ಆಹಾರ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ದಿನೇದಿನೆ ಹೊರಬರುತ್ತಿರುವ ಸುದ್ದಿಗಳು ಜನಸಾಮಾನ್ಯರಲ್ಲಿ ಆತಂಕ ಮೂಡಿಸಿವೆ. ಆಧುನಿಕ ಮನುಷ್ಯನಿಗೆ ಏನು ತಿನ್ನಬೇಕು, ಏನು ಕುಡಿಯಬೇಕು ಎಂಬುದೇ ಗೊಂದಲವಾಗುತ್ತಿದೆ. ಇದೀಗ ಕುಡಿಯುವ ನೀರಿನ ಸುರಕ್ಷತೆಯೂ ಪ್ರಶ್ನೆಗೆ ಒಳಗಾಗಿದೆ. ಬಾಟಲಿ ನೀರಿನ ಮಾದರಿಯಲ್ಲಿ ಕ್ಯಾನ್ಸರ್ಗೆ ಕಾರಣವಾಗಬಹುದಾದ ಬ್ರೋಮೇಟ್ ಅಂಶ ನಿಗದಿತ ಮಿತಿಗಿಂತ ಹೆಚ್ಚಾಗಿ ಪತ್ತೆಯಾಗಿದೆ ಎಂಬ ಸುದ್ದಿ ಆತಂಕಕ್ಕೆ ಕಾರಣವಾಗಿದೆ.
ಪ್ರಯಾಣ, ಮದುವೆ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಜನರು ಬಾಟಲಿ ನೀರನ್ನೇ ಹೆಚ್ಚಾಗಿ ಅವಲಂಬಿಸುತ್ತಾರೆ. ಇಂತಹ ಸಂದರ್ಭದಲ್ಲಿ ಭಾರತದ ಪ್ರಮುಖ ಬಾಟಲಿ ನೀರು ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ‘ಬಿಸ್ಲೆರಿ’ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಬಿಸ್ಲೆರಿ ಇಂಟರ್ನ್ಯಾಷನಲ್ನ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿಯನ್ನು ‘ಅಸುರಕ್ಷಿತ’ ಎಂದು ಗುರುತಿಸಿದೆ.
ಭಾರತದ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾರುಕಟ್ಟೆಯಲ್ಲಿ ಸುಮಾರು ಶೇ. 33ರಷ್ಟು ಪಾಲು ಹೊಂದಿದೆ ಎನ್ನಲಾಗಿರುವ ಸಂಸ್ಥೆಯ ನೀರಿನ ಮಾದರಿಯಲ್ಲೇ ಅಪಾಯಕಾರಿ ರಾಸಾಯನಿಕಗಳು ಪತ್ತೆಯಾಗಿರುವುದು ಚರ್ಚೆಗೆ ಕಾರಣವಾಗಿದೆ.
ಬಿಸ್ಲೆರಿ ನೀರಿನ ಮಾದರಿಯಲ್ಲಿ ಏನು ಪತ್ತೆಯಾಗಿದೆ? FSSAI ಪರೀಕ್ಷಾ ವರದಿಯಲ್ಲಿ ಏನಿದೆ? ಬ್ರೋಮೇಟ್ ಮತ್ತು ಪಾಲಿನ್ಯೂಕ್ಲಿಯರ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ಗಳು (PAH) ಮಾನವನ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು? ಈ ಕುರಿತ ಮಾಹಿತಿ ಇಲ್ಲಿದೆ.

ಏನಿದು ಬಿಸ್ಲೆರಿ ಪ್ರಕರಣ?
FSSAI ತಿಳಿಸಿರುವಂತೆ, ‘ಮೆಸರ್ಸ್ ಬಿಸ್ಲೆರಿ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್’ ಘಟಕದಿಂದ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿಯನ್ನು ವಿಶ್ಲೇಷಣೆಗಾಗಿ ಸಂಗ್ರಹಿಸಲಾಗಿತ್ತು. ಖನಿಜಯುಕ್ತ ನೀರನ್ನು ಹೊರತುಪಡಿಸಿದ ಕುಡಿಯುವ ನೀರಿನ ಈ ಮಾದರಿಯಲ್ಲಿ ಬ್ರೋಮೇಟ್ ಅಂಶ ನಿಗದಿತ ಮಿತಿಗಿಂತ ಹೆಚ್ಚಾಗಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ-2006ರ ಅಡಿಯಲ್ಲಿ ನೀರನ್ನು ಅಸುರಕ್ಷಿತ ಎಂದು ಘೋಷಿಸಲಾಗಿತ್ತು.
ಆಹಾರ ವ್ಯವಹಾರ ನಿರ್ವಾಹಕರು (FBO) ಮೇಲ್ಮನವಿ ಸಲ್ಲಿಸಿದ ಬಳಿಕ ಮಾದರಿಯನ್ನು ರೆಫರಲ್ ಫುಡ್ ಲ್ಯಾಬೊರೇಟರಿಗೆ ಕಳುಹಿಸಲಾಗಿತ್ತು. ಅಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪಾಲಿನ್ಯೂಕ್ಲಿಯರ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ಗಳು (PAH) ಪತ್ತೆಯಾಗಿವೆ ಎಂದು FSSAI ತಿಳಿಸಿದೆ.
ಪ್ರಯೋಗಾಲಯದ ಪರೀಕ್ಷಾ ಫಲಿತಾಂಶಗಳ ಆಧಾರದಲ್ಲಿ ನೀರು ಸೇವನೆಗೆ ಸುರಕ್ಷಿತವಲ್ಲ ಎಂದು ನಿರ್ಧರಿಸಲಾಗಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ-2006ರ ಅಡಿಯಲ್ಲಿ ಅಸುರಕ್ಷಿತ ಆಹಾರಕ್ಕೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಬಿಸ್ಲೆರಿ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಲಾಗಿದೆ ಎಂದು ನಿಯಂತ್ರಕ ಸಂಸ್ಥೆ ತಿಳಿಸಿದೆ.

ಬ್ರೋಮೇಟ್ನಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು?
ಬ್ರೋಮೇಟ್ ಎಂಬ ರಾಸಾಯನಿಕ ಸಂಯುಕ್ತವು ನೈಸರ್ಗಿಕವಾಗಿ ದೊರೆಯುವ ನೀರಿನಲ್ಲಿ ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿರುವುದಿಲ್ಲ. ಬದಲಾಗಿ, ಕುಡಿಯುವ ನೀರನ್ನು ಸಂಸ್ಕರಿಸುವ ಸಂದರ್ಭದಲ್ಲಿ ಸೋಂಕು ನಿವಾರಣೆಯ ಉಪ ಉತ್ಪನ್ನವಾಗಿ ಇದು ರೂಪುಗೊಳ್ಳಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಬ್ರೋಮೇಟ್ ಅನ್ನು ವಿಷಕಾರಿ ಹಾಗೂ ದೀರ್ಘಕಾಲೀನ ಕ್ಯಾನ್ಸರ್ ಕಾರಕ ಅಂಶವೆಂದು ಗುರುತಿಸಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಇದರ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ.
- ಜೀರ್ಣಾಂಗದ ಸಮಸ್ಯೆಗಳು: ವಾಕರಿಕೆ, ವಾಂತಿ, ಹೊಟ್ಟೆ ನೋವು ಮತ್ತು ಅತಿಸಾರ ಉಂಟಾಗಬಹುದು.
- ನರಮಂಡಲದ ಮೇಲೆ ಪರಿಣಾಮ: ಕೇಂದ್ರ ನರಮಂಡಲದ ಕಾರ್ಯಕ್ಷಮತೆ ಕುಂದುವ ಸಾಧ್ಯತೆಯಿದೆ.
- ರಕ್ತಕಣಗಳ ನಾಶ: ಹೀಮೊಲಿಟಿಕ್ ಅನಿಮಿಯಾ ಎಂಬ ಸ್ಥಿತಿ ಉಂಟಾಗಿ ಕೆಂಪು ರಕ್ತಕಣಗಳು ನಾಶವಾಗಬಹುದು.
- ಶ್ವಾಸಕೋಶದ ಸಮಸ್ಯೆ: ಪಲ್ಮನರಿ ಎಡಿಮಾ ಎಂಬ ಸ್ಥಿತಿ ಉಂಟಾಗಿ ಶ್ವಾಸಕೋಶಗಳಲ್ಲಿ ದ್ರವ ಸಂಗ್ರಹವಾಗಬಹುದು.
ದೀರ್ಘಕಾಲದವರೆಗೆ ಬ್ರೋಮೇಟ್ಗೆ ಒಡ್ಡಿಕೊಳ್ಳುವುದು ಕ್ಯಾನ್ಸರ್ ಅಪಾಯಕ್ಕೂ ಕಾರಣವಾಗಬಹುದು ಎಂಬುದು ಪ್ರಮುಖ ಆರೋಗ್ಯ ಕಳವಳವಾಗಿದೆ.

PAHಗಳು ಮಾನವನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ?
ಪಾಲಿನ್ಯೂಕ್ಲಿಯರ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ಗಳನ್ನು (PAH) ಪಾಲಿಸೈಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ಗಳು ಎಂದೂ ಕರೆಯಲಾಗುತ್ತದೆ. ಇವು 100ಕ್ಕೂ ಹೆಚ್ಚು ಸಾವಯವ ರಾಸಾಯನಿಕ ಸಂಯುಕ್ತಗಳನ್ನು ಒಳಗೊಂಡಿರುವ ಗುಂಪಾಗಿದೆ. ಕಲ್ಲಿದ್ದಲು, ತೈಲ, ಅನಿಲ, ಮರ, ಕಸ ಅಥವಾ ತಂಬಾಕು ಅಪೂರ್ಣವಾಗಿ ಉರಿದಾಗ ಇವು ಉತ್ಪತ್ತಿಯಾಗುತ್ತವೆ. ಮಾಂಸ ಹಾಗೂ ಇತರ ಆಹಾರ ಪದಾರ್ಥಗಳನ್ನು ಅತಿಯಾದ ತಾಪಮಾನದಲ್ಲಿ ಸುಟ್ಟು ಕರಕಲಾಗಿಸಿದಾಗಲೂ PAHಗಳು ರೂಪುಗೊಳ್ಳಬಹುದು.
ಬಾಟಲಿ ನೀರಿನಂತಹ ಉತ್ಪನ್ನಗಳಲ್ಲಿ ಈ ರಾಸಾಯನಿಕಗಳು ಕೈಗಾರಿಕಾ ಮಾಲಿನ್ಯ, ಕಲುಷಿತ ಅಂತರ್ಜಲ, ಮೇಲ್ಮೈ ಹರಿವು ಅಥವಾ ಪ್ಯಾಕೇಜಿಂಗ್ ವಸ್ತುಗಳ ಮೂಲಕ ಪ್ರವೇಶಿಸುವ ಸಾಧ್ಯತೆಯಿದೆ.
PAHಗಳು ಕೊಬ್ಬಿನಲ್ಲಿ ಕರಗುವ ಸ್ವಭಾವ ಹೊಂದಿವೆ. ಉಸಿರಾಟದ ಮೂಲಕ, ಆಹಾರ ಸೇವನೆಯಿಂದ ಅಥವಾ ಚರ್ಮದ ಮೂಲಕ ದೇಹವನ್ನು ಪ್ರವೇಶಿಸಬಹುದು. ದೇಹದೊಳಗೆ ಹೀರಿಕೊಂಡ ಬಳಿಕ ಜೀವಕೋಶ ಪೊರೆಗಳನ್ನು ದಾಟಿ ಕೊಬ್ಬಿನ ಅಂಗಾಂಶಗಳು, ಯಕೃತ್ತು ಮತ್ತು ಮೂತ್ರಪಿಂಡಗಳಲ್ಲಿ ಸಂಗ್ರಹಗೊಳ್ಳುವ ಸಾಧ್ಯತೆಯಿದೆ.
ಕ್ಯಾನ್ಸರ್ ಅಪಾಯ
PAHಗಳಿಗೆ ಸಂಬಂಧಿಸಿದ ಪ್ರಮುಖ ದೀರ್ಘಕಾಲೀನ ಆರೋಗ್ಯ ಕಳವಳವೆಂದರೆ ಕ್ಯಾನ್ಸರ್ ಅಪಾಯ. ದೇಹದೊಳಗೆ ಯಕೃತ್ತು ಕೆಲವು PAHಗಳನ್ನು ಹೆಚ್ಚು ಪ್ರತಿಕ್ರಿಯಾಶೀಲ ಸಂಯುಕ್ತಗಳಾಗಿ ಪರಿವರ್ತಿಸುತ್ತದೆ. ಇವು DNAಗೆ ಬಂಧಿತಗೊಂಡು ಅದರ ಮೇಲೆ ಹಾನಿಕಾರಕ ಪರಿಣಾಮ ಬೀರಬಹುದು.
ಇದರಿಂದ ಆನುವಂಶಿಕ ರೂಪಾಂತರಗಳು ಉಂಟಾಗಿ ಶ್ವಾಸಕೋಶ, ಚರ್ಮ, ಮೂತ್ರಕೋಶ ಮತ್ತು ಜಠರಗರುಳಿನ ಕ್ಯಾನ್ಸರ್ಗಳ ಅಪಾಯ ಹೆಚ್ಚಾಗುವ ಸಾಧ್ಯತೆಯಿದೆ.

ಮದುವೆ, ಸಮಾರಂಭಗಳಲ್ಲಿ ಇನ್ನಾದರೂ ಹೇಳಿ ಬಾಟಲಿ ನೀರಿಗೆ ಗುಡ್ ಬೈ,
ಎಲ್ಲಾ ಶುಭ ಸಮಾರಂಭದಲ್ಲೂ ಬಾಟಲಿ ನೀರು ಕೊಡಲಾಗುತ್ತಿದೆ. ಹೀಗೆ ಕೊಡುವುದರ ಮೂಲಕ ನೀರಿನ ಜೊತೆ ಅನಾರೋಗ್ಯವನ್ನು ಕೊಡಲಾಗುತ್ತಿದೆ. ದಯವಿಟ್ಟೂ ಇನ್ನಾದರೂ ಸಾರ್ವಜನಿಕರು ಮದುವೆ ಸಹಿತ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸ್ಟೀಲ್ ಲೋಟಗಳ ಮೂಲಕ ನೀರು ಕೊಡುವ ಹಳೆ ಸಂಪ್ರದಾಯವನ್ನು ಆರೋಗ್ಯದ ದೃಷ್ಟಿಯಿಂದ ಮತ್ತೆ ಜಾರಿಗೊಳಿಸಿದರೆ ಸಮಾಜ ನೆಮ್ಮದಿಯಿಂದ ಇರಲಿದೆ.















