ಜನರಿಗೆ ಕೊಳಚೆ ನೀರು ಕುಡಿಸ್ತಿದೆ ಹೆಮ್ಮಾಡಿ ಗ್ರಾ.ಪಂ! ಗ್ರಾಮಸ್ಥರು ಕಣ್ಣೀರಿಟ್ಟರೂ ನೀರು ಕೊಡದ ಪಂಚಾಯತ್

ಶ್ರೀಕಾಂತ ಹೆಮ್ಮಾಡಿ, ಕುಂದಾಪುರ
ಕುಂದಾಪುರ: ಈ ಬಾರಿ ವಿಪರೀತ ಮಳೆ ಬಂದರೂ ಈ ಊರಿನ ಜನರು ಕುಡಿಯುವ ನೀರಿಗೆ ಬರೋಬ್ಬರಿ ೩೦೦ ರೂ. ಖರ್ಚು ಮಾಡಬೇಕು. ಕಳೆದ ಮೂರು ವಾರಗಳಿಂದ ಕುಡಿಯಲು ನೀರಿಲ್ಲದೆ ಹೈರಾಣಾಗಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಗಮನಕ್ಕೂ ತಂದಿದ್ದಾರೆ. ಆದರೆ ಇಂತಹ ಗಂಭೀರ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಬೇಕಿದ್ದ ಆಡಳಿತ ಇಲ್ಲಿಯ ತನಕವೂ ನೀರು ಪೂರೈಸುವ ಗೋಜಿಗೆ ಹೋಗದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಜನರ ಕಷ್ಟಕ್ಕೆ ಸ್ಪಂದಿಸದ ಪಂಚಾಯತ್:

ಇದು ಕುಂದಾಫುರ ತಾಲೂಕಿನ ಹೆಮ್ಮಾಡಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಜನರ ಗೋಳು. ಸರ್ಕಾರ ತುರ್ತು ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಯಾವುದೇ ಮೂಲದ ಅನುದಾನವನ್ನೂ ಬಳಸಿಕೊಂಡು ನೀರು ಒದಗಿಸಬೇಕು ಎನ್ನುತ್ತದೆ. ನೀರಿನ ಸಮಸ್ಯೆ ಗೊತ್ತಿದ್ದು ಹೆಮ್ಮಾಡಿ ಗ್ರಾಮ ಪಂಚಾಯಿತಿ ಜನರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ಕುಡಿಯಲು, ಸಾಕು ಪ್ರಾಣಿಗಳಿಗೆ, ನಿತ್ಯಬಳಕೆಗೆ ಹಣ ಕೊಟ್ಟು ಟ್ಯಾಂಕರ್ ಮೂಲಕ ನೀರು ಪಡೆಯುವ ಸಂದಿಗ್ದತೆಗೆ ಪರಿಸರ ವಾಸಿಗಳು ಒಳಗಾಗಿರುವುದು ಖೇದಕರ.

ಜನರ ಕಣ್ಣೀರಿಟ್ಟರೂ ನೀರು ಬಂದಿಲ್ಲ:
ಹೆಮ್ಮಾಡಿ ಗ್ರಾಮ ಪಂಚಾಯಿತಿ ಕಟ್ಟು, ಮೂವತ್ತುಮುಡಿ, ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಪರಿಸರ, ಕನ್ನಡಕುದ್ರು ವಾಸಿಗಳು ನೀರಿಗಾಗಿ ಹಾತೊರೆಯುತ್ತಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ರಾಘವೇಂದ್ರ ಪೂಜಾರಿ ನೀರಿನ ಸಮಸ್ಯೆ ಕುರಿತು ಗ್ರಾಪಂ ಗಮನ ಸೆಳೆದಿದ್ದಾರೆ. ಪರಿಸರದ ನಾಗರಿಕರು ಕುಡಿಯುವ ನೀರಿಗಾಗಿ ಗೋಗರೆದು ಕಣ್ಣೀರಿಟ್ಟಿದ್ದಾರೆ.

ಆದರೆ ನೀರು ಮಾತ್ರ ಇನ್ನೂ ಸಿಕ್ಕಿಲ್ಲ. ಶ್ರೀ ಲಕ್ಷ್ಮೀನಾರಾಯಣ ಪರಿಸರ ಹೊರತುಪಡಿಸಿ ಕಟ್ಟು, ಮೂವತ್ತುಮುಡಿ, ಕನ್ನಡಕುದ್ರು ಚಕ್ರಾನದಿ ಸಮೀಪವಿದೆ. ನದಿ ನೀರು ಉಪ್ಪಾಗಿರುವುದರಿಂದ ಇಲ್ಲಿನ ಬಾವಿಗಳ ನೀರು ಜಾನುವಾರು ಕೂಡಾ ಕುಡಿಯುವುದಕ್ಕೂ ಆಗದಷ್ಟು ಕೆಟ್ಟದಾಗಿದೆ. ನಳ್ಳಿ ನೀರನ್ನೇ ನೆಚ್ಚಿಕೊಂಡಿದ್ದ ಇಲ್ಲಿನ ನಿವಾಸಿಗಳು ಇದೀಗ ನಳ್ಳಿಯ ಟ್ಯಾಪ್ ತಿರುವಿದರೆ ಗಾಳಿ ಮಾತ್ರ ಬರುತ್ತಿದೆ.

ಯಾರು ಏನಂತಾರೆ?

ಹೆಮ್ಮಾಡಿ ಗ್ರಾಮ ಪಂಚಾಯಿತಿಗೆ ನೀರು ಪೂರೈಕೆ ಮಾಡುವ ಎರಡು ಕೊಳವೆ ಬಾವಿ ಕೆಟ್ಟು ಹೋಗಿರುವುದು ನೀರು ಪೂರೈಕೆ ನಿಲುಗಡೆಗೆ ಕಾರಣ. ಕೊಳವೆ ಬಾವಿ ತೆಗೆಯಲು ಪಾಯಿಂಟ್ ಗುರುತಿಸಿಲು ಸಿಇಒಗೆ ಪತ್ರ ಬರೆಯಲಾಗಿದೆ. ಇಒ ಅನುಮತಿ ಪಡೆದು ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲು ಪ್ರಯತ್ನಿಸುತ್ತೇವೆ

-ಮಂಜು ಬಿಲ್ಲವ, ಪಿಡಿಒ, ಹೆಮ್ಮಾಡಿ ಗ್ರಾಮ ಪಂಚಾಯಿತಿ.

———————————————————————

  • ನೀರ ಮೂಲಗಳಿಲ್ಲ ಅಂತಾರೆ
    ಕಳೆದ ಮೂರು ವಾರಗಳಿಂದ ಕುಡಿಯುವ ನೀರಿಲ್ಲದೆ ಪರಿಸರ ನಿವಾಸಿಗಳು ೩೦೦ ರೂ.ಕೊಟ್ಟ ನೀರು ಪಡೆಯುತ್ತಿದ್ದಾರೆ. ಇರುವ ಎರಡು ಕೊಳವೆ ಬಾವಿ ಕೆಟ್ಟು ಹೋಗಿದ್ದರಿಂದ ಪರಿಸ್ಥಿತಿ ತಲೆದೋರಿದೆ. ಕಟ್ಟು, ಕೆಳಮನೆ ಪರಿಸರದಲ್ಲಿ ಬಾವಿಗಳಿಲ್ಲದೆ ಜನರು ನಳ್ಳಿಯ ನೀರನ್ನೆ ಅವಲಂಭಿಸಿದ್ದಾರೆ. ಈ ಭಾಗಗಳಲ್ಲಿ ಬಾವಿ ತೆಗೆದರೂ ನೀರು ಉಪ್ಪಾಗಿರುತ್ತದೆ. ಪಿಡಿಓ ಗಮನಕ್ಕೆ ತಂದರೂ ನೀರು ಪೂರೈಕೆ ಮಾಡಲು ಯಾವುದೇ ಮೂಲಗಳಿಲ್ಲ ಎನ್ನುತ್ತಾರೆ. 

— ರಾಘವೇಂದ್ರ ಪೂಜಾರಿ, ವಾರ್ಡ್ ಸದಸ್ಯ.

———————————————————————–

 

  • ಹಣ ನೀಡಿ ನೀರು ಪಡೆಯುವ ಸ್ಥಿತಿ

ಕಳೆದ ಮೂರು ವಾರಗಳಿಂದ ನೀರಿಗಾಗಿ ಕಣ್ಣೀರಿಡುವ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಸಮಸ್ಯೆಯನ್ನು ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ಸ್ಪಂದಿಸದಿರುವುದು ಅತ್ಯಂತ ಬೇಸರದ ಸಂಗತಿ. ಬೇಸಿಗೆಯಲ್ಲಿ ಹಣ ಕೊಟ್ಟು ನೀರು ಪಡೆಯುವುದು ಅನಿವಾರ್ಯವಾದರೂ ಮಳೆಗಾದಲ್ಲೂ ಹಣ ನೀಡಿ ನೀರು ಪಡೆಯುವ ಸ್ಥಿತಿ ಇದೆ.

ಕಟ್ಟು, ಮುವತ್ತುಮುಡಿ ದೇವಸ್ಥಾನ ಪರಿಸರದಲ್ಲಿ ನೂರಾರು ಮನೆಗಳಿದ್ದು, ನವರಾತ್ರಿ ಹಬ್ಬದ ಖುಷಿಗೆ ಕುಡಿಯುವ ನೀರು ತಣ್ಣೀರೆರಚಿದೆ. ಆದಷ್ಟು ಬೇಗ ಪಂಚಾಯಿತಿ ನಮ್ಮ ಸಮಸ್ಯೆಯನ್ನು ಬಗೆಹರಿಸಲಿ.

–ನವೀನ್ ಭಂಡಾರಿ, ಸ್ಥಳೀಯ ನಿವಾಸಿ