ಮಹಿಳೆ ಅನುಮಾನಾಸ್ಪದ ಸಾವು: ತೀವ್ರಗೊಂಡ ಪೊಲೀಸ್ ತನಿಖೆ ಘಟನಾ, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಭೇಟಿ, ಪರಿಶೀಲನೆ

ಕುಂದಾಪುರ: ಇಲ್ಲಿನ ಹೆಮ್ಮಾಡಿಯ ಹರೆಗೋಡು ಸಮೀಪದ ವಿಜಯ ಗೇರುಬೀಜ ಕಾರ್ಖಾನೆ ಸಮೀಪದ ಮನೆಯಲ್ಲಿ ವಾಸವಿದ್ದ ಮೀನು ಮಾರಾಟದ ಮಹಿಳೆ ಗುಲಾಬಿ(55) ಎಂಬವರ ಅನುಮಾನಾಸ್ಪದ ಸಾವಿನ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಘಟನಾ ಸ್ಥಳಕ್ಕೆ ಭಾನುವಾರ ಸಂಜೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃತ ಮಹಿಳೆ ಮನೆಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಪರಿಶೀಲನೆ ನಡೆಸಿ, ಅಧಿಕಾರಿಗಳ ಜೊತೆ ಮಾಹಿತಿ ಪಡೆದಿದ್ದು, ಮುಂದಿನ ತನಿಖೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಮಹಿಳೆ ಅಸಹಜ ಸಾವಿನ ಹಿನ್ನೆಲೆ ಎಲ್ಲಾ ಸಾಧ್ಯತೆಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದರು.

ಕುಂದಾಪುರ ಡಿವೈಎಸ್ಪಿ ಬಿ.ಪಿ ದಿನೇಶ್ ಕುಮಾರ್, ವೃತ್ತ ನಿರೀಕ್ಷಕ ಮಂಜಪ್ಪ, ಬೈಂದೂರು ವೃತ್ತ ನಿರೀಕ್ಷಕ ಪರಮೇಶ್ವರ ಗುನಗ ಇದ್ದರು.

ವಿವಿಧ ಠಾಣೆಗಳಿಗೆ ಭೇಟಿ:
ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ನಿಶಾ ಜೇಮ್ಸ್ ವಿವಿಧ ಠಾಣೆಗೆ ಭೇಟಿ ನೀಡಿ, ಮಾಹಿತಿ ಪಡೆದರು. ಕೊಲ್ಲೂರು, ಬೈಂದೂರು, ಗಂಗೊಳ್ಳಿ, ಕುಂದಾಪುರ ಠಾಣೆಗೆ ಭೇಟಿ ನೀಡಿ ಚರ್ಚೆ ನಡೆಸಿದರು.

ಹೆಮ್ಮಾಡಿಯಲ್ಲಿ ಮೀನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಗುಲಾಬಿ ಗುರುವಾರ ತಡರಾತ್ರಿ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಶುಕ್ರವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿತ್ತು. ಗುಲಾಬಿ ಕುತ್ತಿಗೆಯಲ್ಲಿ ಸರ ಹಾಗೂ ಬೆಂಡೋಲೆ ಇಲ್ಲದೇ ಇರುವುದು ಸಾವಿನ ಬಗ್ಗೆ ಅನುಮಾನ ಮೂಡಲು ಕಾರಣವಾಗಿತ್ತು. ಗುಲಾಬಿ ಸಾವಿನ ಕುರಿತು ಸ್ಥಳೀಯರು ಕೊಲೆ ಶಂಕೆ ವ್ಯಕ್ತಪಡಿಸಿದ್ದು, ಪೊಲೀಸರು ಹೆಚ್ಚಿನ ತನಿಖೆಗೆ ಮೃತದೇಹವನ್ನು ಮಣಿಪಾಲ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳಹಿಸಿದ್ದರು. ಇದೀಗ ಮರಣೋತ್ತರ ಪರೀಕ್ಷಾ ವರದಿ ಮಂಗಳವಾರ ಪೊಲೀಸರ ಕೈ ಸೇರಲಿದ್ದು, ಮಹಿಳೆ ಸಾವು ಅಸಹಜವೋ ಅಥವಾ ಕೊಲೆಯೋ ಎನ್ನುವ ಬಗ್ಗೆ ನಿಖರವಾಗಿ ತಿಳಿದುಬರಲಿದೆ.

ನಾಲ್ಕು ತಂಡ ರಚನೆ:
ಗುಲಾಬಿ ಅನುಮಾನಾಸ್ಪದ ಸಾವು ಇದೀಗ ಕೊಲೆ ಎಂಬುವುದು ದಟ್ಟವಾಗಿದೆ. ಮೇಲ್ನೋಟಕ್ಕೆ ಗಮನಿಸಿದಾಗ ಮೃತದೇಹದ ಕುತ್ತಿಗೆ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿರುವುದರಿಂದ ಇದೊಂದು ಕೊಲೆ ಎಂಬ ಸಂಶಯ ದಟ್ಟವಾಗಿದೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಲಾಗಿತ್ತು. ಡಿವೈಎಸ್ಪಿ ಬಿ.ಪಿ ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ಕುಂದಾಪುರ ಸರ್ಕಲ್ ಇನ್ಸ್‍ಪೆಕ್ಟರ್ ಡಿಆರ್ ಮಂಜಪ್ಪ ನೇತೃತ್ವದಲ್ಲಿ ನಾಲ್ಕು ತಂಡ ರಚಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಶಂಕಿತ ವ್ಯಕ್ತಿಗಳ ವಿಚಾರಣೆ:
ಚಿನ್ನಾಭರಣಕ್ಕಾಗಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಗುಲಾಬಿಯನ್ನು ಕೊಲೆ ಮಾಡಲಾಗಿದೆ ಎಂಬ ಮಾತುಗಳು ಸ್ಥಳೀಯರ ಬಾಯಿಯಲ್ಲಿ ಹರಿದಾಡತೊಡಗಿದೆ. ಈ ಬಗ್ಗೆ ಶಂಕಿತ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.

ಸ್ಥಳೀಯರೊಂದಿಗೆ ಉತ್ತಮ ಬಾಂಧವ್ಯ:
ಗುಲಾಬಿ ಪತಿ ನಾಗೇಶ್ ಈ ಹಿಂದೆ ಹೋಟೆಲ್‍ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕಳೆದ ಎರಡು ವರ್ಷಗಳ ಹಿಂದೆ ಅವರು ಸಾವನ್ನಪ್ಪಿದ್ದರು. ಸ್ವಾವಲಂಬಿಯಾಗಿರುವ ಗುಲಾಬಿ ಹೆಮ್ಮಾಡಿ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಗುಲಾಬಿಗೆ ಇಬ್ಬರು ಗಂಡು ಮಕ್ಕಳಿದ್ದು ಹಿರಿಯವನಾದ ನಾಗರಾಜ ಮದುವೆಯಾಗಿ ಮುಂಬೈಯಲ್ಲಿ ನೆಲೆಸಿದ್ದರೆ, ಎರಡನೇಯ ಮಗ ನಟರಾಜ್ ಬೆಂಗಳೂರಿನಲಿದ್ದು, ಗುಲಾಬಿ ತಮ್ಮ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದರು. ಸ್ಥಳೀಯವಾಗಿ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದ ಗುಲಾಬಿ ಅಕ್ಕಪಕ್ಕದ ಮನೆಯ ಮಕ್ಕಳಿಗೆ ಅತೀವ ಕಾಳಜಿ, ಪ್ರೀತಿ ತೋರುತ್ತಿದ್ದರು ಎನ್ನಲಾಗಿದೆ.