ಹೈದರಾಬಾದ್: ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣದ ಬಳಿಕ ದೇಶವನ್ನೇ ತಲ್ಲಣಗೊಳಿಸಿದ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ವಕೀಲರ ಸಂಘ ಮಹತ್ವದ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ವಕೀಲರು ಆರೋಪಿಗಳ ಪರ ವಾದ ಮಾಡದಿರಲು ನಿರ್ಧರಿಸಿದ್ದಾರೆ. ಈ ಆರೋಪಿಗಳಿಗೆ ಯಾವುದೇ ರೀತಿಯ ಕಾನೂನು ಬೆಂಬಲ ನೀಡಲ್ಲ ಅಂತ ಶಾದ್ನಗರದ ಬಾರ್ ಅಸೋಸಿಯೇಷನ್ ತೀರ್ಮಾನ ಮಾಡಿದೆ.
ತೆಲಂಗಾಣದ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆರೋಪಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನರು ಹಾಗೂ ಸೆಲೆಬ್ರಿಟಿಗಳಿಂದಲೂ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಪಂಚರ್ ಆಗಿದ್ದ ಸ್ಕೂಟರ್ ಟೈರ್ ರಿಪೇರಿ ಮಾಡಿಕೊಡ್ತೀವಿ ಅಂತ ಬಂದ ಆ ಕಿರಾತಕರು ಪ್ರಿಯಾಂಕಾ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ, ಮೃತದೇಹವನ್ನು ಭೀಕರವಾಗಿ ಸುಟ್ಟುಹಾಕಿದ್ದರು. ಈ ಪ್ರಕರಣ ಬೆಳಕಿಗೆ ಬಂದ ನಂತರ ದೇಶಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ನಾಲ್ವರು ಆರೋಪಿಗಳಾದ ಮೊಹಮ್ಮದ್ ಅರೀದ್, ಜೊಲ್ಲು ಶಿವ, ಜೊಲ್ಲು ನವೀನ್ ಹಾಗೂ ಚಿಂತಾಕುಂಟ ಚೆನ್ನಕೇಶವುಲು ರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಿಯಾಂಕಾ ಮೇಲೆ ಗ್ಯಾಂಗ್ರೇಪ್ ನಡೆದಿರುವುದನ್ನು ಸೈಬರಾಬಾದ್ ಪೊಲೀಸರು ದೃಢಪಡಿಸಿದ್ದಾರೆ.