ಹೆಜಮಾಡಿ: ಇಬ್ಬರು ಮುಸ್ಲಿಂ ಯುವಕರ ಪ್ರಾಣರಕ್ಷಣೆಗೆ ಒಂದು ಕಿ.ಮೀ ದೂರದಿಂದ ಓಡಿಬಂದ ಹಿಂದೂ ಯುವಕರು

ಪಡುಬಿದ್ರಿ: ಹೆಜಮಾಡಿ ಕಾಮಿನಿ ಹೊಳೆಯಲ್ಲಿ ಮುಳುಗಿದ ಇಬ್ಬರು ಮುಸ್ಲಿಂ ಯುವಕರನ್ನು ಹಿಂದೂ ಯುವಕರು ಜೀವದ ಹಂಗು ತೊರೆದು ರಕ್ಷಿಸಲು ಮುಂದಾಗಿದ್ದ ಘಟನೆ ಗುರುವಾರ ಸಂಜೆ ನಡೆದಿದೆ.

ದುರದೃಷ್ಟವಶಾತ್ ಇಬ್ಬರು ಮುಸ್ಲಿಂ ಯುವಕರ ದೇಹಗಳನ್ನು ನೀರಿನಿಂದ ಮೇಲಕ್ಕೆತ್ತಲಾಗಿದ್ದರೂ, ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಇಬ್ಬರು ಕೊನೆಯುಸಿರೆಳೆದಿದ್ದಾರೆ.

ವಿಶ್ವ ಹಿಂದೂ ಪರಿಷತ್- ಬಜರಂಗದಳ ಕಾಪು ಪ್ರಖಂಡದ ಸಹಕಾರ್ಯದರ್ಶಿ ನಿತೇಶ್ ಮೊಗವೀರ ಎರ್ಮಾಳ್, ಪಡುಬಿದ್ರಿ ಬಿಜೆಪಿ ಯುವಮೋರ್ಚಾದ ಉಪಾಧ್ಯಕ್ಷ ಕಿರಣ್ ಮೊಗವೀರ ಪಡುಬಿದ್ರಿ ಮತ್ತು ರಂಜಿತ್ ಮೊಗವೀರ ಎರ್ಮಾಳ್ ಮುಸ್ಲಿಂ ಯುವಕರ ರಕ್ಷಣೆ ಇಳಿದ ಸಾಹಸಿಗಳು.

ಒಂದು ಕಿ.ಮೀ ದೂರದಿಂದ ಓಡಿಬಂದಿದ್ದರು: ಕಾಮಿನಿ ಹೊಳೆಯಲ್ಲಿ ಹೆಜಮಾಡಿಯ ಮೂವರು ಮುಸ್ಲಿಂ ಯುವಕರು ಈಜುಲು ಇಳಿದಿದ್ದು, ಈ ವೇಳೆ ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ. ಆದರೆ ಅವರೊಂದಿಗೆ ಬಂದಂತಹ ಸ್ನೇಹಿತರು ರಕ್ಷಣೆಗೆ ಮುಂದಾಗದೆ ಬಿಟ್ಟು ಹೋದ ವಿಷಯ ತಿಳಿದ ಈ ಮೂವರು ಸುಮಾರು ಒಂದು ಕಿ.ಮೀ. ದೂರದಿಂದ ಓಡಿಬಂದು ಸುಮಾರು 12 ಅಡಿ ಆಳದ ನೀರಿನಲ್ಲಿ ಕೇವಲ 5 ನಿಮಿಷಗಳ ಅಂತರದಲ್ಲಿ ಎರಡು ದೇಹಗಳನ್ನು ಮೇಲಕ್ಕೆತ್ತಿದ್ದಾರೆ. ಆದರೆ ದುರದೃಷ್ಟವಶಾತ್ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಇಬ್ಬರು ಯುವಕರ ಪ್ರಾಣಪಕ್ಷಿ ಹಾರಿಹೋಗಿದೆ.

ತಮ್ಮ ಜೀವದ ಹಂಗು ತೊರೆದು ಮುಸ್ಲಿಂ ಯುವಕರನ್ನು ರಕ್ಷಿಸಲು ಮುಂದಾದ ಹಿಂದೂ ಯುವಕರ ಸಾಹಸಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.