ಹೋಟೇಲು, ರೆಸ್ಟೋರೆಂಟ್ ಗಳು ಬಲವಂತ ಸೇವಾ ಶುಲ್ಕ ಸಂಗ್ರಹಿಸಿದಲ್ಲಿ ದೂರು ದಾಖಲಿಸಿ: ಗ್ರಾಹಕ ಸಂರಕ್ಷಣಾ ಪ್ರಾಧಿಕಾರ

ನವದೆಹಲಿ: ಯಾವುದೇ ಹೋಟೆಲ್‌ಗಳು ಅಥವಾ ರೆಸ್ಟೋರೆಂಟ್‌ಗಳು ಸ್ವಯಂಚಾಲಿತವಾಗಿ ಅಥವಾ ಆಹಾರ ಬಿಲ್‌ಗೆ ಪೂರ್ವನಿಯೋಜಿತವಾಗಿ ಸೇವಾ ಶುಲ್ಕವನ್ನು ಸೇರಿಸಲು ಸಾಧ್ಯವಿಲ್ಲ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿದೆ. ಈ ನಿಟ್ಟಿನಲ್ಲಿ, ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಅನ್ಯಾಯದ ವ್ಯಾಪಾರ ಅಭ್ಯಾಸಗಳು ಮತ್ತು ಗ್ರಾಹಕರ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟಲು ಮಾರ್ಗಸೂಚಿಗಳನ್ನು ಹೊರಡಿಸಿದೆ.

ಬೇರೆ ಯಾವುದೇ ಹೆಸರಿನಿಂದ ಸೇವಾ ಶುಲ್ಕದ ಸಂಗ್ರಹವನ್ನು ಮಾಡತಕ್ಕದ್ದಲ್ಲ. ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳು ಗ್ರಾಹಕರನ್ನು ಸೇವಾ ಶುಲ್ಕವನ್ನು ಪಾವತಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ ಮತ್ತು ಸೇವಾ ಶುಲ್ಕವು ಸ್ವಯಂಪ್ರೇರಿತ, ಐಚ್ಛಿಕ ಮತ್ತು ಗ್ರಾಹಕರ ವಿವೇಚನೆಯಿಂದ ನೀಡಬಹುದು ಎಂದು ಹೋಟೇಲುಗಳು ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸತಕ್ಕದ್ದು.

ಸೇವಾ ಶುಲ್ಕದ ಸಂಗ್ರಹದ ಆಧಾರದ ಮೇಲೆ ಸೇವೆಗಳ ಪ್ರವೇಶ ಅಥವಾ ನಿಬಂಧನೆಗಳ ಮೇಲೆ ಯಾವುದೇ ನಿರ್ಬಂಧವನ್ನು ಗ್ರಾಹಕರ ಮೇಲೆ ವಿಧಿಸತಕ್ಕದ್ದಲ್ಲ. ಆಹಾರದ ಬಿಲ್‌ನೊಂದಿಗೆ ಸೇರಿಸಿ ಮತ್ತು ಒಟ್ಟು ಮೊತ್ತದ ಮೇಲೆ ಜಿಎಸ್‌ಟಿ ವಿಧಿಸುವ ಮೂಲಕ ಸೇವಾ ಶುಲ್ಕವನ್ನು ಸಂಗ್ರಹಿಸತಕ್ಕದ್ದಲ್ಲ ಎಂದು ಮಾರ್ಗಸೂಚಿಗಳು ತಿಳಿಸಿವೆ.

ಕಾನೂನನ್ನು ಉಲ್ಲಂಘಿಸುವ ಹೋಟೆಲ್‌ಗಳು ಅಥವಾ ರೆಸ್ಟೋರೆಂಟ್‌ಗಳ ವಿರುದ್ಧ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ, ಎನ್.ಸಿ.ಎಚ್ 1915 ಗೆ ಅಥವಾ ಎನ್.ಸಿ.ಎಚ್ ಮೊಬೈಲ್ ಅಪ್ಲಿಕೇಶನ್‌ಗೆ ಕರೆ ಮಾಡುವ ಮೂಲಕ, ಅಥವಾ ಇ-ದಾಖಿಲ್ (www.e-daaakhil.nic.in) ಪೋರ್ಟಲ್ ಮೂಲಕ ಗ್ರಾಹಕ ಆಯೋಗಕ್ಕೆ ಅನ್ಯಾಯದ ವ್ಯಾಪಾರ ಅಭ್ಯಾಸದ ವಿರುದ್ಧ ದೂರು ಸಲ್ಲಿಸಬಹುದು ಎಂದು ಸಚಿವಾಲಯ ತಿಳಿಸಿದೆ.

ದೂರಿನ ತ್ವರಿತ ಪರಿಹಾರಕ್ಕಾಗಿ ಹೆಚ್ಚುವರಿಯಾಗಿ, ಗ್ರಾಹಕರು ಸಿಸಿಪಿಎಯಿಂದ ತನಿಖೆ ಮತ್ತು ನಂತರದ ಪ್ರಕ್ರಿಯೆಗಳಿಗಾಗಿ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಬಹುದು. ದೂರನ್ನು ಸಿಸಿಪಿಎಗೆ ಇಮೇಲ್ com-ccpa@nic.in ಮೂಲಕ ಕಳುಹಿಸಬಹುದು.