ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳು ಇಳಿಮುಖವಾಗುತ್ತಿದ್ದು, ರೋಗಲಕ್ಷಣವಿಲ್ಲದ ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡುವ ಮುನ್ನ, ಶಸ್ತ್ರ ಚಿಕಿತ್ಸೆ, ಸ್ಕ್ಯಾನಿಂಗ್ ಮತ್ತು ಇತರ ವೈದ್ಯಕೀಯ ವಿಧಾನಗಳನ್ನು ಮಾಡುವ ಮೊದಲು ಮಾಡಬೇಕಾಗಿದ್ದ ಕೋವಿಡ್-19 ಮುನ್ನೆಚ್ಚರಿಕಾ ಪರೀಕ್ಷೆಯನ್ನು ಸ್ಥಗಿತಗೊಳಿಸುವಂತೆ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಸುಧಾಕರ್ ಕೆ ಬುಧವಾರ (ಫೆ.23) ಮಾಹಿತಿ ನೀಡಿದ್ದಾರೆ.
ಇದು ಹಿಂದಿನ ಕೋವಿಡ್-19 ಪಾಸಿಟಿವ್ ಆಗಿದ್ದ ರೋಗಿಗಳು, ಗುಣಮುಖರಾದವರು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ನಾನ್- ಕೋವಿಡ್ ವಾರ್ಡ್ ಗೆ ಸ್ಥಳಾಂತರಿಸಿದ ರೋಗಿಗಳನ್ನೂ ಒಳಗೊಂಡಿರುತ್ತದೆ. ಆದಾಗ್ಯೂ, ಪ್ರಸ್ತುತ ಮಾರ್ಗಸೂಚಿಗಳ ಪ್ರಕಾರ ರೋಗಲಕ್ಷಣವಿರುವ ರೋಗಿಗಳನ್ನು ಪರೀಕ್ಷಿಸುವುದು, ಪ್ರತ್ಯೇಕಿಸುವುದು ಮತ್ತು ಚಿಕಿತ್ಸೆ ನೀಡುವುದನ್ನು ಯಥಾವತ್ ಮುಂದುವರಿಸಲಾಗುವುದು ಎಂದು ಸಚಿವರು ಟ್ವೀಟ್ ಮಾಡಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕ ಇಂದು 10 ಕೋಟಿ ಕೋವಿಡ್ ವ್ಯಾಕ್ಸಿನೇಷನ್ ಪ್ರಮಾಣವನ್ನು ದಾಟಿದೆ. ಈ ಮೈಲಿಗಲ್ಲು ಸಾಧಿಸಲು ರಾಜ್ಯವು 1 ವರ್ಷ 39 ದಿನಗಳನ್ನು ತೆಗೆದುಕೊಂಡಿದೆ. ಕೋವಿಡ್ -19 ಲಸಿಕೆಯ ಮೊದಲ ಡೋಸ್‌ನ ಇನಾಕ್ಯುಲೇಷನ್‌ನ ಶೇಕಡಾ 100 ರಷ್ಟು ಮತ್ತು ಕೋವಿಡ್ -19 ಲಸಿಕೆಯ ಎರಡನೇ ಡೋಸ್‌ನ ಶೇಕಡಾ 93 ರಷ್ಟನ್ನು ರಾಜ್ಯವು ಪೂರ್ಣಗೊಳಿಸಿದೆ ಎಂದು ಮಾಹಿತಿ ನೀಡಿದ ಆರೋಗ್ಯ ಸಚಿವ, ಈ ಮೈಲಿಗಲ್ಲನ್ನು ಸಾಧಿಸಲು ಶ್ರಮಿಸಿದ ಎಲ್ಲಾ ಆರೋಗ್ಯ ಕಾರ್ಯಕರ್ತರನ್ನು ಮತ್ತು ಜಿಲ್ಲಾಡಳಿತಗಳನ್ನು ಅಭಿನಂದಿಸಿದ್ದಾರೆ.