ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಪಟ್ಟಂತೆ ಆಡಳಿತ ಪಕ್ಷವಾದ ಬಿಜೆಪಿ, ಪ್ರತಿಪಕ್ಷವಾದ ಕಾಂಗ್ರೆಸ್ ನಡುವೆ ಸಂಘರ್ಷಮಯ ವಾತಾವರಣ ನಿರ್ಮಾಣವಾಗಿ ವಿಧಾನ ಪರಿಷತ್‍ನಲ್ಲಿಂದು ಕೋಲಾಹಲ ಉಂಟಾಯಿತು.
ಇಂದು ಬೆಳಗ್ಗೆ ಸಭಾಪತಿ ಪೀಠದಲ್ಲಿ ಪ್ರತಾಪ್‍ಚಂದ್ರಶೆಟ್ಟಿ ಅವರನ್ನು ಕೂರಲು ಬಿಡದೆ ಬಿಜೆಪಿ ಸದಸ್ಯರು ಗದ್ದಲ ಮಾಡಿದರು. ಅದಕ್ಕೆ ಕಾಂಗ್ರೆಸ್ ಸದಸ್ಯರು ಪ್ರತಿರೋಧ ವಿಧಾನ ಪರಿಷತ್‍ನಲ್ಲಿ ಅಲ್ಲೋಲ-ಕಲ್ಲೋಲವಾಯಿತು.
ಸಭಾಪತಿ ಪ್ರತಾಪ್‍ಚಂದ್ರಶೆಟ್ಟಿ ಅವರು ಒಳಬರಲು ಸಾಧ್ಯವಾಗಲಿಲ್ಲ. ಆ ವೇಳೆ ಸಭಾಪತಿ ಅವರ ಪೀಠದ ಬಳಿ ಕಾಂಗ್ರೆಸ್ ಸದಸ್ಯರು ಧಾವಿಸಿ ಉಪಸಭಾಪತಿ ಧರ್ಮೇಗೌಡ ಅವರನ್ನು ಬಲವಂತವಾಗಿ ಎಳೆದು ಕೆಳಗೆ ತಳ್ಳಿದರು.
ಆ ಸಂದರ್ಭದಲ್ಲಿ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ವಾಗ್ವಾದ ನಡೆದು ಮಾರ್ಷಲ್‍ಗಳು ಒಳಬಂದು ರಕ್ಷಣೆ ಮಾಡಬೇಕಾಯಿತು. ಸಭಾಪತಿ ಪೀಠದಿಂದ ಧರ್ಮೇಗೌಡ ಅವರನ್ನು ಹೊರದಬ್ಬಲು ಕಾಂಗ್ರೆಸಿಗರು ಪ್ರಯತ್ನ ಪಡುತ್ತಿದ್ದರೆ, ಅದನ್ನು ತಡೆಯಲು ಬಿಜೆಪಿ ಸದಸ್ಯರು ಹರಸಾಹಸಪಟ್ಟರು. ಪರಸ್ಪರ ಮಾತಿನ ಚಕಮಕಿ, ತಳ್ಳಾಟ, ನೂಕಾಟ, ಬಲ ಪ್ರಯೋಗಗಳು ಕಲಾಪವನ್ನು ಅಸ್ತವ್ಯಸ್ತಗೊಳಿಸಿದ್ದಲ್ಲದೆ ಪ್ರಜಾಪ್ರಭುತ್ವ ತಲೆ ತಗ್ಗಿಸುವಂತೆ ಮಾಡಿತ್ತು.
ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ:
ಈ ನಡುವೆ ಸದನ ಪ್ರವೇಶಿಸಿದ ಸಭಾಪತಿ ಪ್ರತಾಪ್‍ಚಂದ್ರಶೆಟ್ಟಿ ಅವರು ಕಲಾಪವನ್ನು ಅನಿರ್ದಿಷ್ಟಾವಗೆ ಮುಂದೂಡಿರುವುದಾಗಿ ಘೋಷಿಸಿ ಹೊರಟು ನಡೆದರು.