ಭಾರತದಲ್ಲಿ ಗೂಗಲ್ ಸೇರಿದಂತೆ ಅನೇಕ ಟೆಕ್‌ ಕಂಪೆನಿಗಳಿಂದ ನೇಮಕಾತಿ ಕುಂಠಿತ

ನವದೆಹಲಿ : 2022 ಕ್ಕೆ ಹೋಲಿಸಿದರೆ ಭಾರತದಲ್ಲಿ ಗೂಗಲ್‌ ಸೇರಿದಂತೆ ಅನೇಕ ಟೆಕ್ ಕಂಪೆನಿಗಳು ನೇಮಕಾತಿಯು 90 ಪ್ರತಿಶತದಷ್ಟು ಕುಸಿದಿವೆ. ಕಂಪನಿಗಳು ಭಾರತದಲ್ಲಿ 200 ಮುಕ್ತ ಸ್ಥಾನಗಳನ್ನು ಹೊಂದಿವೆ, ಇದು ಅವರ ವಿಶಿಷ್ಟ ನೇಮಕಾತಿ ಪ್ರಕಿಯೆಯಲ್ಲಿ 98 ಪ್ರತಿಶತ ಇಳಿಕೆಯಾಗಿದೆ ಎಂದು ತಿಳಿಸಿದೆ.ಗೂಗಲ್, ಅಮೆಜಾನ್, ಮೆಟಾ, ಆಪಲ್ ಸೇರಿದಂತೆ ಅನೇಕ ಟೆಕ್ ಕಂಪೆನಿಗಳು ತಮ್ಮ ನೇಮಕಾತಿ ಪ್ರಕ್ರಿಯೆಗಳನ್ನು ನಿಧಾನಗೊಳಿಸುತ್ತಿದ್ದು, ಮುಂದೆಯೂ ಉದ್ಯೋಗಾವಕಾಶಗಳ ಕೊರತೆ ಕಂಡು ಬರಲಿದೆ ಎಂದು ವರದಿಗಳು ತಿಳಿಸಿವೆ. ಎಕನಾಮಿಕ್ ಟೈಮ್ಸ್ (ಇಟಿ) ನ ಇತ್ತೀಚಿನ ವರದಿಯ ಪ್ರಕಾರ, ಜಾಗತಿಕ ಆರ್ಥಿಕ ಕುಸಿತದಿಂದಾಗಿ ಈ ಟೆಕ್ ಕಂಪೆನಿಗಳು ನೇಮಕಾತಿಗೆ ತಡೆ ಒಡ್ಡುತ್ತಿದ್ದಾರೆ. ಪ್ರಮುಖ ಟೆಕ್ ದೈತ್ಯರ ನೇಮಕಾತಿ ನಿಧಾನಗತಿಯು ಉದ್ಯಮವು ಪ್ರಸ್ತುತ ಎದುರಿಸುತ್ತಿರುವ ಸವಾಲಿನ ಸಮಯವನ್ನು ತೋರಿಸಿದೆ.

ಇವು ಯಥಾಸ್ಥಿತಿ ಕಾಯ್ದುಕೊಳ್ಳಲು ಬದಲಿ ನೇಮಕಾತಿ ಕ್ರಮ ಕೈಗೊಳ್ಳುವುದಿಲ್ಲ. ಯಾವುದೇ ಗಮನಾರ್ಹ ಪ್ರತಿಭೆಗಳ ಸೇರ್ಪಡೆಗಳನ್ನು ಮಾಡುವುದಿಲ್ಲ ಎಂದು ಎಕ್ಸ್‌ಫೀನೊದಲ್ಲಿನ ವರ್ಕ್‌ಫೋರ್ಸ್ ರಿಸರ್ಚ್ ಮುಖ್ಯಸ್ಥ ಪ್ರಸಾದ್‌ ಎಂಎಸ್ ಇಟಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಐಟಿ ವಿಶ್ಲೇಷಕರು ಮತ್ತು ಉದ್ಯಮ ತಜ್ಞರ ಪ್ರಕಾರ, ಮುಂದಿನ ಎರಡು ತ್ರೈಮಾಸಿಕಗಳಲ್ಲಿ ನೇಮಕಾತಿ ವಿಳಂಬದಂತಹ ಕ್ರಮಗಳು ಮುಂದುವರಿಯುವ ನಿರೀಕ್ಷೆಯಿದೆ. ಇದು ದುರ್ಬಲ ಬೇಡಿಕೆ ಮತ್ತು ಉದ್ಯೋಗಿಗಳ ಬಳಕೆಯನ್ನು ಸುಧಾರಿಸುವತ್ತ ಗಮನಹರಿಸುವ ಕಾರಣದಿಂದಾಗಿರುತ್ತದೆ. ಆರ್ಥಿಕ ಕುಸಿತದ ಕಳವಳದಿಂದ ಟೆಕ್ ವಲಯದ ಮೇಲೆ ನಾಟಕೀಯ ಪ್ರಭಾವವನ್ನು ಬೀರಿದೆ.

ಜಾಗತಿಕ ಆರ್ಥಿಕತೆಯು ನಿಧಾನವಾಗುತ್ತಿದೆ. ಇದರಿಂದ ಕಂಪನಿಗಳು ಆದಾಯವನ್ನು ಹೆಚ್ಚಿಸುವ, ಪುನರ್‌ರಚನಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಅಲ್ಲದೆ ತಮ್ಮ ಯೋಜನೆಗಳಲ್ಲಿ ನಿಧಾನಗತಿಯನ್ನು ಮಾಡುತ್ತಿವೆ. ವರ್ಷವಿಡೀ ನೇಮಕಾತಿ ವಿಳಂಬ ಕ್ರಮವು ತಂತ್ರಜ್ಞಾನದ ಪ್ರತಿಭೆಗಳ ಮೇಲೆ ವಿಶೇಷವಾಗಿ ಅನುಭವಿ ನೌಕರರ ಮೇಲೆ ಪರಿಣಾಮ ಬೀರುತ್ತದೆ. ಉನ್ನತ ಕಂಪನಿಗಳಲ್ಲಿ ನೇಮಕಾತಿ ಸ್ಥಗಿತವು ಸಣ್ಣ ಕಂಪನಿಗಳಲ್ಲಿ ಎಚ್ಚರಿಕೆ ವಹಿಸುವ ಸಂಕೇತವಾಗಿ ಕಂಡು ಬಂದಿದೆ .

ಪ್ರಮುಖವಾಗಿ, Facebook, Amazon, Apple, Microsoft, Netflix ಮತ್ತು Google ಸೇರಿದಂತೆ ಪ್ರಮುಖ ಟೆಕ್ ದೈತ್ಯರು ಪ್ರಸ್ತುತ ಭಾರತದಲ್ಲಿ ತಮ್ಮ ಪ್ರಮುಖ ಕಾರ್ಯಾಚರಣೆಗಳಲ್ಲಿ ಕೇವಲ 1,50,000 ಜನರ ಕಾರ್ಯಪಡೆಯನ್ನು ಹೊಂದಿದ್ದಾರೆ. 2023ರಲ್ಲಿ ಗಮನಾರ್ಹ ನೇಮಕಾತಿ ವಿಳಂಬವನ್ನು ಇವು ಮಾಡಿವೆ.

ಇದರಿಂದಾಗಿ ನೇಮಕಾತಿಯಲ್ಲಿ ತೀವ್ರ ಕುಸಿತ ಕಂಡುಬಂದಿದೆ ಎಂದು ಅಂಕಿಅಂಶ ತಿಳಿಸಿದೆ. ಡಿಸೆಂಬರ್ 2022 ರ ಹೊತ್ತಿಗೆ ಪ್ರಮುಖ ಟೆಕ್ ಕಂಪನಿಗಳಿಂದ ಸಕ್ರಿಯ ಬೇಡಿಕೆಯು ಜುಲೈಗೆ ಹೋಲಿಸಿದರೆ 78 ಪ್ರತಿಶತದಷ್ಟು ಕುಸಿದಿದೆ. ಇದು 1.5 ವರ್ಷಗಳ ಕನಿಷ್ಠ ಮಟ್ಟವನ್ನು ತಲುಪಿತ್ತು. “ಜಾಗತಿಕವಾಗಿ ಪ್ರಮುಖ ಟೆಕ್ ಕಂಪೆನಿಗಳು ಮತ್ತು ಅವರ ಅಂಗಸಂಸ್ಥೆಗಳಲ್ಲಿ ಪ್ರಸ್ತುತವಾಗಿ 30,000 ಕ್ಕಿಂತ ಹೆಚ್ಚು ವಜಾ ಮಾಡುವ ಕ್ರಮ ಕೈಗೊಳ್ಳಲಾಗುತ್ತಿದೆ. ಜಾಗತಿಕವಾಗಿ ಮೈಕ್ರೋಸಾಫ್ಟ್, ಅಮೆಜಾನ್ ಮತ್ತು ಗೂಗಲ್ ಸೇರಿದಂತೆ ಬಿಗ್ ಟೆಕ್ ಕಂಪನಿಗಳು ಸಾವಿರಾರು ಉದ್ಯೋಗಗಳನ್ನು ಕಡಿತಗೊಳಿಸಿವೆ” ಎಂದು ವರದಿ ತಿಳಿಸಿದೆ.