ಹೆಬ್ರಿ: ಕ್ಷುಲ್ಲಕ ಕಾರಣಕ್ಕಾಗಿ ಅಣ್ಣನೋರ್ವ ತನ್ನ ತಮ್ಮನನ್ನೇ ಹೊಡೆದು ಬಾವಿಗೆ ಎಸೆದು ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಇನ್ನೋರ್ವ ಸಹೋದರ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜ.13ರ ಬೆಳಿಗ್ಗೆ 8 ಗಂಟೆಯಿಂದ ಜ. 14ರ ಬೆಳಿಗ್ಗೆ 9:00 ಗಂಟೆಯ ಮಧ್ಯಾವಧಿಯಲ್ಲಿ ಶಿವಪುರ ಗ್ರಾಮದ ಕಾಳಾಯಿ ಮುಳ್ಳುಗುಡ್ಡೆ ನಿವಾಸಿ ರವಿರಾಜ್ ಶೆಟ್ಟಿಗಾರ್ ಅವರು ಮನೆಯ ಹತ್ತಿರದ ಆವರಣವಿಲ್ಲದ ಬಾವಿಯಲ್ಲಿ ನೀರು ತೆಗೆಯಲು ಹೋದಂತಹ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯೊಳಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು ಎನ್ನಲಾಗಿದೆ.
ಆದರೆ ಮೃತರ ಇನ್ನೋರ್ವ ಸಹೋದರ ಪರ್ಕಳ 80 ಬಡಗುಬೆಟ್ಟು ಕೆಳಕಬ್ಯಾಡಿ ನಿವಾಸಿ ಜಯರಾಮ ಶೆಟ್ಟಿಗಾರ್ ಅವರು ರವಿರಾಜ್ ಶೆಟ್ಟಿಗಾರ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಮನೆಯ ಬಳಿ ಇರುವ ಕೋಣೆಯ ಮಾಡನ್ನು ಕಿತ್ತು ಹಾಕಿರುವ ವಿಚಾರದಲ್ಲಿ ರವಿರಾಜ್ ಶೆಟ್ಟಿಗಾರ್ ಹಾಗೂ ಶಂಕರನಾರಾಯಣ ಶೆಟ್ಟಿಗಾರ್ ಗೆ ವೈಮನಸ್ಸು ಉಂಟಾಗಿತ್ತು. ಇದೇ ವಿಚಾರದಲ್ಲಿ ಶಂಕರನಾರಾಯಣ ತನ್ನ ತಮ್ಮ ರವಿರಾಜ್ ನನ್ನು ಕೊಲೆ ಮಾಡಿರುವ ಸಂಶಯವಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅದರಂತೆ ಹೆಬ್ರಿ ಠಾಣೆಯ ಪಿಎಸ್ ಐ ಮಹೇಶ್ ಟಿ.ಎಮ್. ಸಮ್ಮುಖದಲ್ಲಿ ನಡೆದ ಶವ ಪರೀಕ್ಷೆಯ ವೇಳೆ ಮೃತರ ತಲೆಯ ಹಿಂಬದಿಗೆ ಯಾವುದೋ ಹರಿತವಾದ ಆಯಧದಿಂದ ಬಲವಾಗಿ ಕಡಿದ ಪರಿಣಾಮ ಉಂಟಾದ ರಕ್ತ ಗಾಯಗಳು ಕಂಡುಬಂದಿದೆ. ಶವ ಪರೀಕ್ಷೆಯ ವೇಳೆ ಹಾಜರಿದ್ದ ಪಂಚಾಯತುದಾರರು ಕೂಡ ರವಿರಾಜ ಶೆಟ್ಟಿಗಾರರನ್ನು ಯಾವುದೋ ಹರಿತವಾದ ಆಯಧದಿಂದ ಯಾರೋ ಬಲವಾಗಿ ಕಡಿದು ಬಾವಿಗೆ ದೂಡಿ ಹಾಕಿ ಕೊಲೆ ಮಾಡಿರುವುದಾಗಿ ಸಂಶಯ ವ್ಯಕ್ತಪಡಿಸಿದ್ದಾರೆ.
ಜಯರಾಮ್ ಶೆಟ್ಟಿಗಾರ್ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಹೆಬ್ರಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.