ಕರ್ನಾಟಕದಲ್ಲಿ ಫ್ಲಾಪ್ ಆಯ್ತು ಈ ಯೋಜನೆ. ರಾಜ್ಯದ ಜನರಿಗೆ ಸಿಕ್ತು ಬಿಗ್ ರಿಲೀಫ್

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ನಿರ್ದೇಶನದಂತೆ ಕರ್ನಾಟಕದಲ್ಲಿ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ (HSRP) ಕಡ್ಡಾಯಗೊಳಿಸಲಾಗಿತ್ತು. ಆದರೆ ರಾಜ್ಯದಲ್ಲಿ ಈ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ವಾಹನಗಳ ಭದ್ರತೆ ಮತ್ತು ವಂಚನೆ ತಡೆಗಟ್ಟಲು ಜಾರಿಗೆ ತಂದ ಈ ಯೋಜನೆಗೆ ಜನರಿಂದ ಸ್ಪಂದನೆ ಕಡಿಮೆ ಕಂಡುಬಂದಿದೆ. ಹಲವಾರು ಬಾರಿ ಡೆಡ್‌ ಲೈನ್ ನೀಡಿದರೂ ಬಹುತೇಕ ವಾಹನ ಸವಾರರು HSRP ಅಳವಡಿಸಿಕೊಳ್ಳಲಿಲ್ಲ. ಇದರಿಂದಾಗಿ ಸರ್ಕಾರ ಯೋಜನೆಯನ್ನು ಸಡಿಲಗೊಳಿಸಿದ್ದು, ವಾಹನ ಸವಾರರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

ಇದು ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರುವಲ್ಲಿ ಉಂಟಾದ ದೌರ್ಬಲ್ಯ ಎಂದೇ ಹೇಳಬಹುದು. HSRP ನಂಬರ್ ಪ್ಲೇಟ್ ಕಡ್ಡಾಯಗೊಳಿಸಿದ ಸಂದರ್ಭದಲ್ಲಿ ಜನಸಾಮಾನ್ಯರ ಮೇಲೆ ಒತ್ತಡ ಹೇರಿ, ಗಡಿಬಿಡಿಯಲ್ಲಿ ಅಧಿಕ ಹಣತೆತ್ತು ನಂಬರ್ ಪ್ಲೇಟ್ ಹಾಕಿಸಿಕೊಳ್ಳುವ ಪರಿಸ್ಥಿತಿ ಒದಗಿತ್ತು. ಹಲವಾರು ಬಾರಿ ಗಡವುಗಳನ್ನು ವಿಸ್ತರಿಸುತ್ತಾ ಹೋದರೇ ಹೊರತು ನಂಬರ್ ಪ್ಲೇಟ್ ಅಳವಡಿಸಿಕೊಳ್ಳದವರ ಮೇಲೆ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳಲಿಲ್ಲ. ಇದರಿಂದಾಗಿ ಜನರಿಗೆ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವು ಅತ್ಯಂತ ಮಹತ್ವದ್ದು, ತುರ್ತಾಗಿ ಕಾಣಲಿಲ್ಲ. ಆದರೆ ಪ್ರಾಮಾಣಿಕವಾಗಿ ಈ ನಂಬರ್ ಪ್ಲೇಟ್ ಅಳವಡಿಸಿಕೊಂಡ ಹಲವರು ಸರ್ಕಾರ ನೀಡಿದ ಈ ಬಿಗ್ ರಿಲೀಫ್ ನಿಂದ ನಿರಾಶೆಗೊಳಗಾಗಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ಪ್ರಾಮಾಣಿಕತೆ, ನೈತಿಕತೆಗೆ ಬೆಲೆ ಇಲ್ಲ ಎಂಬುದನ್ನು ಸರ್ಕಾರವೇ ತಿಳಿಸಿಕೊಟ್ಟಂಗಾಗಿದೆ ಎಂಬು ಜನಸಾಮಾನ್ಯರ ಅಭಿಪ್ರಾಯವಾಗಿದೆ.