ಇಬ್ಬರು ಮಕ್ಕಳಿಗೆ ವಿಷವಿಕ್ಕಿ ಕೊಂದ ಪಾಪಿ ಅಪ್ಪನಿಗೆ ಮರಣದಂಡನೆ

ಕುಂದಾಪುರ: ಮಕ್ಕಳು ಹಾಗೂ ಪತ್ನಿಗೆ ವಿಷವುಣಿಸಿ ತಾನೂ ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿ, ಇಬ್ಬರ ಮಕ್ಕಳ ಸಾವು, ಪತ್ನಿಯ ಕೊಲೆ ಯತ್ನಕ್ಕೆ ಕಾರಣನಾದ ಬೈಂದೂರು ತಾಲೂಕು ಗಂಗನಾಡು ಗೋಳಿಕಕ್ಕಾರು ನಿವಾಸಿ ಶಂಕರನಾರಾಯಣ ಹೆಬ್ಬಾರ್ (43)ಗೆ ಗಲ್ಲು ಶಿಕ್ಷೆ ವಿಧಿಸಿ ಕುಂದಾಪುರ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ ನ್ಯಾಯಾದೀಶ ಪ್ರಕಾಶ್ ಖಂಡೇರಿ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.


ಮನೆ ಕೆಲಸದ ಯುವತಿಯೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದು ಆಕೆ ಇನ್ನೊಂದು ಮದುವೆಯಾದ್ದರಿಂದ ಜಿಗುಪ್ಸೆಗೊಂಡು ಮನೆಮಂದಿಗೆ ವಿಷವುಣಿಸಿ ತಾನೂ ವಿಷವುಂಡು ಇಬ್ಬರು ಮಕ್ಕಳ ಸಾವು, ಪತ್ನಿಯ ಕೊಲೆಯತ್ನ ನಡೆಸಿರುವ ಆರೋಪ ಜನವರಿ 3ರಂದು ಸಾಬೀತಾಗಿದ್ದು, ಶನಿವಾರ ಕೋರ್ಟ್ ಶಿಕ್ಷೆ ಪ್ರಕಟಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಬೈಂದೂರು ವೃತ್ತ ನಿರೀಕ್ಷಕ ರಾಘವ ಪಡೀಲ್ ಚಾರ್ಜ್ ಶೀಟ್ ಸಲ್ಲಿಸಿದ್ದರು. ಹೆಬ್ಬಾರ್ ಪತ್ನಿ ಸಹಿತ 17 ಮಂದಿ ಸಾಕ್ಷ್ಯಾಧಾರಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆದಿದ್ದು, ಶನಿವಾರ ತೀರ್ಪು ಹೊರಬಿದ್ದಿದೆ. ಆರೋಪಿ ವಿರುದ್ಧ ಮಾಡಲಾದ ಕೊಲೆ/ಸೆಕ್ಷನ್ 302ಗೆ ಮರಣದಂಡನೆ ಶಿಕ್ಷೆ, ಕೊಲೆಯತ್ನಕ್ಕೆ 7 ವರ್ಷ ಕಠಿಣ ಶಿಕ್ಷೆ, 10 ಸಾವಿರ ದಂಡ ತಪ್ಪಿದಲ್ಲಿ 1 ತಿಂಗಳು ಶಿಕ್ಷೆ, ವಿಷವುಣಿಸಿದ್ದಕ್ಕೆ 10 ವರ್ಷ ಕಠಿಣ ಶಿಕ್ಷೆ, 10 ಸಾವಿರ ದಂಡ ತಪ್ಪಿದಲ್ಲಿ 2 ತಿಂಗಳು ಶಿಕ್ಷೆ, ಸಾಕ್ಷ್ಯನಾಶ ಮಾಡಿದ್ದಕ್ಕೆ 7 ವರ್ಷ ಕಠಿಣ ಶಿಕ್ಷೆ, 10 ಸಾವಿರ ದಂಡ. ಆತ್ಮಹತ್ಯೆ ಯತ್ನಕ್ಕೆ 6 ತಿಂಗಳು ಶಿಕ್ಷೆ ವಿಧಿಸಲಾಗಿದೆ. ಪತ್ನಿಯು ಕಾನೂನು ಸೇವಾ ಪ್ರಾಧಿಕಾರದಲ್ಲಿ ಪರಿಹಾರ ಕಂಡುಕೊಳ್ಳಬಹುದೆಂದು ನ್ಯಾಯಾಧೀಶರು ತಿಳಿಸಿದ್ದಾರೆ. ಶಿಕ್ಷೆ ಪ್ರಮಾಣ ಪ್ರಕಟ ಕುರಿತು ವಾದ ಮಂಡನೆ ವೇಳೆ ಅಪರಾಧಿಗೆ ಕಾನೂನು ವ್ಯಾಪ್ತಿಯಲ್ಲಿ ಗರಿಷ್ಟ ಶಿಕ್ಷೆ ನೀಡಲು ಜಿಲ್ಲಾ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

ಶಂಕರನಾರಾಯಣ ಹೆಬ್ಬಾರ್, ಪತ್ನಿ ಮಹಾಲಕ್ಷ್ಮಿ, 10ನೇ ತರಗತಿ ಓದುತ್ತಿದ್ದ ಮಗ ಅಶ್ವಿನ್ ಕುಮಾರ್ ಹೆಬ್ಬಾರ್ ಮತ್ತು 8ನೇ ತರಗತಿ ಓದುತ್ತಿದ್ದ ಮಗಳು ಐಶ್ವರ್ಯ ಲಕ್ಷ್ಮಿ ಎಂಬವರಿಗೆ ಹೆಬ್ಬಾರ್ ವಿಷ ಉಣಿಸಿದ್ದು, ಮಕ್ಕಳಿಬ್ಬರೂ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಪತಿ, ಪತ್ನಿ ಅಪಾಯದಿಂದ ಪಾರಾಗಿದ್ದರು. ಮೇಲ್ನೋಟಕ್ಕೆ ಇದೊಂದು ಸಾಮೂಹಿಕ ಆತ್ಮಹತ್ಯೆ ಎಂಬ ಶಂಕೆ ವ್ಯಕ್ತವಾಗಿದ್ದು, ಡೆತ್‍ನೋಟ್ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಶಂಕರನಾರಾಯಣ ಹೆಬ್ಬಾರ್‍ಗೆ ಮನೆಕೆಲಸದಾಕೆಯೊಂದಿಗಿರುವ ಅಕ್ರಮ ಸಂಬಧವೇ ವಿಷ ಪ್ರಾಶನಕ್ಕೆ ಕಾರಣ ಎಂಬುದು ತನಿಖೆ ವೇಳೆ ಬಯಲಾಗಿತ್ತು. ಕುಟುಂಬ ಸದಸ್ಯರು ವಿಷ ಕುಡಿದ ವಿಷಯ ಬೆಳಗ್ಗೆ ಹಾಲು ತರುವ ವ್ಯಕ್ತಿಯಿಂದ ಬೆಳಕಿಗೆ ಬಂದಿದ್ದು, ಸ್ಥಳೀಯರು ನಾಲ್ಕು ಜನರನ್ನು ಆಸ್ಪತ್ರೆ ಸೇರಿಸಿದ್ದರು. ಮಕ್ಕಳು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರೆ, ಪತ್ನಿ ಮಹಾಲಕ್ಷ್ಮೀ ಗುಣಮುಖರಾಗಿ ಮನೆಗೆ ಮರಳಿದ್ದರೆ, ಆರೋಪಿ ಶಂಕರನಾರಾಯಣ ಹೆಬ್ಬಾರ್ ಮಾತ್ರ ಆಹಾರ ಕಡಿಮೆ ಸೇವಿಸಿದ್ದರಿಂದ ಬದುಕುಳಿದಿದ್ದು ಜೈಲು ಪಾಲಾಗಿದ್ದನು.

ಪರಸ್ತ್ರೀ ವ್ಯಾಮೋಹಕ್ಕೆ ತನ್ನ ಮಕ್ಕಳನ್ನೇ ಕೊಂದ ಅಪ್ಪ!
ಶಂಕರನಾರಾಯಣ ಹೆಬ್ಬಾರ್ ಅಡುಗೆ ವೃತ್ತಿ ಮಾಡಿಕೊಂಡಿದ್ದು, 20 ವರ್ಷಗಳ ಹಿಂದೆ ಮಹಾಲಕ್ಷ್ಮೀ ಜೊತೆ ವಿವಾಹವಾಗಿದ್ದನು. ವಿವಾಹಿತ ಹೆಬ್ಬಾರ್‍ಗೆ ಎರಡು ಮಕ್ಕಳಿದ್ದರೂ ಮನೆಗೆಲಸಕ್ಕೆ ಬರುತ್ತಿದ್ದ ಯುವತಿ ಜೊತೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದನು. ಈ ಕುರಿತು ಮನೆಯಲ್ಲಿ ಆಗಾಗ ಪತಿ-ಪತ್ನಿಯ ನಡುವೆ ಜಗಳ ಕೂಡಾ ನಡೆದಿತ್ತು. ಯುವತಿ ಜೊತೆ ಸಂಪರ್ಕ ಇದ್ದ ಬಗ್ಗೆ ಹೆಬ್ಬಾರ್ ಡೆತ್ ನೋಟ್‍ನಲ್ಲಿ ಸ್ಪಷ್ಟವಾಗಿ ಬರೆದಿದ್ದ. ನಂಬಿದ ಯುವತಿ ಕೈಕೊಟ್ಟು ಬೇರೊಬ್ಬರ ಮದುವೆ ಆದ ಕಾರಣ ಹೆಬ್ಬಾರ್ ತೀರಾ ಮನನೊಂದಿದ್ದು, ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬ ವಿಷಯ ಮನೆಯಲ್ಲಿ ಹೇಳಿದಾಗ ನೀವೊಬ್ಬರೆ ಬೇಡ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ಹೇಳಿದ್ದರಿಂದ ಎಲ್ಲರೂ ಕೀಟನಾಶಕ ಸೇವಿಸಿದ್ದೇವೆ ಎಂದು ಹೆಬ್ಬಾರ್ ತನ್ನ ಡೆತ್ ನೋಟ್‍ನಲ್ಲಿ ಬರೆದಿಟ್ಟಿದ್ದನು.

ಪಾಪಪ್ರಜ್ಞೆ ಇಲ್ಲದ ಹೆಬ್ಬಾರ್!
ಮಕ್ಕಳ ಹತ್ಯೆ ಹಿನ್ನೆಲೆ ನ್ಯಾಯಾದೀಶರು ಮರಣ ದಂಡನೆ ತೀಪು ಪ್ರಕಟಿಸಿದ ನಂತರ ಶಂಕರನಾರಾಯಣ ಹೆಬ್ಬಾರ್ ಕೊಂಚವೂ ವಿಚಲಿತನಾಗದೆ ಹಾಗೇ ನಿಂತಿದ್ದನು. ತೀರ್ಪು ಪ್ರಕಟಿಸುವ ಮೊದಲು ನ್ಯಾಯಾಲಯ ಹೊರ ಆವರಣದಲ್ಲಿ ಪೊಲೀಸರೊಂದಿಗೆ ಬೆಂಚಿನಲ್ಲಿ ಕೂತು ಆರಾಮಾಗಿ ಮಾತನಾಡುತ್ತಿದ್ದು, ತೀರ್ಪಿನ ಬಳಿಕವೂ ನ್ಯಾಯಾಲಯದ ಹೊರಗಡೆ ಆರಾಮಾಗಿ ಕೂತ ದೃಶ್ಯ ಕಂಡುಬಂದಿತು.

ಗಲ್ಲು ಶಿಕ್ಷೆಗೆ ಗುರಿಯಾದ ಮೂರನೇ ಅಪರಾಧಿ
ಮಕ್ಕಳ ಹತ್ಯೆ ಹಿನ್ನೆಲೆಯಲ್ಲಿ ಮರಣದಂಡನೆ ತೀರ್ಪು ಪ್ರಕಟಿಸಿದ ನಂತರ ನ್ಯಾಯಾದೀಶರು ತೀರ್ಪು ಬರೆದ ಪೆನ್ನಿನ ನಿಬ್ಬು ಮುರಿದು ಪೆನ್ ಬಿಸಾಕಿದರು. ಕುಂದಾಪುರದಲ್ಲಿ ಈ ಹಿಂದೆ ಶಾಲಾ ವಾಹನ ಸಹಾಯಕಿ ಕೊಲೆ ಆರೋಪಿ ಹಾಗೂ ಗರ್ಭಿಣಿ ಮಹಿಳೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ಪ್ರಕಟಿಸಲಾಗಿತ್ತು. ಇದೀಗ ಶಂಕರನಾರಾಯಣ ಹೆಬ್ಬಾರ್ ಜಿಲ್ಲೆಯಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಮೂರನೇ ಅಪರಾಧಿ. ಶಾಲಾ ವಾಹನ ಸಹಾಯಕಿ ಕೊಲೆ ಆರೋಪಿ ಹೈಕೋರ್ಟ್‍ಗೆ ಅಫೀಲು ಮಾಡಿದ್ದು ಅಲ್ಲಿ ನಿರಪರಾಧಿಯೆಂದು ಬಿಡುಗಡೆಗೊಂಡಿದ್ದಾನೆ.