ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡಕದ ಯುವ ರೆಡ್ಕ್ರಾಸ್ ಘಟಕ ಮತ್ತು ರೋವರ್-ರೇಂಜರ್ ಘಟಕಗಳ ವತಿಯಿಂದ ಇತ್ತೀಚೆಗೆ ಕಾಲೇಜಿನಲ್ಲಿ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮ ನಡೆಯಿತು.
ಭಾರತೀಯ ರೆಡ್ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕೆ. ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಗಳು ಮತ್ತು ಆರೋಗ್ಯ ಪಾಲಿ ಕ್ಲಿನಿಕ್, ನೇಜರ್, ಸಂತೆಕಟ್ಟೆ ವೈದ್ಯ ಡಾ| ಕೀರ್ತಿ ಪಾಲನ್ ಪ್ರಥಮ ಚಿಕಿತ್ಸಾ ತರಬೇತಿಯನ್ನು ನಡೆಸಿಕೊಟ್ಟರು. ಪ್ರಥಮ ಚಿಕಿತ್ಸೆ ಎಂದರೇನು? ತಿಳಿಸಿ, ರೋಗಿಯ ಸ್ಥಿತಿ ಬಿಗಡಾಯಿಸದಂತೆ ನೋಡಿಕೊಳ್ಳುವುದು, ಸುಧಾರಿಸಿಕೊಳ್ಳಲು ಸಹಾಯ ಮಾಡುವುದು ಮತ್ತು ಜೀವರಕ್ಷಣೆ- ತುರ್ತುಚಿಕಿತ್ಸೆಯ ಪ್ರಧಾನ ಅಂಶಗಳು ಎಂದು ವಿವರಿಸಿದರು. ಅಪಘಾತ, ಸುಟ್ಟಗಾಯ, ಪಿಟ್ಸ್ (ಮೂರ್ಛೆರೋಗ), ಹೃದಯಾಘಾತ ಮೊದಲಾದ ಸಂದರ್ಭಗಳಲ್ಲಿ ನೀಡಬಹುದಾದ ಪ್ರಥಮ ಚಿಕಿತ್ಸೆಯ ಬಗೆಗೆ ಮಾಹಿತಿ ನೀಡಿದರು. ಜೊತೆಗೆ ಹೃದಯ-ಶ್ವಾಸಕೋಶದ ಪುನರುಜ್ಜೀವನದ (ಸಿ.ಪಿ.ಆರ್) ಬಗೆಗೆ ಪ್ರಾಯೋಗಿಕವಾಗಿ ಮನದಟ್ಟು ಮಾಡಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನ ಮಾತನಾಡಿ, ‘ಜೀವ ಉಳಿಸುವ ಕಾರ್ಯ ಅಮೂಲ್ಯವಾದುದು, ಈ ಹಿನ್ನೆಲೆಯಲ್ಲಿ ಪ್ರಥಮ ಚಿಕಿತ್ಸಾ ತರಬೇತಿಗೆ ತುಂಬಾ ಮಹತ್ವವಿದೆ’ ಎಂದು ತಿಳಿಸಿದರು.
ಯುವ ರೆಡ್ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ. ರಾಘವೇಂದ್ರ ಪಿ ಕೆ ಪ್ರಾಸ್ತಾವಿಕ ಮಾತುಗಳಾಡಿ ಯುವ ರೆಡ್ಕ್ರಾಸ್ ಘಟಕ ಮತ್ತು ರೋವರ್-ರೇಂಜರ್ ಘಟಕಗಳ ಕಾರ್ಯಚಟುವಟಿಕೆಗಳನ್ನು ತಿಳಿಸಿ, ಎಲ್ಲರನ್ನೂ ಸ್ವಾಗತಿಸಿದರು.
ರೇಂಜರ್ ಘಟಕದ ಸಂಚಾಲಕಿ ಸವಿತಾ ವಂದಿಸಿದರು. ರೇಂಜರ್ ವಿದ್ಯಾರ್ಥಿನಿ ಕು. ಅರ್ಪಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಬೋಧಕರು, ಬೋಧಕೇತರರು ಹಾಗೂ ಯುವ ರೆಡ್ಕ್ರಾಸ್, ರೋವರ್-ರೇಂಜರ್ ಘಟಕಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.