ಆರೋಗ್ಯ ಕಾರ್ಡ್ ಮೂಲಕ ಡಾ. ಜಿ ಶಂಕರ್ ಅವರಿಂದ ಆರೋಗ್ಯ ಕ್ರಾಂತಿ: ರಮೇಶ್ ಕಾಂಚನ್

ಉಡುಪಿ: ಯಾವುದೇ ಜಾತಿ, ಧರ್ಮ ಬೇಧವಿಲ್ಲದೇ ಜಿಲ್ಲೆಯ ಜನರಿಗೆ ಡಾ. ಜಿ. ಶಂಕರ್ ಅವರು ಆರೋಗ್ಯ ಕಾರ್ಡ್ ವಿತರಿಸುತ್ತಿದ್ದು, ಬಡವರ ಪಾಲಿಗೆ ಇದು ಸಂಜೀವಿನಿಯಾಗಿದೆ. ಲಕ್ಷಾಂತರ ಕುಟುಂಬಗಳಿಗೆ ಈ ಕಾರ್ಡ್ ಮೂಲಕ ಅನುಕೂಲವಾಗಿದ್ದು, ಆ ಮೂಲಕ ಡಾ. ಜಿ ಶಂಕರ್ ಅವರು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದಾರೆ ಎಂದು ನಗರಸಭೆಯ ವಿಪಕ್ಷ ನಾಯಕ ರಮೇಶ್ ಕಾಂಚನ್ ಅಭಿಪ್ರಾಯಪಟ್ಟಿದ್ದಾರೆ.

ಚಿಟ್ಪಾಡಿ ಶಾರದಾಂಬ ದೇವಸ್ಥಾನದಲ್ಲಿ ಶುಕ್ರವಾರ ಡಾ. ಜಿ ಶಂಕರ್ ಆರೋಗ್ಯ ಕಾರ್ಡ್ ಗಳನ್ನು ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು.
ಯಾವುದೇ ಜಾತಿ ಸಂಘಟನೆಯಾಗಲಿ ಅಥವಾ ಉದ್ಯಮಿಯಾಗಲಿ ಇಂತಹ ಮಹತ್ಕಾರ್ಯ ಮಾಡಿಲ್ಲ. ಜಿ.ಶಂಕರ್ ಅವರು ಯಾವುದೇ ಜಾತಿ, ಧರ್ಮವನ್ನು ನೋಡದೆ ಬಡವರಿಗೆ ಆಸ್ಪತ್ರೆಯಲ್ಲಾಗುವ ಹಣದ ತೊಂದರೆಯನ್ನು ಅರಿತು ಕಾರ್ಡ್ ವಿತರಿಸುವ ಕಾರ್ಯ ಕೈಗೊಂಡಿದ್ದಾರೆ. ಈ ಮೂಲಕ ಜಿ.ಶಂಕರ್ ಅವರು ಅನೇಕ ಬಡ ರೋಗಿಗಳ ಹಾಗೂ ಕುಟುಂಬದವರ ಕಣ್ಣೀರನ್ನು ಒರೆಸುವ ಕೆಲಸ ಮಾಡಿದ್ದಾರೆ. ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.

ವೆಸ್ಟ್ ಕೋಸ್ಟ್ ಗ್ಯಾಸ್ ಏಜನ್ಸಿಯ ಜನರಲ್ ಮ್ಯಾನೇಜರ್ ದಿನೇಶ್ ಬಂಗೇರಾ, ಪವರ್ ಸಂಸ್ಥೆಯ ಸದಸ್ಯೆ ರೇಸ್ಮಾ ಸಯ್ಯದ್ ಫರೀದ್, ಸಹಕಾರಿ ಧುರೀಣೆ ಇಂದು ರಮಾನಂದ ಭಟ್, ಮಾಜಿ ನಗರಸಭಾ ಸದಸ್ಯ ಸತೀಶ್ ಪುತ್ರನ್ ಉಪಸ್ಥಿತರಿದ್ದರು. ಗೀತಾ ಕಾರ್ಯಕ್ರಮ ನಿರೂಪಿಸಿದರು. ದಿವ್ಯ ವಂದಿಸಿದರು.