ಕೆ.ಎಂ.ಸಿ ಆಸ್ಪತ್ರೆ: ವಿಶ್ವ ಹೃದಯ ದಿನದ ಅಂಗವಾಗಿ ಹೃದಯ ಆರೋಗ್ಯ ಜಾಗೃತಿ ಕಲಾ ಶಿಲ್ಪ ಅನಾವರಣ

ಮಣಿಪಾಲ: ಪ್ರತಿ ವರ್ಷ ಸೆಪ್ಟೆಂಬರ್ 29 ಅನ್ನು ವಿಶ್ವ ಹೃದಯ ದಿನವನ್ನಾಗಿ ಆಚರಿಸಲಾಗುತ್ತದೆ. ಹೃದಯ ರಕ್ತನಾಳದ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ, ಇದು ಪ್ರಪಂಚದ ಎಲ್ಲಾ ಸಾಂಕ್ರಾಮಿಕವಲ್ಲದ ರೋಗಗಳ ಪಾಲಿನ ಅರ್ಧದಷ್ಟಿದೆ. ವಿಶ್ವ ಹೃದಯ ದಿನದ 2022 ರ ಘೋಷ ವಾಕ್ಯ “ಪ್ರತಿ ಹೃದಯಕ್ಕಾಗಿ ಹೃದಯವನ್ನು ಬಳಸಿ” ಎನ್ನುವುದಾಗಿದೆ.

ವಿಶ್ವ ಹೃದಯ ದಿನದ ಅಂಗವಾಗಿ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದ್ರೋಗ ವಿಭಾಗ, ಹೃದಯ ರಕ್ತನಾಳ ಮತ್ತು ಎದೆಗೂಡಿನ ಶಸ್ತ್ರಚಿಕಿತ್ಸಾ ವಿಭಾಗ ಮತ್ತು ಸಮುದಾಯ ವೈದ್ಯಕೀಯ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಹೃದಯದ ಆರೋಗ್ಯದ ಅರಿವು ಮೂಡಿಸಲು ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದಲ್ಲಿ ಹೃದಯ ಆರೋಗ್ಯ ಜಾಗೃತಿ ಕಲಾ ಶಿಲ್ಪ ಅನಾವರಣ ಮತ್ತು ಸಾರ್ವಜನಿಕರಿಗೆ ಉಚಿತ ಹೃದಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

ಕರಾವಳಿ ಭದ್ರತಾ ಪೊಲೀಸ್ ಅಧೀಕ್ಷಕ ಅಬ್ದುಲ್ ಅಹದ್, ಹೃದಯ ಆರೋಗ್ಯ ಜಾಗೃತಿ ಶಿಲ್ಪವನ್ನು ಅನಾವರಣಗೊಳಿಸಿ ಮಾತನಾಡಿ, ನಮ್ಮ ಕುಟುಂಬದಲ್ಲಿ ನಮ್ಮನ್ನು ಅವಲಂಬಿತರಾಗಿ ಬಹಳಷ್ಟು ಜನರಿರುತ್ತಾರೆ. ವ್ಯಕ್ತಿಯ ಅಕಾಲಿಕ ಮರಣ ಸಾಕಷ್ಟು ತೊಂದರೆಯನ್ನು ಉಂಟು ಮಾಡುತ್ತದೆ. ಆದ್ದರಿಂದ ಕಾಲ ಕಾಲಕ್ಕೆ ನಮ್ಮ ಹೃದಯ ತಪಾಸಣೆ ಮಾಡುವುದರ ಮೂಲಕ ಹೃದಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.

ಕೆಎಂಸಿ ಆಸ್ಪತ್ರೆಯ ಡೀನ್ ಡಾ ಶರತ್ ಕುಮಾರ್ ರಾವ್ ಹೃದಯ ಆರೋಗ್ಯ ತಪಾಸಣಾ ಪ್ಯಾಕೇಜುಗಳನ್ನು ಬಿಡುಗಡೆ ಮಾಡಿ ಮಾತನಾಡಿ, ವ್ಯಕ್ತಿ ಜೀವಂತವಾಗಿರಲು ಹೃದಯವು ಒಂದು ಯಂತ್ರದ ತರಹ ಕೆಲಸ ಮಾಡುತ್ತದೆ ಮತ್ತು ಇದು ದೇಹದ ಎಲ್ಲ ಜೀವಕೋಶಗಳಿಗೆ ರಕ್ತ , ಆಮ್ಲಜನಕ ಮತ್ತು ಪೌಷ್ಟಿಕಾಂಶಗಳನ್ನು ಪೂರೈಕೆ ಮಾಡುವುದರೊಂದಿಗೆ ರಕ್ತವನ್ನು ಶುದ್ದೀಕರಿಸುವ ಕಾರ್ಯವನ್ನು ಮಾಡುತ್ತದೆ. ಇಂತಹ ಬಹುಮೂಲ್ಯ ಅಂಗವನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು ಎಂದರು.

ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ, ಸಾರ್ವಜನಿಕರ ಬೇಡಿಕೆ ಮೇರೆಗೆ ನಾವು ವಿಶೇಷ ಹೃದಯ ತಪಾಸಣೆ ಪ್ಯಾಕೇಜ್ ಅನ್ನು ರೂ. 3000 ಮತ್ತು ಸುಧಾರಿತ ಹೃದಯ ತಪಾಸಣೆ ಪ್ಯಾಕೇಜ್ 4000 ರೂ. ನಲ್ಲಿ ಪರಿಚಯಿಸುತ್ತಿದ್ದೇವೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಮುಖ್ಯ ನಿರ್ವಹಣಾಧಿಕಾರಿ ಡಾ ಆನಂದ್ ವೇಣುಗೋಪಾಲ್, ಮಲ್ಪೆ ಭದ್ರತಾ ಪೊಲೀಸ್ ನಿರೀಕ್ಷಕ ಡಾ ಶಂಕರ್ ಎಸ್ ಕೆ ಉಪಸ್ಥಿತರಿದ್ದರು.

ವಿಶ್ವ ಹೃದಯ ದಿನದ ಕುರಿತು ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್ ಅವಲೋಕನ ನೀಡಿದರು. ಶ್ರೀನಾಥ್ ಮಣಿಪಾಲ ಮತ್ತು ರವಿ ಹಿರೇಬೆಟ್ಟು ಪರಿಸರ ಸ್ನೇಹಿ ವಸ್ತುಗಳಿಂದ ಶಿಲ್ಪವನ್ನು ತಯಾರಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಉಚಿತ ಮಧುಮೇಹ ಮತ್ತು ರಕ್ತದ ಒತ್ತಡ ತಪಾಸಣೆ, ಇ ಸಿ ಜಿ ಮತ್ತು ವೈದ್ಯರೊಂದಿಗೆ ಸಮಾಲೋಚನೆ ನಡೆಸಲಾಯಿತು.

ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ ಪದ್ಮಕುಮಾರ್ ಸ್ವಾಗತಿಸಿ, ಹೃದ್ರೋಗ ತಪಾಸಣೆ ಪ್ಯಾಕೇಜ್‌ಗಳ ಕುರಿತು ಮಾಹಿತಿ ನೀಡಿದರು. ಹೃದಯನಾಳ ಮತ್ತು ಎದೆಗೂಡಿನ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಗಣೇಶ್ ಕಾಮತ್ ವಂದಿಸಿದರು. ಡಾ ಈಶ್ವರಿ ಆಚಾರ್ ನಿರೂಪಿಸಿದರು.