Home Trending ನನ್ನೊಳಗಿನ ನೋವು ನಿನಗೂ, ಯಾರಿಗೂ ಗೊತ್ತಿಲ್ಲ...!!!

ನನ್ನೊಳಗಿನ ನೋವು ನಿನಗೂ, ಯಾರಿಗೂ ಗೊತ್ತಿಲ್ಲ…!!!

♣ ಅಶೋಕ್ ಕುಂದರ್ ಉಡುಪಿ

ರೆಂಬೆ ತುದಿಯ ನೋಟವದು. ಸುತ್ತಲೂ ನೂರಾರು ಕಣ್ಣುಗಳು ಆ ರೆಂಬೆ ತುದಿಯನ್ನೇ ದಿಟ್ಟಿಸುತ್ತಿರಬಹುದು. ಪ್ರತಿದಿನ ವಿಹರಿಸುವಂತೆ ಹಾರುತ್ತಿರುವಾಗ ಲಕ್ಷಾಂತರ ಕಣ್ಣುಗಳು ನನ್ನನ್ನು ನೋಡುತ್ತಿರಬಹುದು. ನಾ ಬಡಿಯುವ ರೆಕ್ಕೆಗಳಿಗೆ ಅದು ತಿಳಿದಿಲ್ಲ. ಕಣ್ಣುಗಳಿಗಂತು ತಾನ್ ತಲುಪುವ ಗುರಿಯದ್ದೇ ಚಿಂತೆಯಾಗಿತ್ತು. ಆದರೂ ನನ್ನನು ನನ್ನದೇ ರೆಕ್ಕೆಗಳು ಈ ರೆಂಬೆ ತುದಿಯಲ್ಲಿ ತಂದು ನಿಲ್ಲಿಸಿತ್ತು.

ಎಷ್ಟೋ ತಿಂಗಳುಗಳಿಂದ ನಾ ಇಲ್ಲಿ ಬಂದು ಕೂರುತ್ತಿದ್ದೆ. ಪ್ರತಿ ಸಲ ಬರುವಾಗ ಒಂದೊಂದು ನೋಟ. ಮಳೆ ಬಿದ್ದಾಗ, ಬಿಸಿಲಿದ್ದಾಗ, ಚಳಿಯಲ್ಲಿ ನಡುಕವಿದ್ದಾಗಲೂ ನಾನಿಲ್ಲೇ ಬಂದು ಕೂರುತ್ತಿದ್ದೆ. ಅಂತಹದ್ದು ಏನಿರಬಹುದಿತ್ತಿಲ್ಲಿ. ಏನೂ ಇಲ್ಲ ಅಂದು ಸುಮ್ಮನಾಗಿರಬಹುದಿತ್ತು. ಆದರೆ ನೆನಪುಗಳು ಬಂದು ಕಾಡಿಸಿ ಪೀಡಿಸಿ ಮತ್ತೆ ಮತ್ತೆ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿರಬಹುದು. ನಾ ಮತ್ತೆ ಮತ್ತೆ ಇಲ್ಲಿಗೆ ಬರುವಂತೆ ಮಾಡಿರಬಹುದು.

ನಾ ಏಕಾಂತದಲ್ಲಿ ಕಡಲಿಂಪಿನ ಕೆಂಬಣ್ಣದಲ್ಲಿ ಮಿಂದು ಹಾರುತಲಿದ್ದೆ. ಮೈಮರೆತು ನದಿ ನದಿಗಳು ಸಂಗಮಿಸುವ ದೃಶ್ಯದಲ್ಲಿ ಮುಳುಗುತ್ತಿದ್ದೆ. ರೆಕ್ಕೆ ಬಡಿದು ಬಡಿದು ಎಲ್ಲೆಂದರಲ್ಲಿ ಅಲೆಯುತ್ತಲಿದ್ದೆ. ನಾ ಏಕಾಂತಕ್ಕೆ ಹೆಸರಾಗಿದ್ದೆ. ಮತ್ತೆ ಇದೇ ಮರದ ಹಸಿರನ್ನು ಮೈಗೆ ಹೊದಿಸಿ ರೆಂಬೆಯ ತುದಿಯ ನೋಟಗಳಿಗೆ, ಕಾಣ ಸಿಗುವ ಮಾತುಗಳಿಗೆ, ಕವಿತೆಗಳಿಗೆ, ಮೌನಕ್ಕೆ ಜೊತೆಯಾಗುತ್ತಿದ್ದೆ.

ಎಷ್ಟೊಂದು ಚಂದವಿತ್ತು ಆವಾಗೆಲ್ಲ. ಎಂತ ಸಹ ಗುರಿಗಳಿರಲಿಲ್ಲ ನನಗೆ. ನಾನಾಯಿತು ನನ್ನ ಪಾಡಾಯಿತು ಅಂದುಕೊಂಡು ಸುಮ್ ಸುಮ್ಮನೇ ರೆಕ್ಕೆ ಪುಕ್ಕಗಳಲ್ಲಿ ಹಾರಿ ನಲಿದಾಡುತ್ತ ಸುಖಿಯಾಗಿದ್ದೆ.

ಹೌದು ನೀನ್ಯಾಕೆ ಬಂದೇ ಆಗಲೇ. ಬೇಟೆಗಾರನೊಬ್ಬನ ಹೊಡೆತಕ್ಕೆ ಸಿಲುಕಿ ರಕ್ತಸಿಕ್ತವಾದ ನಿನ್ನ ದೇಹವನಿಟ್ಟು ನಾ ಕುಳಿತ ರೆಂಬೆಗಂಟಿ ನನ್ನ ತಬ್ಬಿದೆ. ಆ ಕ್ಷಣವೇ ನಿನ್ನ ಆರೈಕೆಯಲ್ಲಿ ನನ್ನ ಸಮಯವನ್ನು ಮೀಸಲಿಟ್ಟೆನಲ್ಲಾ…!

ನಿನ್ನನು ಉಳಿಸಿ, ನಿನ್ನ ಬದುಕಿನ ನಲಿವನ್ನು ಚಂದಗಾಣಿಸುವುದಷ್ಟೇ ನನ್ನ ಮನಸಾಗಿತ್ತು. ನೋಡುತ್ತ ನೋಡುತ್ತ ನೀನು ಚೇತರಿಸಿದೆ. ಗೆಲುವಂತಾದೆ. ನನ್ನಲಿ ಸ್ನೇಹದ ನಾಲ್ಕಕ್ಷರ ಮಾತಾಡುವಂತಾದೆ. ನನಗೂ ನಿನ್ನ ಒಡನಾಟದ ಸಲಿಗೆ ಹಿತವೆನಿಸಲು ಶುರು ಆಯಿತು.

ಇಬ್ಬರೂ ಹಾರಾಡಿದೆವು. ಒಟ್ಟಿಗೆ ಕಡಲು, ನದಿಗಳ ಸಂಗಮದಲ್ಲಿ ಕಳೆದು ಕಳೆದೋದೆವು. ಮತ್ತೆ ಮತ್ತೆ ನಾನು ಒಲವಿನ ಅನುರಾಗದ ಸೆಲೆಗೆ ಸಿಲುಕಿದಂತಾಯಿತು. ಆ ಒಲವಿನ ನಂಟಿನ ಗಂಟು ಹೃದಯಕ್ಕೆಷ್ಟು ಹಿತವಾದ ಭಾವವನ್ನು ಅಲೆಯಂತೆ ಗುಣಿಸಿತ್ತು… ಅದು ನಿನಗೆ ಖಂಡಿತವಾಗಿಯೂ ತಿಳಿದಿರಲಿಕ್ಕಿಲ್ಲ…!

ಹೌದು ನನ್ನ ಭಾವದೊಲವಿನ ಮಾತುಗಳನ್ನು ನಾ ತಿಳಿಸಲೆಂದೇ ಇದೇ ರೆಂಬೆಯ ತುದಿಯಲ್ಲಿ ಕೂತಿದ್ದೆ. ನೀನು ನನ್ನ ಪಕ್ಕದಲ್ಲೇ ಕೂತಿದ್ದೆ. ಇನ್ನೇನು ಹೇಳಬೇಕು, “ನಾ ಹೊರಡುವ ಸಮಯ ಬಂತು..” ಅಂದೆ ನೀನು. ನಾನು ಬೆರಗಾದೆ.

“ಇಷ್ಟು ದಿನ ನನ್ನ ಚಂದವಾಗಿ ನೋಡಿಕೊಂಡಿದ್ದಿಯಾ. ಇವತ್ತು ನಾನು ನನ್ನ ಇನಿಯನನ್ನು ಕಂಡೆ. ನಾನು ಇಷ್ಟು ದಿನ ಆ ಬೇಟೆಗಾರನು ಹೊಡೆದ ಬಿಲ್ಲಿಗೆ ಅವನು ಇಹಲೋಕ ಸೇರಿದನೆಂದುಕೊಂಡಿದ್ದೆ. ಇಲ್ಲ ನನ್ನವನು ಇನ್ನೂ ಬದುಕಿದ್ದಾನೆ. ನನ್ನ ಕಂಡ ಅವನ ಆನಂದದ ಕಣ್ಣು ಎಷ್ಟು ನಲಿಯಿತು ಗೊತ್ತಾ..ನಿನಗೆ..?” ಎಂದು ನೀನನ್ನುವಾಗ ನಿನ್ನ ಆನಂದದ ಕಣ್ಣಲ್ಲಿ ಅಷ್ಟೇ ನಲಿವನ್ನು ನಾನು ಕಂಡೆ.

ನೀ ನನ್ನನ್ನು ಬೀಳ್ಕೊಟ್ಟೆ. ನಾ ಎಂತ ಸಹ ಮಾಡ್ಲಿಕ್ ಆಗ್ಲಿಲ್ಲ. ಎಂತ ಮಾಡುಕು ಆತಿಲ್ಲ ಅಲಾ…!!!! ಬಂದವರು ಸ್ವಲ್ಪ ದಿನ ಇದ್ದ ಹಾಗೆ ಮಾಡಿ ಕೊನೆಗೆ ಅವರವರ ದಾರಿಯಲ್ಲಿ ಅವರು ನಡೆದು ಸಾಗುತ್ತಾರೆ. ಯಾರೂ ಕೊನೆವರೆಗೂ ಉಳಿಯೋದಿಲ್ಲ. ಆದರೆ ನಾನು ಇಲ್ಲಿ ಮತ್ತೆ ಏಕಾಂಗಿ ಆಗಿದ್ದೆ.

ಈ ಸಲದ ಏಕಾಂತ ಮಾತ್ರ ಎಷ್ಟು ನೋವು ಕೊಟ್ಟಿತ್ತು ಅಂತ ನಿನಗೆ ಗೊತ್ತಿರಲಿಕ್ಕಿಲ್ಲ. ಗೊತ್ತಾಗುವುದು ಬೇಡ. ನಿನ್ನದು ತಪ್ಪಿರಲಿಲ್ಲ. ಮತ್ತೆ ಇಲ್ಲೆ ಉಳಿದರೆ ನಿನ್ನನು ಮರೆಯಲು ಆಸಾಧ್ಯವೆಂದು ಬಲು ದೂರ ಸಾಗಿ ಹೋಗಿದ್ದೆ.

ಅಲ್ಲೇ ದಿನಗಳನ್ನು ಕಳೆಯುತ್ತಲಿದ್ದೆ. ಆದರೆ ಈ ನೆನಪೆಷ್ಟು ಜೋರು ಉಂಟು ಅಂತ ನಿನಗೇನು ಗೊತ್ತುಂಟು? ಮತ್ತೆ ಇಲ್ಲಿ ಕರೆದು ನಿಲ್ಲಿಸುತ್ತೆ ನನ್ನನು. ನೋಡುವ ನೂರಾರು ಕಣ್ಣುಗಳಿಗೆ ನಾ ಕವಿತೆಯಾಗಿ, ಸುಂದರವಾಗಿ ಕಾಣುತ್ತಿದ್ದೆ. ಆದರೇ ನನ್ನೊಳಗಿನ ನೋವು ನಿನಗೂ ಗೊತ್ತಿಲ್ಲ ಅವರಿಗೂ ಗೊತ್ತಿಲ್ಲ…!!!

ಅಶೋಕ್ ಕುಂದರ್

error: Content is protected !!