ಕುಂದಾಪುರ: ಅಮೋನಿಯಾ ರಾಸಾಯನಿಕ ಸೋರಿಕೆಯಾಗಿ ತೀವ್ರ ಅಸ್ವಸ್ಥಗೊಂಡು ಸೋಮವಾರ ಮುಂಜಾನೆ ಆಸ್ಪತ್ರೆಗೆ ದಾಖಲಾದ ಕಾರ್ಮಿಕರು ಚೇತರಿಸಿಕೊಂಡಿದ್ದು, ಮಂಗಳವಾರ ಮಧ್ಯಾಹ್ನ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಇಲ್ಲಿನ ಕಟ್‌ಬೇಲ್ತೂರು ಗ್ರಾಮಪಂಚಾಯತ್ ವ್ಯಾಪ್ತಿಯ ದೇವಲ್ಕುಂದದ ಮಲ್ಪೆ ಫ್ರೆಶ್ ಮರೈನ್ ಮೀನು ಶಿಥಲೀಕರಣ ಘಟಕದಲ್ಲಿ ಸೋಮವಾರ ನಸುಕಿನ ಜಾವದಲ್ಲಿ ಐಸ್ ಫ್ರೀಝ್ ಮಾಡಲು ಕಾರ್ಯಾಚರಿಸುತ್ತಿರುವ ಯಂತ್ರದ ಪೈಪ್‌ನಲ್ಲಿ ಅಮೋನಿಯಾ ರಾಸಾಯನಿಕ ಸೋರಿಕೆಯಾದ ಪರಿಣಾಮ ಮಹಿಳೆಯರ ಹಾಸ್ಟೇಲ್‌ನಲ್ಲಿ ಮಲಗಿದ್ದ ೭೦ಕ್ಕೂ ಅಧಿಕ ಮಂದಿ ಮಹಿಳಾ ಕಾರ್ಮಿಕರು ಅಸ್ವಸ್ಥರಾಗಿದ್ದರು. ಅಸ್ವಸ್ಥಗೊಂಡ ಎಲ್ಲಾ ಕಾರ್ಮಿಕರನ್ನು ಕುಂದಾಪುರದ ಆದರ್ಶ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ದಾಖಲಾದ ೭೯ ಮಹಿಳಾ ಹಾಗೂ ಪುರುಷ ಕಾರ್ಮಿಕರ ಪೈಕಿ ೭೭ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಉಳಿದಿಬ್ಬರು ಮಹಿಳಾ ಕಾರ್ಮಿಕರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿರುವ ಕಾರ್ಮಿಕರಿಗೆ ಡಾ.ಆದರ್ಶ ಹೆಬ್ಬಾರ್ ಒಂದು ವಾರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವಾಂತಿ, ಉಸಿರಾಟದ ತೊಂದರೆ, ಕೆಮ್ಮು, ಜ್ವರ ಕಾಣಿಸಿಕೊಂಡರೆ ಕೂಡಲೇ ವೈದ್ಯಕೀಯ ಪರೀಕ್ಷೆಗೊಳಗಾಗಬೇಕು ಎನ್ನುವ ಮುನ್ನೆಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ. ಮಂಗಳವಾರವೂ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಆಸ್ಪತ್ರೆಗೆ ಭೇಟಿ ನೀಟಿ ಕಾರ್ಮಿಕರ ಯೋಗಕ್ಷೇಮ ವಿಚಾರಿಸಿದರು.
ಆಸ್ಪತ್ರೆಯಲ್ಲೇ ಬೀಡುಬಿಟ್ಟಿದ್ದ ಕಂಪೆನಿ ಅಧಿಕಾರಿಗಳು:
ಅಮೋನಿಯಾ ಸೋರಿಕೆಯಿಂದ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಎಲ್ಲಾ ಕಾರ್ಮಿಕರ ಆಸ್ಪತ್ರೆ ವೆಚ್ಚವನ್ನು ಕಂಪೆನಿ ಭರಿಸಿದ್ದು, ಸೋಮವಾರ ಬೆಳಗ್ಗಿನಿಂದ ಮಂಗಳವಾರ ಮಧ್ಯಾಹ್ನದ ತನಕವೂ ಆಸ್ಪತ್ರೆಯಲ್ಲಿ ಕಂಪೆನಿಯ ಅಧಿಕಾರಿಗಳು ಬೀಡುಬಿಟ್ಟಿದ್ದು, ಕಾರ್ಮಿಕರ ಬಗ್ಗೆ ಕಾಳಜಿ ವಹಿಸಿದ್ದಾರೆ.
ತನಿಖೆ ಆರಂಭ:
ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೋಮವಾರ ಘಟನಾ ಸ್ಥಳಕ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಮೋನಿಯ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖಾ ವರದಿ ನೀಡಲು ಸಹಾಯಕ ಆಯುಕ್ತ ಡಾ. ಮಧುಕೇಶ್ವರ್ ಅವರಿಗೆ ಆಗ್ರಹಿಸಿದ್ದರು. ಅದರಂತೆಯೇ ತನಿಖೆ ಮುಂದುವರಿಸಿರುವ ಸಹಾಯಕ ಆಯುಕ್ತ ಡಾ. ಮಧುಕೇಶ್ವರ್ ಅವರು, ಎಲ್ಲಾ ಆಯಾಮಗಳಲ್ಲೂ ತನಿಖೆ ಆರಂಭಿಸಿದ್ದಾರೆ. ಅಮೋನಿಯಾ ಸೋರಿಕೆಯ ಹಿಂದೆ ಕಂಪೆನಿಯ ಬೇಜವಾಬ್ದಾರಿ ಇದೆಯೇ ಅಥವಾ ಇನ್ಯಾವ ಕಾರಣಗಳಿಗಾಗಿ ಅಮೋನಿಯಾ ಸೋರಿಕೆಯಾಗಿದೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ತನಿಖೆ ನಡೆಸಿ ಆಗಸ್ಟ್ ೧೬ರಂದು ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಲಿದ್ದಾರೆ.
ಕಂಪೆನಿ ತಾತ್ಕಾಲಿಕ ಬಂದ್:
ತೀವ್ರ ಪ್ರಮಾಣದಲ್ಲಿ ಅಮೋನಿಯಾ ರಾಸಾಯನಿಕ ಸೋರಿಕೆಯಾಗಿರುವ ಪರಿಣಾಮ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರೆಲ್ಲರಿಗೂ ಬೇರೆಡೆಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಹರೆಗೋಡು ನಾವಡರ ಅಂಗಡಿ ಸಮೀಪವಿರುವ ಆರ್.ಆರ್ ಶೆಟ್ಟಿ ಮಿನಿ ಹಾಲ್‌ನಲ್ಲಿ ಕೆಲ ಕಾರ್ಮಿಕರಿಗೆ ರಾತ್ರಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಟ್ಟರೆ ಇನ್ನೂ ಕೆಲವರಿಗೆ ಬೇರೆಡೆ ವಸತಿ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಸದ್ಯ ಮೀನು ಸಂಸ್ಕರಣಾ ಘಟಕದಲ್ಲಿ ನಡೆಯುತ್ತಿದ್ದ ಎಲ್ಲಾ ರೀತಿಯ ಕಾರ್ಯಚಟುವಟಿಕೆಗಳು ಸ್ಥಬ್ದಗೊಂಡಿದ್ದು, ಎಸಿ ಜಿಲ್ಲಾಧಿಕಾರಿಯವರಿಗೆ ವರದಿ ನೀಡುವವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚನೆ ನೀಡಲಾಗಿದೆ.