ಹೆಮ್ಮಾಡಿ ಗ್ರಾಮ ಪಂಚಾಯಿತಿ ಕಚೇರಿ ನೂತನ ಕಟ್ಟಡ ಉದ್ಘಾಟನೆ

ಕುಂದಾಪುರ: ಗ್ರಾಮ ಪಂಚಾಯಿತಿ ಸುಂದರ ಕಟ್ಟಡ ಜನರ ಸೌಲಭ್ಯಕ್ಕೆ ಲಭ್ಯವಾಗುತ್ತಿದ್ದು, ಸರ್ಕಾರ ಜನರಿಗಾಗಿ ರೂಪಿಸಿದ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಮೂಲಕ ಸಾರ್ಥಕತೆ ಪಡೆಯಬೇಕು. ಕಟ್ಟಡ ನೋಡಲು ಸೊಗಸಾಗಿದ್ದರಷ್ಟೆ ಸಾಲದು. ಜನಪರ ಕಾಳಜಿಯಿದ್ದರೆ ಮಾತ್ರ ಕಟ್ಟಡದ ಜೊತೆ ಜನರ ಬದುಕು ಸಂದರವಾಗುತ್ತದೆ ಎಂದು ಕುಂದಾಪುರ ತಾ.ಪಂ ಅಧ್ಯಕ್ಷೆ ಶ್ಯಾಮಲಾ ಕುಂದರ್ ಅಭಿಪ್ರಾಯಪಟ್ಟರು.

ಹೆಮ್ಮಾಡಿ ಗ್ರಾಮ ಪಂಚಾಯಿತಿ ಕಚೇರಿ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ನಾಗರಿಕರು ಕೂಡಾ ಉತ್ತಮ ಸೇವೆಯನ್ನು ಸ್ಥಳೀಯಾಡಳಿತದಿಂದ ಪಡೆಯಬೇಕು. ಉತ್ತಮ ಅಭಿವೃದ್ಧಿ ಹಾಗೂ ಜನಪರ ಕಾಳಜಿ ಮೂಲಕ ಗ್ರಾ.ಪಂ ಸಾಗಬೇಕು ಎಂದರು.

ಉಡುಪಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶೋಭಾ ಜಿ.ಪುತ್ರನ್ ಬಾಪೂಜಿ ಸೇವಾಕೇಂದ್ರ ಉದ್ಘಾಟಿಸಿ, ಗ್ರಾಮ ಪಂಚಾಯಿತಿ ಸ್ಥಳೀಯ ಮಟ್ಟದಲ್ಲಿ ಸರಿಯಾಗಿದ್ದರೆ, ಎಲ್ಲಾ ಕಚೇರಿಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯ. ಸರ್ಕಾರಿ ಕಚೇರಿ, ಕಟ್ಟಡಗಳು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಆರೋಗ್ಯಪೂರ್ಣ ವಾತಾವರಣ ನಿರ್ಮಾಣ ಮಾಡಬೇಕಿದೆ. ಸ್ಥಳೀಯ ಆಡಳಿತ ಸರಿಯಾಗಿದ್ದು, ಎಲ್ಲಾ ವ್ಯವಸ್ಥೆ ಹಾಗೂ ಸೌಲಭ್ಯಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕು ಎಂದರು.

ಕುಂದಾಪುರ ತಾಪಂ ಸದಸ್ಯ ರಾಜು ದೇವಾಡಿಗ ನಾಮಫಲಕ ಅನಾವರಣಗೊಳಿಸಿದರು. ಹೆಮ್ಮಾಡಿ ಗ್ರಾಪಂ ಅಧ್ಯಕ್ಷೆ ಜ್ಯೋತಿ ಹರೀಶ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹೆಮ್ಮಾಡಿ ಗ್ರಾಪಂ ಉಪಾಧ್ಯಕ್ಷ ಅಂತೋನಿ ಲೂವಿಸ್, ಕುಂದಾಪುರ ತಾಪಂ ಇಒ ಕಿರಣ್ ಫೆಡ್ನೇಕರ್ ಉಪಸ್ಥಿತರಿದ್ದರು.

ಹೆಮ್ಮಾಡಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ನಾಡ ಗೀತೆ ಹಾಡಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜಯ್ಯ ಬಿಲ್ಲವ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಸಂತ್ ಹೆಮ್ಮಾಡಿ ನಿರೂಪಿಸಿದರು. ಕಾರ್ಯದರ್ಶಿ ಜಯಮ್ಮ ವಂದಿಸಿದರು.