ಪ್ಲಾಸ್ಟಿಕ್ ಮಯವಾಯಿತು ದೇವಭೂಮಿ! ಕೇದಾರನಾಥದ ರಸ್ತೆಯುದ್ದಕ್ಕೂ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಕಸದ ರಾಶಿಯ ಸ್ವಾಗತ!!

ಉತ್ತರಾಖಂಡ: ಹಿಂದೂಗಳ ಪವಿತ್ರ ಕ್ಷೇತ್ರ, ದೇವ ಭೂಮಿಯೆಂದೇ ಪ್ರಸಿದ್ದವಾದ ಉತ್ತರಾಖಂಡದಲ್ಲಿಂದು ಎಲ್ಲಿ ನೋಡಿದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಕಸದ ರಾಶಿ! ಕೇದಾರನಾಥನ ದರ್ಶನಕ್ಕಾಗಿ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಸ್ವಚ್ಛತೆಯನ್ನು ನಿರ್ವಹಣೆ ಮಾಡುವಲ್ಲಿ ನಾಗರಿಕರ ಮತ್ತು ಸ್ಥಳೀಯ ಆಡಳಿತದ ಅಸಡ್ಡೆ ಢಾಳಾಗಿ ಎದ್ದು ಕಾಣುತ್ತಿದೆ. ಚಾರ್ ಧಾಮ್ ಯಾತ್ರೆಗೆಂದು ಬರುವ ಭಕ್ತಾದಿಗಳಿಗೆ ಪ್ಲಾಸ್ಟಿಕ್ ಮತ್ತು ಕಸದ ರಾಶಿಯ ದರ್ಶನ ಭಾಗ್ಯವೂ ಲಭ್ಯವಾಗುತ್ತಿರುವುದು ಕೇದಾರನಾಥನ ದೌರ್ಭಾಗ್ಯವೇ ಸರಿ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಗರ್ವಾಲ್ ಕೇಂದ್ರೀಯ ವಿಶ್ವವಿದ್ಯಾಲಯ ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ ಎಂಎಸ್ ನೇಗಿ, “ಕೇದಾರನಾಥದಂತಹ ಸೂಕ್ಷ್ಮ ಪ್ರದೇಶದಲ್ಲಿ ಪ್ಲಾಸ್ಟಿಕ್ ಕಸ ರಾಶಿ ಬಿದ್ದಿರುವುದು ನಮ್ಮ ಪರಿಸರಕ್ಕೆ ಅಪಾಯಕಾರಿ. ಇದು ಭೂಕುಸಿತಕ್ಕೆ ಕಾರಣವಾಗುವ ಸವೆತಕ್ಕೆ ಕಾರಣವಾಗುತ್ತದೆ. ನಾವು 2013 ರ ದುರಂತವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ಜಾಗರೂಕರಾಗಿರಬೇಕು” ಎಂದಿದ್ದಾರೆ.

“ಪ್ರವಾಸಿಗರ ಒಳಹರಿವು ಹಲವಾರು ಪಟ್ಟು ಹೆಚ್ಚಾಗಿದೆ, ಇದರಿಂದಾಗಿ ನಮ್ಮಲ್ಲಿ ಸರಿಯಾದ ನೈರ್ಮಲ್ಯ ಸೌಲಭ್ಯಗಳಿಲ್ಲದ ಕಾರಣ ಪ್ಲಾಸ್ಟಿಕ್ ಕಸ ಹೆಚ್ಚಾಗಿದೆ. ಇದು ನೈಸರ್ಗಿಕ ಸಸ್ಯವರ್ಗದ ಮೇಲೆ ಪರಿಣಾಮ ಬೀರಿದೆ. ಔಷಧೀಯ ಸಸ್ಯಗಳೂ ನಶಿಸುತ್ತಿವೆ” ಎಂದು HAPPRC ನಿರ್ದೇಶಕ ಪ್ರೊ. ಎಂಸಿ ನೌಟಿಯಾಲ್ ಹೇಳಿದ್ದಾರೆ.

ದಿನವೊಂದಕ್ಕೆ ಸಾವಿರಾರು ಜನರು ಭೇಟಿ ನೀಡುವ, ಹಿಂದೂಗಳಿಗೆ ಪವಿತ್ರ ಧಾರ್ಮಿಕ ಸ್ಥಳವಾಗಿರುವ ಕೇದಾರನಾಥದಲ್ಲಿ ತ್ಯಾಜ್ಯ ನಿರ್ವಹಣೆಯ ಬಗ್ಗೆ ಅಸಡ್ಡೆ ತೋರುತ್ತಿರುವುದು ಪರಿಸರ ಪ್ರೇಮಿಗಳನ್ನು ಮತ್ತು ಭಕ್ತವರ್ಗವನ್ನು ಕೆರಳಿಸಿದ್ದು, ಜನರು ಸ್ಥಳೀಯ ಆಡಳಿತದ ಮೇಲೆ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಕೇದಾರನಾಥ ಪರಿಸರವು ಮೋಕ್ಷಧಾಮವಾಗಿದ್ದು, ಅದನ್ನು ಪಿಕ್ ನಿಕ್, ಇನ್ಸ್ಟಾಗ್ರಾಂ ರೀಲ್, ವೀಡಿಯೋ ಬ್ಲಾಗಿಂಗ್ ಗಾಗಿ ಬಳಸುವ ಬಗ್ಗೆಯೂ ಆಕ್ಷೇಪಗಳು ಕೇಳಿ ಬರುತ್ತಿವೆ. ಕೇದಾರನಾಥಕ್ಕೆ ಬರುವ ಪ್ರವಾಸಿಗರು ಮತ್ತು ಸ್ಥಳೀಯ ಆಡಳಿತ ಸ್ವಚ್ಛತೆಯ ಬಗ್ಗೆ ಗಮನಹರಿಸದಿದ್ದಲ್ಲಿ ಪರಿಸರ ಹಾನಿಯ ಜೊತೆಗೆ, ಪ್ರಾಣ ಹಾನಿಯೂ ಆಗಲಿದೆ ಎನ್ನುವ ಎಚ್ಚರಿಕೆಯ ಕರೆ ಘಂಟೆ ಜಾಲತಾಣಗಳಲ್ಲಿ ಮೊಳಗುತ್ತಿದೆ.

ಚಿತ್ರ ಮತ್ತು ವರದಿ ಕೃಪೆ: ಎ ಎನ್ ಐ

source: https://twitter.com/ANINewsUP/status/1528224219636457472