ಮೂಡುಬಿದಿರೆ : ವಿದೇಶಗಳಲ್ಲಿ ದುಡಿಯುವ ಎಂಜಿನಿಯರ್ ಗಳಿಗಿಂತ ಲಾಭದಾಯಕ ಕೃಷಿ. ನಾವು ಉನ್ನತ ಶಿಕ್ಷಣ ಪಡೆದಿದ್ದರೂ ಹಲಸಿನ ಕೃಷಿಯಲ್ಲಿ ತೊಡಗಿಸಿಕೊಂಡು ಹೆಚ್ಚಿನ ಆದಾಯದೊಂದಿಗೆ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದೇವೆ ಎಂದು ದೊಡ್ಡಬಳ್ಳಾಪುರದ ಕೃಷಿಕ ಅಶೋಕ್ ಕೆ. ಎಸ್. ಅಭಿಪ್ರಾಯಪಟ್ಟರು.
ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಪವರ್ ಫ್ರೆಂಡ್ಸ್ ಬೆದ್ರ, ವಂಶಿ ಇವೆಂಟ್ಸ್, ಬೆನಕ ಇವೆಂಟ್ಸ್ ಹಾಗೂ ಜೆಸಿಐ ಮೂಡುಬಿದಿರೆ ತ್ರಿಭುವನ್ ಸಂಯುಕ್ತ ಆಶ್ರಯದಲ್ಲಿ ವಿದ್ಯಾಗಿರಿಯ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ಬೃಹತ್ ಹಲಸು ಮೇಳ ಸಮಾರೋಪ ಸಮಾರಂಭ ದಲ್ಲಿ ಮಾತನಾಡುತ್ತಿದ್ದರು.
ಬಡವರ ಹಸಿವನ್ನು ನೀಗಿಸುತ್ತಿದ್ದ ಹಲಸು ಇಂದು ಹಲವಾರು ಪ್ರಯೋಗಗಳ ಮೂಲಕ ವಿವಿಧ ಖಾದ್ಯಗಳಾಗಿ ಮಾರ್ಪಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಈ ಮೇಳದಿಂದ ಕೇವಲ ಹಲಸು ಮಾತ್ರವಲ್ಲದೆ ಮಾವು, ಗೇರು ಹಾಗೂ ಗೃಹ ಉತ್ಪನ್ನಗಳ ಮೌಲ್ಯವರ್ಧನೆಯಾಗುತ್ತದೆ, ಕೃಷಿಗೂ ಪ್ರೋತ್ಸಾಹ ನೀಡಿದಂತ್ತಾಗುತ್ತದೆ ಉದ್ಯಮಿ ಕೆ. ಶ್ರೀಪತಿ ಭಟ್ ಹೇಳಿದರು.
ವಂಶಿ ಇವೆಂಟ್ಸ್ ಮಾಲಕಿ ರಮಿತಾ ಸೂರ್ಯವಂಶಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸುತ್ತಿರುವ ಈ ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಹಲಸಿನ ವೈವಿಧ್ಯಮಯ ಖಾದ್ಯಗಳು ಮೇಳದ ಪ್ರಮುಖ ಆಕರ್ಷಣೆಯಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ನುರಿತ ಮಾರಾಟಗಾರರು ವಿಶೇಷ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ನಡೆಸುತ್ತಿದ್ದಾರೆ ಎಂದರು.
ಲಯನ್ಸ್ ಅಧ್ಯಕ್ಷ ಶಿವ ಪ್ರಸಾದ್ ಹೆಗ್ಡೆ, ಪುತ್ತಿಗೆ ಫ್ರೆಂಡ್ಸ್ ಅಧ್ಯಕ್ಷ ಮುರಳೀಧರ ಕೋಟ್ಯಾನ್, ಪ್ರೆಸ್ ಕ್ಲಬ್ ಅಧ್ಯಕ್ಷ ಸೀತಾರಾಮ ಆಚಾರ್ಯ, ರೋಟರಿ ಟೆಂಪಲ್ ಟೌನ್ ಅಧ್ಯಕ್ಷ ಹರೀಶ್ ಎಂ.ಕೆ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶ್ವೇತಾ ಜೈನ್, ಬಂಟರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಸ್. ಹೆಗ್ಡೆ, ಬೆನಕ ಇವೆಂಟ್ಸ್ ಮಾಲಕ ಗಣೇಶ ಬಾರ್ಕೂರು, ಜೆಸಿಐ ಮೂಡುಬಿದಿರೆ ಅಧ್ಯಕ್ಷ ಸುಧಾಕರ ಶೆಟ್ಟಿ, ಪವರ್ ಫ್ರೆಂಡ್ಸ್ ಅಧ್ಯಕ್ಷ ವಿನಯ್, ನಮೋ ಫ್ರೆಂಡ್ಸ್ ನೆತ್ತೋಡಿಯ ಕಿರಣ್ ಸುವರ್ಣ, ಹೊಸ ಕನಸು ಟ್ರಸ್ಟ್ ನೆತ್ತೋಡಿಯ ಅಧ್ಯಕ್ಷ ಸಂಪತ್ ಕುಮಾರ್, ಪ್ರಮುಖರಾದ ರಾಜಾರಾಂ ನಾಗರಕಟ್ಟೆ, ಕುಮಾರ್ ಇರುವೈಲ್ ಉಪಸ್ಥಿತರಿದ್ದರು.
ಶ್ರೀನಿಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಜಯಪ್ರಕಾಶ್ ಭಂಡಾರಿ ವಂದಿಸಿದರು.

















