ಸಾಗುವ ದಾರಿಯಲ್ಲಿ ಎಲ್ಲರೂ ನಮ್ಮವರೇ ಎನ್ನುವ “ಹೀಗೊಂದು ಕತೆ”

“ಪಾಂಚಜನ್ಯ “ಕ್ರಿಯೇಶನ್ಸ್ ನ ಚಂದದ ಪ್ರಸ್ತುತಿ “ಹೀಗೊಂದು ಕತೆ”. ಒಂದು ಯುವ ತಂಡ ಸೇರಿಕೊಂಡು ನಿರ್ಮಿಸಿದ ಈ ಕಿರು ಚಿತ್ರದ ಕುರಿತು ಉಡುಪಿXPRESS ನ ಒಂದು ಒಳನೋಟ

ಸಾಗುವ ದಾರಿಯಲ್ಲಿ ಎಲ್ಲರೂ ನಮ್ಮವರೇ.ಆದರೆ ನೋಡುವ ಕಣ್ಣು ಬೇಕು, ಕಂಡುಕೊಳ್ಳುವ ಹೃದಯ ಬೇಕು ಎನ್ನುವ ಅಮೂಲ್ಯ ಸಂದೇಶ ನೀಡುತ್ತ ಮೈಮನಸ್ಸಲ್ಲಿ ಒಂದೈದು ನಿಮಿಷ ಆವರಿಸಿಕೊಂಡುಬಿಡುತ್ತದೆ “ಹೀಗೊಂದು ಕತೆ” ಬದುಕಲ್ಲಿ ಹೀಗೆ ಹೋಗಿ ಹಾಗೆ ಬರುವ ಕತೆಗಳು ನೂರಾರು, ನನಗೆ ಹೀಗೊಂದು ಅನುಭವ ಆಗಿದೆ, ಹೀಗೊಂದು ಕನಸು ಬಿದ್ದಿದೆ ಎನ್ನುತ್ತ ನಮ್ಮ ಸ್ನೇಹಿತರಾಡುವ “ಹೀಗೊಂದು” ಎನ್ನುವ ಪದವನ್ನು ಮತ್ತೆ ಮತ್ತೆ ಕೇಳುತ್ತಲೇ ಇರುತ್ತೇವೆ.

“ಹೀಗೊಂದು ಕತೆ” ಅನ್ನೋ ಕಿರುಚಿತ್ರ ಕೂಡ ಹೀಗೇ ಬದುಕಲ್ಲಿ ಆಕಸ್ಮಿಕವಾಗಿ ಜರಗುವ ಕತೆಯೊಂದನ್ನು ಇಟ್ಟುಕೊಂಡು ಆ ಕತೆಯ ಮೂಲಕ ಮನುಷ್ಯ ಸಂಬಂಧವೊಂದನ್ನು, ಬದುಕಿನ ಹಾದಿಯಲ್ಲಿ ನಮಗೆ ಎದುರಾಗುವ ಜೀವಗಳೂ ಕೂಡ ನಮ್ಮವರೇ ಆಗಿರಬಹುದು ಎನ್ನುವ ಪ್ರಜ್ಞೆಯನ್ನು ಮೂಡಿಸುವ ಚಂದದ ಪ್ರಯತ್ನ. ಯುವ ನಿರ್ದೇಶಕ ಧೀರಜ್ ಬೆಳ್ಳಾರೆ ನಿರ್ದೇಶನದ ಈ ಕಿರುಚಿತ್ರ ಬರೀ ಐದೇ ನಿಮಿಷದಲ್ಲಿ ಅಗಾಧವಾದುದನ್ನು ಹೇಳುತ್ತದೆ.

ಇಡೀ ಚಿತ್ರದಲ್ಲಿ ಕತೆಗಿಂತಲೂ ಜಾಸ್ತಿ ಕಾಡುವುದು ಆಯಾ ದೃಶ್ಯಗಳಿಗೆ ಹಿನ್ನೆಲೆಯಾಗಿ ಸುರಿಯುತ್ತಲೇ ಇರುವ ಮಳೆಯಂತಹ ಸಂಗೀತ. ಮಾರ್ವೆಲ್ ಕ್ರಿಸ್ಟನ್ ಡಿಸೋಜಾ ಅವರ ಸಂಗೀತ ಮತ್ತು ಸ್ತುತಿ ಪ್ರಭು, ವಸುಂಧರಾ ಹರೀಶ್ ಶೆಟ್ಟಿ ಅವರ ಹಿನ್ನೆಲೆ ಗಾಯನ ಬಹುಹೊತ್ತಿನವರೆಗೂ ಕಿವಿಯಲ್ಲಿ ಗುನುಗುತ್ತದೆ. ರೇವಂತ್ ಅವರ ಕ್ಯಾಮರಾ ವರ್ಕ್ ಕೂಡ ಚೆನ್ನಾಗಿದೆ. ಮುಖ್ಯ ಪಾತ್ರಗಳು  ಪೂರ್ಣವಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುವುದಿಲ್ಲವಾದರೂ ಕಾಡುತ್ತದೆ. ಮುಖ್ಯ ಪಾತ್ರಗಳಲ್ಲಿ ನರಸಿಂಹ ಭಕ್ತ,ಮಂಜುನಾಥ್, ಪೂರ್ವಿಕ್ ಶೆಟ್ಟಿ, ಸ್ವಾತಂತ್ರ್ಯ ನಟಿಸಿದ್ದಾರೆ. ಚಿತ್ರದ ಕ್ಯಾಮರಾ ವರ್ಕ್ ಇನ್ನಷ್ಟು ಸೃಜನಶೀಲವಾಗಿದ್ದರೆ ಬಹಳಷ್ಟು ಕಾಡುತ್ತಿತ್ತೇನೋ ಅನ್ನಿಸುತ್ತದೆ.ಆದರೂ ತಂಡದ ಮೊದಲ ಪ್ರಯತ್ನ ಮೆಚ್ಚುವಂತಿದೆ.

ಅಂತೂ ಸಿಂಪಲ್ಲಾಗ್ ಕಾಡೋ “ಹೀಗೊಂದು ಕತೆ”ಯನ್ನು ಹಾಗೇ ಒಂದು ಸಲ ನೋಡಿ ಬಿಡಿ. ಲಿಂಕ್ ಇಲ್ಲಿದೆ.