ಕುಂದಾಪುರ: ಇಲ್ಲಿನ ಫಿಶ್ ಸ್ಟೋರೇಜ್ ಅಮೋನಿಯಾ ಸೋಮವಾರ ಲಿಕ್ವಿಡ್ ಸ್ಪೋಟವಾಗಿ ಕಾರ್ಮಿಕರು ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಘಟನೆಗೆ ಕಾರಣವಾದ ಫಿಶ್ ಸ್ಟೋರೇಜ್ ಕಂಪೆನಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ ಸಂಸ್ಕರಣ ಘಟಕ ನಡೆಸುತ್ತಿರುವ ಕಂಪೆನಿಯ ವಿರುದ್ದ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಡಿಸಿ, ಎಸ್ಪಿ ಭೇಟಿ ವೇಳೆ ಜಮಾಯಿಸಿ ಮೀನು ಸಂಸ್ಕರಣ ಘಟಕದ ವಿರುದ್ದ ಆಕ್ರೋಶ ಹೊರಹಾಕಿದರು.
ಅಮೋನಿಯಾ ವಾಸನೆಯಿಂದಾಗಿ ನಾವೆಲ್ಲರೂ ಬೆಳಿಗ್ಗೆ ಮನೆಯಿಂದ ಹೊರನಡೆದಿದ್ದೇವೆ. ಮಕ್ಕಳನ್ನೆಲ್ಲಾ ಎತ್ತಿಕೊಂಡು ಬಹುದೂರ ಓಡಿದ್ದೇವೆ. ಅಮೋನಿಯಾ ಸೋರಿಕೆಯಾದ ಬಗ್ಗೆ ಯಾವುದೇ ಮನ್ಸೂಚನೆಯನ್ನೂ ಕಂಪೆನಿ ಕೊಟ್ಟಿಲ್ಲ. ಒಂದು ವೇಳೆ ಅಮೋನಿಯಾ ಹತೋಟಿಗೆ ಬಾರದೆ ನಾವೆಲ್ಲರೂ ಅಸ್ವಸ್ಥಗೊಂಡಿದ್ದರೆ ಯಾರು ಹೊಣೆ. ಕೂಡಲೇ ಕಂಪೆನಿಯ ವಿರುದ್ದ ಕಾನೂನುಕ್ರಮ ಜರುಗಿಸಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಈ ವೇಳೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾ ಅಗ್ನಿಶಾಮಕ ದಳದ ವಸಂತ್ ಕುಮಾರ್ ನೇತೃತ್ವದ ತಂಡ ಹೆಚ್ಚಿನ ಅನಾಹುತಗಳು ಸಂಭವಿಸದಂತೆ ಅಮೋನಿಯಾ ಹತೋಟಿಗೆ ತಂದಿದ್ದಾರೆ. ಲೀಕೇಜ್ ಆಗಿರುವ ಪೈಪ್ ಅನ್ನು ಮುಚ್ಚಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗದೆ ಎಲ್ಲರನ್ನೂ ಅಪಾಯದಿಂದ ಪಾರು ಮಾಡಿದ ಅಗ್ನಿಶಾಮಕ ದಳದ ಸಿಬ್ಬಂದಿಗಳ ಕಾರ್ಯವನ್ನು ಮೆಚ್ಚಲೇಬೇಕು.
ಮೀನು ಸಂಸ್ಕರಣ ಘಟಕದ ಬಗ್ಗೆ ಕುಂದಾಪುರ ಸಹಾಯಕ ಆಯುಕ್ತ ಡಾ. ಮಧುಕೇಶ್ವರ್ ಅವರಲ್ಲಿ ವರದಿಯನ್ನು ತರಿಸಿಕೊಳ್ಳುತ್ತೇನೆ. ಯಾವೆಲ್ಲಾ ನಿಯಮಗಳ ಪ್ರಕಾರ ಘಟಕವನ್ನು ನಡೆಸಲು ಅನುಮತಿ ಕೊಟ್ಟಿದ್ದಾರೆ. ಕೊಟ್ಟಿರುವ ನಿಯಮಗಳನ್ನೆಲ್ಲಾ ಪಾಲಿಸುತ್ತಿದ್ದಾರಾ, ಕಾರ್ಮಿಕರ ಕುರಿತಾಗಿ ಏನೆಲ್ಲಾ ಜಾಗೃತೆ ವಹಿಸುತ್ತಿದ್ದಾರೆ ಎಂಬಿತ್ಯಾದಿ ವಿಚಾರಗಳ ಕುರಿತು ಸಮಗ್ರ ವರದಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದರು.
ಈ ವೇಳೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಸಹಾಯಕ ಆಯುಕ್ತ ಡಾ. ಮಧುಕೇಶ್ವರ್, ಡಿವೈಎಸ್ಪಿ ಬಿ.ಪಿ ದಿನೇಶ್ ಕುಮಾರ್, ತಹಸೀಲ್ದಾರ್ ತಿಪ್ಪೇಸ್ವಾಮಿ, ತಾಲೂಕು ವೈದ್ಯಾಧಿಕಾರಿ ಡಾ. ನಾಗಭೂಷಣ್ ಉಡುಪ, ಬೈಂದೂರು ಆರೋಗ್ಯ ಕೇದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಪ್ರೇಮಾನಂದ, ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಲಕ್ಷ್ಮೀಕಾಂತ್, ಕಂಡ್ಲೂರು ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀಧರ್ ನಾಯ್ಕ್, ಜಿ.ಪಂ ಸದಸ್ಯೆ ಶೋಭಾ ಪುತ್ರನ್, ಪಂಚಾಯತ್ ಸದಸ್ಯರಾದ ಶೇಖರ್ ಬಳೇಗಾರ್, ರಾಮ ಶೆಟ್ಟಿ ಮೊದಲಾದವರು ಇದ್ದರು.