಬಳಿ ಐಸ್‌ಕ್ರೀಂ ಖರೀದಿಸಿ ತಿನ್ನುತ್ತಿದ್ದರು. ಮಕ್ಕಳು ಮನೆಯಲ್ಲಿರುವುದರಿಂದ ಹೆಚ್ಚಾಗಿ ಭಾನುವಾರ ಬರುತ್ತಿದ್ದ ಐಸ್‌ಕ್ರೀಂ ಮಾರಾಟದ ವ್ಯಕ್ತಿ ಕಳೆದ ಭಾನುವಾರವೂ ಬಂದು ಐಸ್‌ಕ್ರೀಂ ಮಾರಾಟ ಮಾಡಿ ಹೋಗಿದ್ದನು. ಗಡ್‌ಬಡ್, ಕೋನ್ ಸೇರಿದಂತೆ ಇನ್ನಿತರ ಐಸ್‌ಕ್ರೀಂ ಸೇವಿಸಿದವರು ಯಾರೂ ಅಸ್ವಸ್ಥಗೊಂಡಿಲ್ಲ ಎನ್ನಲಾಗಿದ್ದು, ಈತನ ಬಳಿ ಐಸ್‌ಕ್ಯಾಂಡಿ ಖರೀದಿಸಿ ತಿಂದವರು ಮಾತ್ರ ಅಸ್ವಸ್ಥಗೊಂಡಿರುವ ಮಾಹಿತಿ ಬೆಳಕಿ ಬಂದಿದೆ.