ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ದ ಎಸ್‌ಎಫ್‌ಐ ಪ್ರತಿಭಟನೆ: Z+ ಭದ್ರತೆ ಒದಗಿಸಲು ಕೇಂದ್ರ ನಿರ್ಧಾರ

ತಿರುವನಂತಪುರ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಅವರ ನಿವಾಸಕ್ಕೆ ಸಿಆರ್‌ಪಿಎಫ್ ಪಡೆಗಳ Z+ ಭದ್ರತೆ ಒದಗಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ ಎಂದು ಕೇರಳ ರಾಜಭವನ ಶನಿವಾರ ಪ್ರಕಟಿಸಿದೆ.

ಶನಿವಾರ ಮುಂಜಾನೆ ಕೊಲ್ಲಂ ಜಿಲ್ಲೆಯ ನಿಲಮೇಲ್‌ನಲ್ಲಿ ತಮ್ಮ ವಿರುದ್ಧ ಪ್ರತಿಭಟನೆ ನಡೆಸಿದ ಎಸ್‌ಎಫ್‌ಐ ಕಾರ್ಯಕರ್ತರನ್ನು ಬಂಧಿಸುವಂತೆ ಒತ್ತಾಯಿಸಿ ಗವರ್ನರ್ ಖಾನ್ ಅವರು ತಮ್ಮ ವಾಹನದಿಂದ ಇಳಿದು ಬೀದಿ ಬದಿಯ ಅಂಗಡಿಯ ಮುಂದೆ ಕುರ್ಚಿ ಹಾಕಿ ಕುಳಿತು ಧರಣಿ ನಡೆಸಿದ್ದಾರೆ.

ಆಡಳಿತಾರೂಢ ಸಿಪಿಐ(ಎಂ)ನ ವಿದ್ಯಾರ್ಥಿ ಘಟಕ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾದ ಹಲವಾರು ಕಾರ್ಯಕರ್ತರು ರಾಜ್ಯಪಾಲರು ಸಮೀಪದ ಕೊಟ್ಟಾರಕ್ಕರಕ್ಕೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಅವರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ.

ಖಾನ್ ಮತ್ತು ಕೇರಳದ ಎಲ್‌ಡಿಎಫ್ ಸರ್ಕಾರದ ನಡುವೆ ಹಲವಾರು ವಿಷಯಗಳ ಬಗ್ಗೆ ವೈಮನಸ್ಯ ಉಂಟಾಗಿದೆ. ಹಿಂದೂ ಬಲಪಂಥೀಯ ಗುಂಪುಗಳ ಬೆಂಬಲಿಗರನ್ನು ತಮ್ಮ ಸೆನೆಟ್‌ಗಳಿಗೆ ನೇಮಿಸುವ ಮೂಲಕ ರಾಜ್ಯಪಾಲರು ವಿಶ್ವವಿದ್ಯಾಲಯಗಳನ್ನು ಕೇಸರಿಮಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿಪಿಐ(ಎಂ) ಆರೋಪಿಸಿದೆ. ಸೆಪ್ಟೆಂಬರ್‌ನಲ್ಲಿ ಅಸೆಂಬ್ಲಿ ಅಂಗೀಕರಿಸಿದ ಕೇರಳ ಸರ್ಕಾರದ ಭೂ ಹಂಚಿಕೆ (ತಿದ್ದುಪಡಿ) ಮಸೂದೆಗೆ ಅಂಗೀಕಾರದ ವಿಳಂಬದ ಬಗ್ಗೆಯೂ ಅಸಮಾಧಾನವಿದೆ.

ಈ ಹಿಂದೆಯೂ ಹಲವು ಬಾರಿ ರಾಜ್ಯಪಾಲರ ಕಾರಿನ ಮೇಲೆ ಹಲ್ಲೆ ನಡೆಸುವ ಪ್ರಯತ್ನ ನಡೆದಿದೆ. ಆಗಲೂ ರಾಜ್ಯಪಾಲರು ಕಾರಿನಿಂದಿಳಿದು ಹಲ್ಲೆಕೋರರನ್ನು ಪ್ರಶ್ನಿಸಲು ಮುಂದಾದಾಗ ಅವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಬಾರಿಯೂ ರಾಜ್ಯಪಾಲರು ಪ್ರತಿಭಟನಕಾರರನ್ನು ಎದುರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯಪಾಲ ಹಾಗೂ ಅವರ ನಿವಾಸಕ್ಕೆ Z+ ಭದ್ರತೆಗೆ ಕೇಂದ್ರ ಮುಂದಾಗಿದೆ.