ತುಂಬು ಹರೆಯದ ಹುಡುಗಿ ನಾನು: ಪ್ರತೀ ವಾರ ನನ್ನ ಕತೆ ಹೇಳ್ತೇನೆ: ಹೊಸ ಅಂಕಣ “ಹುಡುಗಿಯೊಬ್ಬಳ ಪಿಸುಮಾತು”

ನಾನೊಬ್ಬಳು ಹುಡುಗಿ. ಅಷ್ಟೇನೂ ಬಿಳುಪೂ ಅಲ್ಲದ, ಕಪ್ಪೂ ಇಲ್ಲದ ಸಾಧಾರಣ ರೂಪಿನ, ಸ್ವಲ್ಪ ದಪ್ಪ ಮೈಕಟ್ಟಿನ ಹರೆಯದ ಹುಡುಗಿ. ನಾನು ಹುಟ್ಟಿದಾಗ ಚೊಚ್ಚಲ ಹೆರಿಗೆ ನನ್ನಮ್ಮನಿಗೆ. ಎಲ್ಲರೂ ಸೇರಿ ಸಿಹಿ ಹಂಚಿ ಸಂಭ್ರಮಿಸಿದ್ದರಂತೆ. ನನ್ನ ನಸು ನಗು, ಮೊದಮೊದಲ ತೊದಲು ಮಾತು, ಎದ್ದು-ಬಿದ್ದು ಪುಟು ಪುಟು ನಡೆಯೋ ನನ್ನಂದ ಎಲ್ಲರ ದೃಷ್ಟಿ ಬೀಳುವಂತಿತ್ತಂತೆ.

ಗೊಂಬೆಯಂತಿದ್ದ ನನ್ನ ಬಾಲ್ಯದ ಪ್ರತಿ ಕ್ಷಣಗಳನ್ನೂ ನನ್ನಪ್ಪ- ಅಮ್ಮ, ಅಜ್ಜ- ಅಜ್ಜಿ ಅವರ ಬಾಲ್ಯದಂತೆಯೇ ಅಚ್ಚರಿಯಿಂದ ಸಂಭ್ರಮಿಸಿದ್ದರಂತೆ. ನನ್ನ ಬೇಕು-ಬೇಡಗಳಿಗೆ ಇಲ್ಲವೆನ್ನದೆ ಪ್ರೀತಿಯ ಹೂಮುತ್ತನಿತ್ತು ಇಲ್ಲಿಯವರೆಗೆ ಬೆಳೆಸಿದರು. ನಾನಿಂದು ಬೆಳೆದು ನಿಂತ ಹದಿನೆಂಟರ ಹರೆಯದ ಹುಡುಗಿಯಾಗಿದ್ದೇನೆ.

ನನಗೂ ನನ್ನದೇ ಸುಂದರ ಕನಸುಗಳಿವೆ. ಅವುಗಳಿಗೆ ರೆಕ್ಕೆ-ಪುಕ್ಕ ಸೇರಿ ಬಲಿಯುತ್ತಿದೆ. ನೀಲಾಕಾಶದಲ್ಲಿ ಸ್ವತಂತ್ರಳಾಗಿ ಹಾರುವ ಆಸೆ ನನಗೆ. ಎಲ್ಲರಂತೆ ನಾನೂ ಮಧ್ಯಮ ವರ್ಗದ ಸಾಮಾನ್ಯ ಹುಡುಗಿ. ಓದು-ಬರಹದಲ್ಲಿ ಆಸಕ್ತಿಯಿದ್ದರೂ ಸಾಧಾರಣ. ಹಾಡು, ಡ್ಯಾನ್ಸು, ಚಿತ್ರ ಎಲ್ಲದರಲ್ಲೂ ಸ್ವಲ್ಪ ಮಟ್ಟಿಗಿನ ಆಸಕ್ತಿ ಇದೆ. ನನ್ನೊಳಗೂ ನೋವು-ನಲಿವುಗಳಿವೆ. ಪ್ರೀತಿಯ ಕತೆಗಳಿವೆ. ಎಲ್ಲಾ ಹುಡುಗಿಯರಿಗಿರುವಂತೆ ತಲ್ಲಣ, ನಾಚಿಕೆ, ಹಿಂಜರಿಕೆಗಳಿವೆ. ನನ್ನ ಭವಿಷ್ಯ ಮುಂದೇನು? ಹೇಗೆ? ಎನ್ನುವ ಪ್ರಶ್ನೆಗಳಿವೆ. ಎಲ್ಲವನೂ ಕೇಳುವ ಕಿವಿಗಳಿಗೆ ಕಾಯುತ್ತಿದ್ದೇನೆ. ಪ್ರತಿ ಶುಕ್ರವಾರ ನಾನು ನಿಮ್ಮೊಂದಿಗೆ ನನ್ನ, ನನ್ನಂತಹಾ ಹರೆಯದ ಹುಡುಗಿಯರ ಕತೆಗಳೊಂದಿಗೆ ಬರುವೆ. ಕೇಳ್ತೀರಲ್ವಾ?

♥ಮಲ್ಲಿಗೆ ಮೊಗ್ಗಿನ ಹುಡುಗಿ