ದಿನಕ್ಕೊಂದು ಲೋಟ ಹಾಲು ಕುಡಿಯದವರೇ ಇಲ್ಲ. ನೇರವಾಗಿ ಅಲ್ಲದಿದ್ದರೂ ಯಾವುದಾದರೂ ರೂಪದಲ್ಲಿ ನಾವು ಹಾಲನ್ನು ಸೇವಿಸುತ್ತೇವೆ. ಹಾಲು ಆರೋಗ್ಯಕಾರಿ ಪೇಯವೂ ಹೌದು. ಕ್ಯಾಲ್ಸಿಯಂ ಅತಿ ಹೆಚ್ಚು ಇರುವ ಮನುಷ್ಯನ ದೇಹಕ್ಕೆ ಆರೋಗ್ಯಕ್ಕೆ ಬೇಕಾದ ಮುಖ್ಯ ಆಹಾರ ಹಾಲು. ಆದರೆ, ಇತ್ತೀಚೆಗೆ ನಾವು ಸೇವಿಸುವ ಹಾಲು ಶುದ್ಧ ಹಾಲೆಂದು ಹೇಳಲು ಸಾಧ್ಯವಾಗುತ್ತಿಲ್ಲ, ರೈತರ ಮಟ್ಟದಿಂದ ಹಿಡಿದು ಹಾಲು ಸಂಗ್ರಹಣಾ ಕೇಂದ್ರ ಹಾಗೂ ಶೀತಲೀಕರಣ ಕೇಂದ್ರದವರೆಗಿನ ವಿವಿಧ ಹಂತಗಳಲ್ಲಿ ಕಲಬೆರಕೆ ಸಂಭವಿಸುತ್ತಿದೆ. ಇದು ತನಿಖೆಗಳಿಂದ ತಿಳಿದು ಬಂದಿದೆ. ಹೀಗೆ ಕಲಬೆರಕೆ ಹಾಲನ್ನು ನಂತರ ಡೈರಿಗಳಿಗೆ ಕಳುಹಿಸಲಾಗುತ್ತದೆ ಮತ್ತು ಅಲ್ಲಿ ಅದನ್ನು ಇತರ ಹಾಲಿನ ಉತ್ಪನ್ನಗಳ ತಯಾರಿಕೆಗೆ ಬಳಸಲಾಗುತ್ತದೆ.
ಕೃತಕ ಹಾಲನ್ನು ಹೇಗೆ ತಯಾರಿಸಲಾಗುತ್ತದೆ?
ಕೆನೆ ತೆಗೆದ ಹಾಲಿನ ಪುಡಿ, ರಾಸಾಯನಿಕಗಳು, ಕಾಸ್ಟಿಕ್ ಸೋಡಾದಂತಹ ಎಮಲ್ಸಿಫೈಯರ್ಗಳು ಮತ್ತು ಶಾಂಪೂವಿನಂತಹ ವಸ್ತು ಗಳನ್ನು ಬಳಸಿ, ಅಚ್ಚಳಿಯದಂತೆ ಹಾಲಿನಂತೆಯೇ ಕಾಣುವ ಮಿಶ್ರಣವನ್ನು ತಯಾರಿಸುತ್ತಾರೆ.
ನೈಜ ಹಾಲಿಗೆ ಹೋಲಿಸಿದರೆ ಇಂತಹ ಹಾಲನ್ನು ಬಹಳ ಕಡಿಮೆ ವೆಚ್ಚದಲ್ಲಿ ಉತ್ಪಾದಿಸಲಾಗುತ್ತದೆ. ಅಸಲಿ ಹಾಲಿನಂತೆ ನೊರೆ ಮತ್ತು ಬಿಳಿ ಬಣ್ಣ ಬರಲು ಈ ಹಾನಿಕಾರಕ ವಸ್ತುಗಳನ್ನು ಬಳಸಲಾಗುತ್ತದೆಯಂತೆ! ಹಸುವಿನ ಹಾಲನ್ನು ಹೋಲುವ ಕೃತಕ ಹಾಲನ್ನು ಪ್ರತಿ ಲೀಟರ್ಗೆ ಸುಮಾರು 15 ರೂಪಾಯಿ ವೆಚ್ಚದಲ್ಲಿ ಮತ್ತು ಎಮ್ಮೆ ಹಾಲನ್ನು ಹೋಲುವ ಹಾಲನ್ನು ಪ್ರತಿ ಲೀಟರ್ಗೆ ಸುಮಾರು 30 ರೂಪಾಯಿ ವೆಚ್ಚದಲ್ಲಿ ತಯಾರಿಸಬಹುದು ಎಂದು ಅವರು ಹೇಳುತ್ತಾರೆ.
ಆದರೆ ಮಾರುಕಟ್ಟೆಯಲ್ಲಿ ಹಸುವಿನ ಹಾಲು ಪ್ರತಿ ಲೀಟರ್ಗೆ 40 ರಿಂದ 50 ರೂಪಾಯಿಗಳಿಗೆ ಮಾರಾಟವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಕೆಲವರು ನೈಜ ಹಾಲಿ ನೊಂದಿಗೆ ನಕಲಿ ಹಾಲನ್ನು ಬೆರೆಸಿ ಹೆಚ್ಚು ಹಣಗಳಿಸಲು ಪ್ರಯತ್ನಿಸುತ್ತಾರೆ. ಇದು ಸಂಪೂರ್ಣವಾಗಿ ಕಾನೂನುಬಾಹಿರ ಮತ್ತು ಅತ್ಯಂತ ನಾಚಿಕೆಗೇಡಿನ ಸಂಗತಿ ಯಾಗಿದೆ ಎನ್ನುತ್ತಾರೆ ಆಹಾರ ಸುರಕ್ಷತಾ ಅಧಿಕಾರಿಗಳು.
ಮನೆಯಲ್ಲಿಯೇ ಹಾಲಿನಲ್ಲಿನ ಕಲಬೆರಕೆಯನ್ನು ಪರೀಕ್ಷಿಸುವುದು ಹೇಗೆ?
- ಯೂರಿಯಾ ಕಲಬೆರಕೆ: ಒಂದು ಪರೀಕ್ಷಾ ಕೊಳವೆಯಲ್ಲಿ (test tube) ಒಂದು ಚಮಚದಷ್ಟು ಹಾಲನ್ನು ತೆಗೆದುಕೊಳ್ಳಿ. ಅದಕ್ಕೆ ಅರ್ಧ ಚಮಚ ದಷ್ಟು ಸೋಯಾಬೀನ್ ಅಥವಾ ತೊಗರಿ ಬೇಳೆಯ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಐದು ನಿಮಿಷಗಳ ನಂತರ, ಅದರಲ್ಲಿ ಕೆಂಪು ಲಿಟ್ಮಸ್ ಕಾಗದವನ್ನು ಅದ್ದಿ. ಅರ್ಧ ನಿಮಿಷದ ನಂತರ ಆ ಕಾಗದವು ಕೆಂಪು ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾದರೆ, ಆ ಹಾಲಿನಲ್ಲಿ ಯೂರಿಯಾ ಇದೆ ಎಂದರ್ಥ.
- ನೀರಿನ ಕಲಬೆರಕೆ ಪರೀಕ್ಷೆ: ಒಂದು ತಟ್ಟೆ ಅಥವಾ ಇಳಿಜಾರಾದ ಮೇಲ್ಮೈ ಮೇಲೆ ಹಾಲಿನ ಒಂದು ಹನಿಯನ್ನು ಹಾಕಿ. ಶುದ್ಧ ಹಾಲಿನ ಹನಿಯು ನಿಧಾನವಾಗಿ ಕೆಳಕ್ಕೆ ಜಾರುತ್ತಾ ಬಿಳಿ ಬಣ್ಣದ ಗುರುತನ್ನು (ಗೆರೆಯನ್ನು) ಉಳಿಸುತ್ತದೆ, ಆದರೆ ಕಲಬೆರಕೆ ಹಾಲಿನ ಹನಿಯು ಯಾವುದೇ ಗುರುತನ್ನು ಉಳಿಸದೆ ಸರಾಗವಾಗಿ ಹರಿದುಹೋಗುತ್ತದೆ.
- ನಯವಾದ ಮರದ ಅಥವಾ ಕಲ್ಲಿನ ಮೇಲ್ಮೈ ಮೇಲೆ ಹಾಲಿನ ಒಂದೆರಡು ಹನಿಗಳನ್ನು ಹಾಕಿ. ಹಾಲು ಬಿಳಿ ಬಣ್ಣದ ಗೆರೆಯನ್ನು ಉಳಿಸುತ್ತಾ ಕೆಳಮುಖವಾಗಿ ಹರಿದರೆ, ಆ ಹಾಲು ಶುದ್ಧವಾಗಿರುತ್ತದೆ.
- ಕೃತಕ ಹಾಲು: ಕೃತಕ ಹಾಲು ಕಹಿ ರುಚಿಯನ್ನು ಹೊಂದಿರುತ್ತದೆ. ಇದನ್ನು ಬೆರಳುಗಳ ನಡುವೆ ಉಜ್ಜಿದಾಗ ಸಾಬೂನಿನಂತೆ ಭಾಸವಾಗುತ್ತದೆ ಮತ್ತು ಬಿಸಿ ಮಾಡಿದಾಗ ಹಳದಿ ಬಣ್ಣಕ್ಕೆ ತಿರುಗುತ್ತದೆ. ಔಷಧಾಲಯ ಗಳಲ್ಲಿ ದೊರೆಯುವ ‘ಯೂರಿಯೇಸ್ ಸ್ಟ್ರಿಪ್’ (urease strip) ಬಳಸಿ ಕೃತಕ ಹಾಲಿನ ಲ್ಲಿರುವ ಪ್ರೋಟೀನ್ ಅಂಶವನ್ನು ಪರೀಕ್ಷಿಸಬಹುದು. ಇದರೊಂ ದಿಗೆ ನೀಡಲಾದ ಬಣ್ಣದ ಪಟ್ಟಿಯು ಹಾಲಿನಲ್ಲಿರುವ ಯೂರಿಯಾ ಅಂಶ ವನ್ನು ಸೂಚಿಸುತ್ತದೆ.
- ರುಚಿಯಲ್ಲಿ ಬದಲಾವಣೆ: ನೈಜ ಹಾಲು ಸ್ವಲ್ಪ ಸಿಹಿಯಾಗಿರುತ್ತದೆ, ಆದರೆ ಡಿಟರ್ಜೆಂಟ್ ಮತ್ತು ಸೋಡಾವನ್ನು ಸೇರಿಸುವುದರಿಂದ ಕೃತಕ ಹಾಲು ಕಹಿಯಾಗಿರುತ್ತದೆ.
ಯೂರಿಯಾ ಅಥವಾ ಕೃತಕ ಘಟಕಗಳು- ಇವುಗಳನ್ನು ಹಾಲಿನಲ್ಲಿರುವ ನೈಸರ್ಗಿಕ ‘ಘನ-ಕೊಬ್ಬು-ರಹಿತ’ (solids-not-fat) ಅಂಶಗಳನ್ನು ಹೋಲುವಂತೆ ಮಾಡಲು ಸೇರಿಸಲಾಗುತ್ತದೆ. ಹಾಲನ್ನು ಬೆರಳುಗಳ ನಡುವೆ ಉಜ್ಜಿದಾಗ ಸಾಬೂನಿನಂತಹ ಜಾರುವ ಸ್ವಭಾವ ಇದ್ದರೆ ಅಥವಾ ಕೃತಕ ರುಚಿ ಬಂದರೆ, ಅದರಲ್ಲಿ ಡಿಟರ್ಜೆಂಟ್, ಸೋಪ್ ಅಥವಾ ಯೂರಿಯಾದಂತಹ ಹಾನಿಕಾರಕ ರಾಸಾಯನಿಕಗಳನ್ನು ಬೆರೆಸಲಾಗಿದೆ ಎಂದು ಅರ್ಥ















