ಹುಡುಗರ ಜೊತೆ ಸೇರೋಕೆ ಏನೋ ಒಂಥರಾ ಅನ್ನಿಸಿದ ಆ ಕ್ಷಣ:ಹುಡುಗಿಯೊಬ್ಬಳ ಪಿಸುಮಾತು

ನನ್ನ ತಂಗಿ‌ ಹೈಸ್ಕೂಲ್ ಓದ್ತಾಳೆ. ಮೊನ್ನೆ ರೂಮಲ್ಲಿ ಕೂತ್ಕೊಂಡು ಏನೋ ಮಾಡ್ತಿದ್ಲು. ಅಮ್ಮ ಒಂದು ಸಣ್ಣ ಕೆಲಸ‌, ಅಂದ್ರೆ ಯಾವುದೋ ಒಂದು ವಸ್ತುವನ್ನು ತಂದುಕೊಡಲು ಹೇಳಿದಳು. ಇವಳು “ಹುಂ” ಎಂದವಳು ಐದು ನಿಮಿಷವಾದರೂ ಅಮ್ಮ ಹೇಳಿದ ಕೆಲಸ‌ ಮಾಡ್ಲಿಲ್ಲ, ಅಮ್ಮ ಮತ್ತೊಮ್ಮೆ “ತಂದುಕೊಡ್ತೀಯಾ” ಎಂದಳಷ್ಟೇ. ಇವಳಿಗೆ ಎಲ್ಲಿತ್ತೋ ಸಿಟ್ಟು ಗೊತ್ತಿಲ್ಲ, ಅಮ್ಮನ ಮೇಲೆ ರೇಗಾಡತೊಡಗಿದಳು. “ಎಲ್ಲಾ‌ ಕೆಲಸನೂ‌ ನಂಗೇ ಹೇಳ್ತೀಯಾ, ಅಕ್ಕಗೆ ಏನೂ ಹೇಳಲ್ಲ. ಮಾಡದು ಚೂರು ಲೇಟಾದ್ರೂ ಬೈತೀಯಾ ಅನ್ನುವಲ್ಲಿಂದ ಪ್ರಾರಂಭವಾದ ಸಿಟ್ಟು ನನ್ನನ್ನ ಕಂಡ್ರೆ ಮನೆಲಿ ಯಾರಿಗೂ ಇಷ್ಟ ಇಲ್ಲ, ಎಲ್ಲರಿಗೂ ನಾ ಮಾಡಿದ್ದೆಲ್ಲಾ ತಪ್ಪಾಗೇ ಕಾಣತ್ತೆ, ನಾನೇ ಸರಿ ಇಲ್ಲ” ಅನ್ನುವಲ್ಲಿಯವರೆಗೂ ಹೋಗಿ ಕಣ್ಣೀರು ಧಾರೆಯಾಗಿ ಇಳಿಯತೊಡಗಿತು.

ನನ್ನ ಯೋಚನೆ ನನ್ನ ಹೈಸ್ಕೂಲು ದಿನಗಳೆಡೆಗೆ ಹೊರಳಿತು. ಹುಡುಗರೊಂದಿಗೂ ಅರಾಮಾಗಿ ಆಟಾಡ್ಕೊಂಡು ಇದ್ದ ನಂಗೆ ಈಗ ಹುಡುಗರ ಜೊತೆ ಸೇರ್ಲಿಕ್ಕೆ ಏನೋ ಒಂತರಾ! ಹೊರಗಡೆ ಆಟಕ್ಕೇ ಹೋಗ್ತಿರ್ಲಿಲ್ಲ. ಡ್ರೆಸಿಂಗ್‌ ಸ್ಟೈಲ್ ಬದಲಾಯ್ತು. ಎರಡು ಜಡೆ ಬೇಡ್ವೇ ಬೇಡ. ಬೆಳಗ್ಗೆ ಅಂತೂ ಕೆಲವೊಮ್ಮೆ ಎಷ್ಟು ಸರ್ತಿ ಕನ್ನಡಿ ನೋಡ್ಕೊಂಡ್ರೂ ಸಾಕಾಗ್ತಿರ್ಲಿಲ್ಲ. ನಾಚಿಕೆ ಅಂದ್ರೇನು ಅನ್ನೋದರ‌ ನಿಜವಾದ ಅನುಭವ ಆಗ್ಲಿಕ್ಕೆ ಪ್ರಾರಂಭವಾಯ್ತು. ಚಂದದ ಹುಡುಗರನ್ನ ನೋಡಿದ್ರೆ ಏನೋ ಆಕರ್ಷಣೆ. ಜೊತೆಗೆ ನಂಗೂ ಅಮ್ಮನ ಸಣ್ಣ-ಪುಟ್ಟ ಮಾತುಗಳಿಗೆ ಸಿಟ್ಟು ಬರ್ತಿತ್ತು, ನಾ ಮಾಡಿದ ಕೆಲಸಗಳ್ಯಾವುದೂ ಅಮ್ಮಗೆ ಇಷ್ಟ ಆಗಲ್ಲ ಅನ್ನಿಸ್ತಿತ್ತು. ಅಮ್ಮನೊಂದಿಗೆ ಜಗಳ ಮಾಡದ ವಿಷ್ಯಗಳೇ ಇಲ್ವೇನೋ. ಹೈಸ್ಕೂಲು ಅಂದ್ರೆ ನಾ ಸಣ್ಣ ಮಗು ಅಲ್ಲ, ಎಲ್ಲರೆದುರಿಗೆ ಏನು ಅಳೋದು ಅನ್ನಿಸ್ತಿತ್ತು.

ಆದ್ರೆ ಅಮ್ಮನ ಜೊತೆ ಜಗಳಾಡಿ ಬೇಜಾರಾಗ್ತಿತ್ತು. ಅಳು ತಡೆದುಕೊಳ್ಳೋ ಸಾಮರ್ಥ್ಯನೂ ಇರ್ಲಿಲ್ಲ, ರಾತ್ರಿ ಮಲಗಿದಾಗಲೋ ಅಥವಾ ಬಾತ್ ರೂಮ್ ನಲ್ಲಿ ಜೋರಾಗಿ ನೀರು ಬಿಟ್ಟುಕೊಂಡೋ ಅತ್ತು ಮನಸ್ಸನ್ನ ಹಗುರ ಮಾಡಿಕೊಳ್ಳುತ್ತಿದ್ದೆ. ನಂಗೂ ಹಾಗೇ ಅನ್ನಿಸ್ತಿತ್ತು, ಎಲ್ಲಾ ನಂದೇ ತಪ್ಪು, ನನ್ನನ್ನ ಕಂಡ್ರೆ ಯಾರಿಗೂ ಇಷ್ಟ ಇಲ್ಲ, ನಾ ಯಾರಿಗೂ ಬೇಡ ಎಂಬೆಲ್ಲಾ ಯೋಚನೆಗಳು.

ಆದರೆ ಈಗೆಲ್ಲ ಅರ್ಥ ಆಗ್ತಿದೆ. ಹೈಸ್ಕೂಲು ದಿನಗಳು ಎಂದರೆ ಹದಿಹರೆಯ. ಹದಿಹರೆಯದಲ್ಲಿ ಪ್ರಚೋದಕಗಳ ಬದಲಾವಣೆ (hormonal changes) ದೈಹಿಕ ಬದಲಾವಣೆಗಳೊಂದಿಗೆ, ಮಾನಸಿಕ ಬದಲಾವಣೆಗೂ ಕಾರಣವಾಗುತ್ತದೆ. ಅದರಲ್ಲೂ ಹುಡುಗಿಯರಲ್ಲಿ ಮಾನಸಿಕ ತುಮುಲ, ಹಿಂಜರಿಕೆ, ನಾಚಿಕೆ ಮುಂತಾದವುಗಳು‌ ಹೆಚ್ಚಾಗುತ್ತವೆ. ಈ ಸಮಯದಲ್ಲಿ ಪೋಷಕರೂ ತಮ್ಮ ಮಕ್ಕಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಒಳ್ಳೆಯ ರೀತಿಯಲ್ಲಿ ಪ್ರೋತ್ಸಾಹ ಮಾಡೋದು ಮಕ್ಕಳ ಸಕಾರಾತ್ಮಕ ಬೆಳವಣಿಗೆಯ ದೃಷ್ಟಿಯಿಂದ ತುಂಬಾ ಅಗತ್ಯವೂ ಹೌದು. ಸಮಸ್ಯಾತ್ಮಕ ಹದಿಹರೆಯದವರಿಗೆ ಸರಿಯಾದ ಸಮಯದಲ್ಲಿ ಸಹಾಯ ಸಿಗದಿದ್ದರೆ, ಕೆಟ್ಟ ಹಾದಿಗಳಿಗೂ ನಾಂದಿಯಾಗಬಹುದು. ಹಾಗಾಗಿ ಪೋಷಕರೂ ತಾವೂ ಸಿಟ್ಟು ಮಾಡಿಕೊಳ್ಳದೇ, ನಯವಾಗಿಯೇ ಮಕ್ಕಳನ್ನು ತಿದ್ದುವುದೂ ಬಹಳ ಮುಖ್ಯ.

♥ಮಲ್ಲಿಗೆ ಮೊಗ್ಗಿನ ಹುಡುಗಿ