“ಹುಳಿಮಾವು ಕಪ್ 2019” ಜಯಿಸಿದ ಮೈಟಿ ಸ್ಮೈಲ್ ಬೆಂಗಳೂರು

ಬೆಂಗಳೂರು: ಹುಳಿಮಾವು ಗ್ರಾಮಸ್ಥರು ಹಾಗೂ H.C.B (ಹುಳಿಮಾವು ಕ್ರಿಕೆಟ್ ಬಾಯ್ಸ್)ತಂಡ ಸತತ 5 ನೇ ಬಾರಿ ಬೆಂಗಳೂರಿನ ಹುಳಿಮಾವು ಇಸ್ಲಾಮಿಯಾ ಕಾಲೇಜಿನ ಅಂಗಣದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ಹಗಲಿನ ವ್ಯವಸ್ಥಿತ ರಾಷ್ಟ್ರೀಯ ಮಟ್ಟದ ಪಂದ್ಯಾಕೂಟ “ಹುಳಿಮಾವು ಕಪ್-2019″ನ್ನು ” ಮೈಟಿ ಸ್ಮೈಲ್” ತಂಡ ಗೆದ್ದುಕೊಂಡಿತು.

ರಾಜ್ಯದ ವಿವಿಧೆಡೆಯಿಂದ 16 ತಂಡಗಳು ಭಾಗವಹಿಸಿದ್ದ ಈ ಪಂದ್ಯಾಕೂಟದಲ್ಲಿ,ಲೀಗ್ ಹಂತದ ಸೆಣಸಾಟದ ಬಳಿಕ ಸೆಮಿಫೈನಲ್ ರೋಚಕ ಕದನದಲ್ಲಿ ಎಸ್.ಝಡ್,ಸಿ.ಸಿ ತಂಡ ಫ್ರೆಂಡ್ಸ್ ಬೆಂಗಳೂರು ತಂಡವನ್ನು ಹಾಗೂ ಮೈಟಿ ಸ್ಮೈಲ್ ತಂಡ ಜೈ ಕರ್ನಾಟಕ ತಂಡವನ್ನು ಸೋಲಿಸಿ ಫೈನಲ್ ಗೆ ನೆಗೆದೇರಿದ್ದವು.

ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಮೈಟಿ ತಂಡ
ಆರಂಭಿಕ ದಾಂಡಿಗ ಶಾಬುದ್ದೀನ್ ಅವರ ಬಿರುಸಿನ 8 ಬೌಂಡರಿಗಳ ಸಹಿತ 21 ಎಸೆತಗಳಲ್ಲಿ 40 ರನ್ ಗಳ ಸಹಾಯದಿಂದ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 63 ರನ್ ಗಳ ಬ್ರಹತ್ ಮೊತ್ತವನ್ನು ಪೇರಿಸಿತ್ತು.ಚೇಸಿಂಗ್ ಮಾಡುವಲ್ಲಿ ಎಡವಿದ ಎಸ್.ಝಡ್.ಸಿ.ಸಿ ತಂಡ ಅಂತಿಮವಾಗಿ 6 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 53 ರನ್ ಗಳಷ್ಟೇ ಗಳಿಸಲು ಶಕ್ತವಾಯಿತು.
ಕಳೆದ ವಾರ ಮೈಸೂರಿನಲ್ಲಿ ನಡೆದ “ಅಂಬಿ ಅಯ್ಯ” ಕಪ್ ಪಂದ್ಯಾಕೂಟದಲ್ಲೂ ಮೈಟಿ ತಂಡ ಎಸ್.ಝಡ್.ಸಿ.ಸಿ ತಂಡವನ್ನು ಸೋಲಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು.ಅಂತೆಯೇ ರನ್ನರ್ಸ್ ಎಸ್.ಝಡ್.ಸಿ.ಸಿ ಹುಳಿಮಾವು ಕಪ್ ನ 4 ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿದ್ದು 2 ಬಾರಿ ವಿನ್ನರ್ಸ್,2 ಬಾರಿ ರನ್ನರ್ಸ್ ಪ್ರಶಸ್ತಿಯನ್ನು ಪಡೆದಿತ್ತು.
ವಿಜಯೀ ತಂಡ ಮೈಟಿ ಸ್ಮೈಲ್ 1,50,000 ನಗದು ಸಹಿತ ಆಕರ್ಷಕ ಟ್ರೋಫಿಯನ್ನು ಪಡೆದುಕೊಂಡರೆ,ರನ್ನರ್ಸ್ ಎಸ್.ಝಡ್.ಸಿ.ಸಿ 75,000 ನಗದು ಸಹಿತ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಫೈನಲ್ ಪಂದ್ಯದ ಪಂದ್ಯಶ್ರೇಷ್ಟ  ಹಾಗೂ ಪಂದ್ಯಾಕೂಟದ ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ಮೈಟಿಯ ಶಾಬುದ್ದೀನ್ ಪಡೆದುಕೊಂಡರೆ, ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಮೈಟಿಯ ಕೃಷ್ಣ ,ಹಾಗೂ ಪಂದ್ಯಾಕೂಟದುದ್ದಕ್ಕೂ ಶ್ರೇಷ್ಠ ಆಲ್ ರೌಂಡರ್ ಪ್ರದರ್ಶನ ನೀಡಿದ ಎಸ್.ಝಡ್.ಸಿ.ಸಿ ಯ ಸ್ವಸ್ತಿಕ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.ಸಮಾರೋಪ ಸಮಾರಂಭದಲ್ಲಿ  ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಈ ಪಂದ್ಯಾಕೂಟದ ನೇರ ಪ್ರಸಾರವನ್ನು ಗಿರೀಶ್ ರಾವ್ ನೇತೃತ್ವದ ಕ್ರಿಕ್ ಸೇ ಬಿತ್ತರಿಸಿದ್ದು,ಅಂಪಾಯರ್ ಆಗಿ ಹಿರಿಯ ಅನುಭವಿ ಸಹೋದರ ಆಟಗಾರರಾದ ನಾಗೇಶ್ ಸಿಂಗ್,ಭಗವಾನ್ ಸಿಂಗ್ ನಿರ್ವಹಿಸಿದ್ದರೆ, ರಾಜ್ಯದ ಶ್ರೇಷ್ಠ ವೀಕ್ಷಕ ವಿವರಣೆಕಾರರಾದ ಶಿವನಾರಾಯಣ್ ಐತಾಳ್ ಕೋಟ ಹಾಗೂ ಪ್ರಶಾಂತ್ ಅಂಬಲಪಾಡಿ ವೀಕ್ಷಕ ವಿವರಣೆಕಾರರಾಗಿ ಭಾಗವಹಿಸಿದ್ದರು.
                                                                                              – ಆರ್.ಕೆ.ಆಚಾರ್ಯ