ಅಯ್ಯೋ ನನ್ ಕೂದಲು ಉದುರುತ್ತಿದೆ ಏನ್ ಮಾಡ್ಲಿ ಅಂತಿದ್ದೀರಾ? ಹಾಗಾದ್ರೆ ಇಲ್ಲಿದೆ ಸಿಂಪಲ್ ಮನೆ ಮದ್ದು

              ಸಿಲ್ವಿಯಾ ಕೊಡ್ದೆರೋ

ನಮ್ಮ ಲೈಫ್ ಸ್ಟೈಲ್ ನ ಮೇಲೆ ನಮ್ಮ ಆರೋಗ್ಯ ನಿಂತಿರುತ್ತದೆ. ಈಗಿನ ಆಹಾರ ಕ್ರಮ, ನಾವಿರುವ ಕಲ್ಮಶ ಪರಿಸರ, ಔಷಧಿಗಳ ಅಡ್ಡ ಪರಿಣಾಮ ಇವೆಲ್ಲಾ ಆರೋಗ್ಯದ ಸಮಸ್ಯೆಯನ್ನುಂಟು ಮಾಡುತ್ತದೆ. ಅದರಲ್ಲೂ ಈಗ ಹೆಚ್ಚಿನ ಜನರಲ್ಲಿ ಕಂಡು ಬರುವ ಸಮಸ್ಯೆ ಎಂದರೆ ಕೂದಲು ಉದುರುವಿಕೆ.

ಕೂದಲು ಒಂದು ಪ್ರೋಟೀನ್ ತಂತುವಿನಿಂದ ಬೆಳೆಯುವುದರಿಂದ ಆರೋಗ್ಯಯುತ ಆಹಾರ ಕ್ರಮ ಹಾಗೂ ಕೂದಲಿಗೆ ಬೇಕಾದಂತಹ ಪ್ರೋಟೀನ್ ಗಳನ್ನು ಸೇವಿಸುವುದರಿಂದ ಹಾಗೂ ಇದರ ಜತೆಗೆ ಕೆಲವೊಂದು ಮನೆಮದ್ದನ್ನು ಅನುಸರಿಸುವುದರಿಂದ ಕೂದಲು ಉದುರುವಿಕೆಯನ್ನು ನಿವಾರಿಸಬಹುದು ಹಾಗೂ ಸುಂದರ, ಕಾಂತಿಯುತ ಕೂದಲನ್ನು ಪಡೆಯಬಹುದು.

ಅದಕ್ಕಾಗಿಯೇ ಇಂದು ಮನೆಯಲ್ಲೇ ಕೂದಲ ಆರೈಕೆಯನ್ನು ಯಾವ ರೀತಿ ಮಾಡಬಹುದು ಎಂದು ತಿಳಿಸುತ್ತಿದ್ದೇವೆ. ನೀವೂ ಒಮ್ಮೆ ಪ್ರಯತ್ನಿಸಿ.

ನೆಲ್ಲಿಕಾಯಿ:

ಕೂದಲು ಉದುರುವಿಕೆ ಮತ್ತು ಬಿಳಿ ಕೂದಲು ನಿವಾರಣೆಗೆ, ನೆಲ್ಲಿಕಾಯಿಗೆ ನೀರನ್ನು ಬೆರೆಸಿ ಪೇಸ್ಟ್ ರೀತಿಯಲ್ಲಿ ರುಬ್ಬಿಕೊಂಡು ಕೂದಲಿನ ಬುಡಕ್ಕೆ ಹಚ್ಚಿ ಬೆರಳಿನಿಂದ ಚೆನ್ನಾಗಿ ಮಸಾಜ್ ಮಾಡಿ. ನಂತರ 1 ಗಂಟೆ ಬಿಟ್ಟು ಉಗುರುಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿ.

ಕೂದಲಿನ ಹೊಳಪು ಹೆಚ್ಚಲು ನಿಂಬೆರಸ:

ಕೂದಲನ್ನು ಚೆನ್ನಾಗಿ ತೊಳೆದ ನಂತರ ಕೊನೆಗೆ ನೀರಿನಲ್ಲಿ ಸ್ವಲ್ಪ ನಿಂಬೆರಸವನ್ನು ಬೆರೆಸಿ ಕೂದಲನ್ನು ತೊಳೆಯುವುದು.

ಉದ್ದ ಹಾಗೂ ನೈಸರ್ಗಿಕ ಕೂದಲು ಹೊಂದಲು ದಾಸವಾಳದ ಹೂವು:

ಸ್ವಲ್ಪ ದಾಸವಾಳದ ಹೂವಿನ ಎಸಳನ್ನು ಜಜ್ಜಿ ಅದಕ್ಕೆ ಸ್ವಲ್ಪ ತೆಂಗಿನೆಣ್ಣೆಯನ್ನು ಬೆರೆಸಿ ಕೂದಲಿಗೆ ಹಚ್ಚಿ 3 ರಿಂದ 4 ಗಂಟೆ ಬಿಟ್ಟು ಸ್ನಾನ ಮಾಡಬೇಕು. ಇದರಿಂದ ಕೂದಲು ಬೇಗನೆ ಉದ್ದ ಬೆಳೆಯುತ್ತದೆ ಹಾಗೂ ಕಪ್ಪಾಗಿರುತ್ತದೆ.

 ತಲೆಹೊಟ್ಟು ನಿವಾರಣೆಗೆ ಮೆಂತ್ಯೆಕಾಳಿನ ಪೇಸ್ಟ್:

ರಾತ್ರಿಯಿಡೀ ನೆನೆಸಿದ ಮೆಂತ್ಯೆಕಾಳನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ಪೇಸ್ಟ್ ತಯಾರಿಸಿಕೊಳ್ಳಿ. ಇದಕ್ಕೆ ಸ್ವಲ್ಪ ನಿಂಬೆರಸವನ್ನು ಹಿಂಡಿ ತಲೆಯ ಬುಡಕ್ಕೆ ಚೆನ್ನಾಗಿ ಮಸಾಜ್ ಮಾಡಿಕೊಂಡು 2 ಗಂಟೆ ಬಿಟ್ಟು ಸ್ನಾನ ಮಾಡಿ.

ಸೀಳು ಕೂದಲು ನಿವಾರಣೆಗೆ ತೆಂಗಿನಹಾಲು:

ತೆಂಗಿನ ತುರಿಯನ್ನು ರುಬ್ಬಿ, ಹಿಂಡಿ ದಪ್ಪನೆ ಹಾಲು ತೆಗೆದು ಕೂದಲ ಬುಡದಿಂದ ಹಿಡಿದು ಕೂದಲ ತುದಿಯವರೆಗೆ ಹಚ್ಚಿ ನಂತರ ಕೂದಲನ್ನು ತೊಳೆಯಿರಿ.

«ಸಿಲ್ವಿಯಾ ಕೊಡ್ದೆರೋ