ಭಾರತ-ಪಾಕ್ ಪಂದ್ಯದ ವೇಳೆ ಅಭಿಮಾನಿಗಳಿಂದ ಅನುಚಿತ ವರ್ತನೆ ಆರೋಪಿಸಿ ಐಸಿಸಿಗೆ ದೂರು ನೀಡಿದ ಪಿಸಿಬಿ

ನವದೆಹಲಿ: ಅಹಮದಾಬಾದ್‌ನಲ್ಲಿ ಅಕ್ಟೋಬರ್ 14ರಂದು ನಡೆದ ಭಾರತ ವಿರುದ್ಧದ ಹೈ-ವೋಲ್ಟೇಜ್ ಪಂದ್ಯದ ವೇಳೆ ಆತಿಥೇಯ ಪ್ರೇಕ್ಷಕರು ತೋರಿದ ‘ಅನುಚಿತ ವರ್ತನೆ’ಯ ಬಗ್ಗೆ ಆಕ್ಷೇಪವೆತ್ತಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ಐಸಿಸಿಗೆ ದೂರು ನೀಡಿದೆ.

ಒಂದು ಲಕ್ಷಕ್ಕೂ ಅಧಿಕ ಪ್ರೇಕ್ಷಕರ ಆಸನ ಸಾಮರ್ಥ್ಯ ಹೊಂದಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್‌ನ ಬಹುನಿರೀಕ್ಷಿತ ಭಾರತ-ಪಾಕ್ ಪಂದ್ಯದಲ್ಲಿ ಪಾಕ್ ಆಟಗಾರರನ್ನು ಗುರಿಯಾಗಿಸಿಕೊಂಡು ಭಾರತೀಯ ಪ್ರೇಕ್ಷಕರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ವರ್ತನೆ ತೋರಿದ್ದಾರೆ. ಇದು ಐಸಿಸಿ ಟೂರ್ನಿ ಆಯೋಜಿಸುವ ಕ್ರಮವಲ್ಲ ಎಂದು ಪಿಸಿಬಿ ದೂರು ಸಲ್ಲಿಸಿತ್ತು.

ಐಸಿಸಿ ಪ್ರತಿ ದೂರನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತದೆ ಆದರೆ ನೀತಿ ಸಂಹಿತೆ ಕೇವಲ ವ್ಯಕ್ತಿಗಳಿಗೆ ಸಂಬಂಧಿಸಿದೆ. ಪಿಸಿಬಿ ನಿಖರವಾಗಿ ಏನನ್ನು ಬಯಸುತ್ತಿದೆ ಎಂದು ನನಗೆ ತಿಳಿದಿಲ್ಲ ಆದರೆ ಯಾವುದೇ ಸ್ಪಷ್ಟವಾದ ಕ್ರಮವನ್ನು ತೆಗೆದುಕೊಳ್ಳುವುದು ತುಂಬಾ ಕಷ್ಟಕರವಾಗಿರುತ್ತದೆಎಂದು ಬಿಸಿಸಿಐ ಮತ್ತು ಐಸಿಸಿ ಎರಡರಲ್ಲೂ ಕೆಲಸ ಮಾಡಿದ ಅನುಭವಿ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ವರ್ಣಭೇದ ನೀತಿಯ ಆರೋಪಗಳಿದ್ದರೆ ಐಸಿಸಿ ವ್ಯಕ್ತಿಗಳನ್ನು ಗುರುತಿಸಬಹುದು ಆದರೆ ಸಾವಿರಾರು ಜನರು ಘೋಷಣೆ ಕೂಗುತ್ತಿದ್ದರೆ, ನೀವು ಏನು ಮಾಡಬಹುದು? ಗ್ಯಾಲರಿಯಿಂದ ಎಸೆದ ಯಾವುದೇ ‘ಕ್ಷಿಪಣಿ’ಯಿಂದ ಯಾವ ಆಟಗಾರನೂ ಗಾಯಗೊಂಡಿಲ್ಲ ಅಲ್ಲವೇ? ಒಂದು ಪಕ್ಷಕ್ಕೆ ಬೆಂಬಲ ನೀಡುವ ಜನಸಮೂಹ ಬರುವುದು ಸಹಜ. ಅದು ಗಣ್ಯ ಕ್ರೀಡೆಯ ಒತ್ತಡ ಎಂದು ಅವರು ಹೇಳಿದ್ದಾರೆ.

ಪಂದ್ಯದ ವೇಳೆ ಭಾರತೀಯ ಅಭಿಮಾನಿಗಳು ‘ಜೈ ಶ್ರೀರಾಮ್’ ಘೋಷಣೆ ಕೂಗಿದ್ದರು. ಬಾಬರ್ ಅಜಮ್ ಟಾಸ್ ಸೋತ ವೇಳೆ ಹಾಗೂ ಮೊಹಮ್ಮದ್ ರಿಜ್ವಾನ್ ಪವಿಲಿಯನ್ ಗೆ ತೆರಳಿದ ವೇಳೆಯೂ ಘೋಷಣೆ ಕೂಗಿದ್ದರು ಎಂದು ಪಿಸಿಬಿ ದೂರು ನೀಡಿತ್ತು. ಪಂದ್ಯದ ವೇಳೆ ಹಾಜರಿದ್ದ ಪಿಸಿಬಿ ಅಧ್ಯಕ್ಷ ಝಕಾ ಆಶ್ರ್ ಮೂರು ದಿನಗಳ ಬಳಿಕ ಐಸಿಸಿಗೆ ದೂರು ನೀಡಿದ್ದಾರೆ. ಪಾಕ್ ಪತ್ರಕರ್ತರು, ಅಭಿಮಾನಿಗಳಿಗೆ ವೀಸಾ ವಿಳಂಬದ ಬಗ್ಗೆಯೂ ಅವರು ದೂರಿದ್ದಾರೆ.

ವಿಶ್ವಕಪ್ ಟೂರ್ನಿಯ ಪಂದ್ಯ ಬಿಸಿಸಿಐನ ಕಾರ್ಯಕ್ರಮ ಎನ್ನುವಂತೆ ಭಾಸವಾಯಿತು. ಪ್ರೇಕ್ಷಕರ ಬೆಂಬಲವೂ ಪಾಕ್ ಆಟಗಾರರಿಗೆ ದೊರೆಯಲಿಲ್ಲ. ತಂಡದ ಸೋಲು-ಗೆಲುವಿನಲ್ಲಿ ಬೆಂಬಲಿಗರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಸೋಲಿನ ಬಳಿಕ ಪಾಕ್ ಕೋಚ್ ಮಿಕ್ಕಿ ಅರ್ಥರ್ ಅಸಮಾಧಾನ ವ್ಯಕ್ತಪಡಿಸಿದ್ದರು.

ಪ್ರಮಾಣಿತ ಪ್ರೋಟೋಕಾಲ್‌ನ ಭಾಗವಾಗಿ, ICC ತನ್ನ ಈವೆಂಟ್‌ಗಳ ಸಮಯದಲ್ಲಿ ಜಾಹೀರಾತು ಫಲಕಗಳ ಮೂಲಕ ವರ್ಣಭೇದ ನೀತಿ ಮತ್ತು ಶೂನ್ಯ ಸಹಿಷ್ಣುತೆಯ ನೀತಿಯ ಮೇಲೆ ತನ್ನ ನಿಲುವನ್ನು ಪ್ರದರ್ಶಿಸುತ್ತದೆ.