ಕುಂದಾಪುರ: ಹೆಮ್ಮಾಡಿ ಗುಲಾಬಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತ ಆರೋಪಿಯನ್ನು ಪೊಲೀಸರು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ವಿಶ್ವಾಸಾರ್ಹ ಮೂಲಗಳಿಂದ ತಿಳಿದು ಬಂದಿದೆಯಾದರೂ ಆರೋಪಿಯನ್ನು ವಶಪಡಿಸಿಕೊಂಡ ಬಗ್ಗೆ ಪೊಲೀಸರು ಇನ್ನೂ ದೃಢಪಡಿಸಿಲ್ಲ.
ಗುಲಾಬಿ ಕೊಲೆ ಪ್ರಕರಣದ ಶಂಕಿತ ಆರೋಪಿ ಕೊಲ್ಲೂರು ಸಮೀಪದ ಮುದೂರ ವ್ಯಕ್ತಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದು ಕುಂದಾಪುರಕ್ಕೆ ಕರೆತಂದಿದ್ದಾರೆ ಎಂದು ತಿಳಿದುಬಂದಿದೆ.
ಹೆಮ್ಮಾಡಿ ಹರೆಗೋಡು ವಿಜಯ ಗೇರುಬೀಜ ಸಮೀಪದ ನಿವಾಸಿ ಗುಲಾಬಿ (55) ಫೆಬ್ರವರಿ 28ರ ತಡರಾತ್ರಿ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಗುಲಾಬಿ ಧರಿಸಿದ್ದ ಚಿನ್ನಾಭರಣಗಳು ಇಲ್ಲದ ಹಿನ್ನೆಲೆಯಲ್ಲಿ ಸ್ಥಳೀಯರು ಕೊಲೆ ಶಂಕೆ ವ್ಯಕ್ತಪಡಿಸಿದ್ದರು. ಕತ್ತು ಹಿಸುಕಿ ಉಸಿರುಗಟ್ಟಿ ಕೊಲೆ ಮಾಡಲಾಗಿದೆ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಹಿರಂಗಗೊಂಡಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದರು. ಅಲ್ಲದೇ ಶಂಕಿತ ವ್ಯಕ್ತಿಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದರು. ಇದೀಗ ಕೊಲೆ ನಡೆದು ಎಂಟು ದಿನಗಳ ಬಳಿಕ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕಾಗಿ ಗುಲಾಬಿಯನ್ನು ಕೊಲೆ ಮಾಡಲಾಗಿದೆ ಎಂಬುವುದು ಪೊಲೀಸ್ ತನಿಖೆಯಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ.