ನಂದಿನಿ ಹಾಲಿನ ವಿರುದ್ಧ ರೀಲ್ಸ್ ಮಾಡಿದ ವೈದ್ಯೆಗೆ ಹೈಕೋರ್ಟ್ ತರಾಟೆ; ‘ಇಷ್ಟವಿಲ್ಲದಿದ್ದರೆ ನಂದಿನಿ ಹಾಲು ಕುಡಿಯಬೇಡಿ’ ಎಂದ ನ್ಯಾಯಪೀಠ

ಬೆಂಗಳೂರು: ನಂದಿನಿ ಹಾಲಿನ ಉತ್ಪನ್ನಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡಿ ವಿವಾದಕ್ಕೀಡಾಗಿದ್ದ ಚರ್ಮರೋಗ ತಜ್ಞೆ ಡಾ. ಶರಣ್ಯ ಪದ್ಮ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ವಿಚಾರಣೆ ವೇಳೆ ನ್ಯಾಯಪೀಠ ವೈದ್ಯೆಯ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಏನಿದು ಪ್ರಕರಣ?

ಕಳೆದ ಫೆಬ್ರವರಿಯಲ್ಲಿ ಡಾ. ಶರಣ್ಯ ಪದ್ಮ ಅವರು ನಂದಿನಿಯ ಸ್ಟ್ರಾಬೆರಿ ರುಚಿಯ ಹಾಲು ಸೇರಿದಂತೆ ಕೆಲವು ಉತ್ಪನ್ನಗಳು ನೈಸರ್ಗಿಕ ಹಣ್ಣುಗಳನ್ನು ಹೊಂದಿಲ್ಲ ಹಾಗೂ ಕೃತಕ ಬಣ್ಣ ಮತ್ತು ಸಂರಕ್ಷಕಗಳನ್ನು ಬಳಸಲಾಗುತ್ತದೆ ಎಂದು ಹೇಳುತ್ತಾ ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಅಪ್‌ಲೋಡ್ ಮಾಡಿದ್ದರು. ಈ ವಿಡಿಯೋಗಳು ಗ್ರಾಹಕರಲ್ಲಿ ಆತಂಕ ಮೂಡಿಸುವಂತಿವೆ ಎಂದು ಆರೋಪಿಸಿ ಕೆಎಂಎಫ್ ಉದ್ಯೋಗಿಯೊಬ್ಬರು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ವೈದ್ಯೆಯ ವಿರುದ್ಧ ಎಫ್‌ಐಆರ್

ದೂರಿನ ಆಧಾರದ ಮೇಲೆ ಮಲ್ಲೇಶ್ವರಂ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 353(1)(ಬಿ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಡಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಇದನ್ನು ರದ್ದುಪಡಿಸುವಂತೆ ಹಾಗೂ ತನಿಖೆಗೆ ತಡೆ ನೀಡುವಂತೆ ಕೋರಿ ಡಾ. ಶರಣ್ಯ ಪದ್ಮ ಹೈಕೋರ್ಟ್ ಮೆಟ್ಟಿಲೇರಿದ್ದರು.

ಹೈಕೋರ್ಟ್‌ನಿಂದ ಕಟುವಾದ ಪ್ರಶ್ನೆಗಳು

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ವೈದ್ಯೆಯ ಹೇಳಿಕೆಗಳ ಬಗ್ಗೆ ತೀವ್ರ ಪ್ರಶ್ನೆಗಳನ್ನು ಎತ್ತಿತು.ಹಾಲು ಒಳ್ಳೆಯದಿಲ್ಲ ಎಂದು ನೀವು ಭಾವಿಸಿದರೆ ಕುಡಿಯಬೇಡಿ. ಆದರೆ ಜನರಲ್ಲಿ ಭಯವನ್ನು ಹೇಗೆ ಉಂಟುಮಾಡಬಹುದು?” “ಹಾಲಿನಲ್ಲಿ ವಿಷಕಾರಿ ಅಂಶಗಳಿವೆ ಎಂದು ಹೇಳಲು ನಿಮ್ಮ ಬಳಿ ಯಾವುದೇ ವೈಜ್ಞಾನಿಕ ಪರೀಕ್ಷೆಯ ವರದಿ ಇದೆಯೇ? ಪ್ರಮಾಣೀಕರಣವಿದೆಯೇ? ಸರ್ಕಾರದ ಗಮನಕ್ಕೆ ತಂದಿದ್ದೀರಾ?” “ನಂದಿನಿ ಹಾಲು ಒಳ್ಳೆಯದಲ್ಲ ಎಂದು ನೀವು ಹೇಗೆ ತೀರ್ಮಾನಿಸುತ್ತೀರಿ?” ಎಂದು ನ್ಯಾಯಪೀಠ ಪ್ರಶ್ನಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಆಧಾರರಹಿತ ಹೇಳಿಕೆಗಳ ಮೂಲಕ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುವುದನ್ನು ಗಂಭೀರವಾಗಿ ಪರಿಗಣಿಸಿತು.