ಉಡುಪಿ ಮೇ 13: ಕೋವಿಡ್-19 ರ ಕಾರಣ ದೇಶದಲ್ಲಿ ವಿಧಿಸಿರುವ ಲಾಕ್ ಡೌನ್ ನಿಂದ , ಹೂವಿನ ಬೆಳೆಗಾರರಿಗೆ ಉಂಟಾದ ನಷ್ಟಕ್ಕೆ ರೂ. 25,000 ಪರಿಹಾರವನ್ನು ಗರಿಷ್ಟ 1.00 ಹೆಕ್ಟೇರ್ ವಿಸ್ತೀರ್ಣಕ್ಕೆ ಮುಖ್ಯಮಂತ್ರಿಯವರು ಘೋಷಿಸಿದ್ದು, ಪ್ರಸ್ತುತ ಘೋಷಿಸಿರುವ ಪರಿಹಾರವನ್ನು ರೈತರಿಗೆ ಪಾವತಿಸುವ ಬಗ್ಗೆ ಮಾರ್ಗಸೂಚಿ ಹೊರಡಿಸಲಾಗಿದೆ.
ಪರಿಹಾರವನ್ನು 2019-20 ನೇ ಸಾಲಿನಲ್ಲಿ ಬೆಳೆ ಸಮೀಕ್ಷೆಯ ಮಾಹಿತಿಯ ಆಧಾರದಲ್ಲಿ ಪಾವತಿಸಲಾಗುವುದು. ರೈತರು ತಾವು ಬೆಳೆದಿರುವ ಬಹು ವಾರ್ಷಿಕ ಪುಷ್ಪ ಬೆಳೆಯು 2019-20 ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆಯಲ್ಲಿ ನಮೂದಾಗಿರುವ ಬಗ್ಗೆ ಹಾಗೂ ವಾರ್ಷಿಕ ಪುಷ್ಪ ಬೆಳೆಗಳು 2019-20 ನೆ ಸಾಲಿನ ಹಿಂಗಾರು ಬೆಳೆ ಸಮೀಕ್ಷೆಯಲ್ಲಿ ನಮೂದಾಗಿರುವ ಬಗ್ಗೆ ಸಂಬಂದಿಸಿದ ತಾಲೂಕು ತೋಟಗಾರಿಕೆ ಇಲಾಖೆಯ ಕಛೇರಿಗಳಲ್ಲಿ ಪರಿಶೀಲಿಸಿಕೊಳ್ಳುವುದು.
ರೈತರು ಈಗಾಗಲೇ ಇಲಾಖೆಯ FRUITS ತಂತ್ರಾಂಶದಲ್ಲಿ ನೋಂದಣಿಯಾಗಿದ್ದರೆ ಪರಿಹಾರವನ್ನು ನೇರವಾಗಿ ಪಾವತಿಸಲಾಗುವುದು, ಬೆಳೆ ಸಮೀಕ್ಷೆಯಲ್ಲಿ ಪುಷ್ಪ ಬೆಳೆ ದಾಖಲಾಗದ ರೈತರು ಅರ್ಜಿ, ಪಹಣಿ, ಆಧಾರ್ ನ ಪ್ರತಿ , ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಹಾಗೂ ಮೊಬೈಲ್ ಸಂಖ್ಯೆಯ ವಿವರಗಳನ್ನು ತಾಲೂಕು ತೋಟಗಾರಿಕೆ ಇಲಾಖೆಯ ಕಛೇರಿಗೆ ಸಲ್ಲಿಸುವುದು, ಅರ್ಜಿದಾರರ ಸ್ಥಳ ಪರಿಶೀಲನೆಯನ್ನು ಜಂಟಿ ಪರಿಶೀಲನಾ ತಂಡದಿಂದ ಕೈಗೊಂಡು ನಿಯಮಾನುಸಾರ ಪರಿಹಾರವನ್ನು ಪಾವತಿಸಲಾಗುವುದು,
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರು (ಜಿಪಂ), ಉಡುಪಿ ಜಿಲ್ಲೆ: 0820-2531950, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.), ಉಡುಪಿ ತಾಲೂಕು: 0820-2522837 , ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.) ಕುಂದಾಪುರ ತಾಲೂಕು: 08254-230813, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ), ಕಾರ್ಕಳ ತಾಲೂಕು 08258-230288 ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.